Site icon Vistara News

Akash Anand: ಯಾರಿವರು ಮಾಯಾವತಿ ಉತ್ತರಾಧಿಕಾರಿ ಆಕಾಶ್ ಆನಂದ್?

Akash anand is BSP Leader mayawati's political heir

ನವದೆಹಲಿ: ಉತ್ತರ ಪ್ರದೇಶ (Uttar Pradesh) ಮತ್ತು ಉತ್ತರಾಖಂಡ (Uttarakhand) ಹೊರತುಪಡಿಸಿ ಬಹುಜನ ಸಮಾಜ ಪಕ್ಷದ (BSP) ಉತ್ತರಾಧಿಕಾರಿಯಾಗಿ ಮಾಯಾವತಿ (Mayawati) ತಮ್ಮ ಸೋದರಳಿಯ ಆಕಾಶ್ ಆನಂದ್ (Akash Anand) ಅವರನ್ನು ಭಾನುವಾರ ಘೋಷಿಸಿದ್ದಾರೆ. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಆಕಾಶ್ ಆನಂದ್ (ಮಾಯಾವತಿ ಅವರ ಸೋದರಳಿಯ) ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿದ್ದಾರೆ” ಎಂದು ಪಕ್ಷದ ಮುಖಂಡ ಉದಯ್​ವೀರ್ ಸಿಂಗ್ ಸುದ್ದಿ ಸಂಸ್ಥೆ ಎಎನ್ಐಗೆ ಮಾಹಿತಿ ನೀಡಿದ್ದಾರೆ. ಪಕ್ಷದೊಳಗೆ ಆಕಾಶ್ ಆನಂದ್ ಬಗ್ಗೆ ಪರಿಚಯವಿತ್ತು. ಆದರೆ, ದೇಶದ ರಾಜಕಾರಣದಲ್ಲಿ ಅವರು ಹೆಸರು ಅಷ್ಟೇನೂ ಚಿರಪರಿಚಿತವಾಗಿರಲಿಲ್ಲ.

ಆಕಾಶ್ ಆನಂದ್ ಬಿಎಸ್‌ಪಿಯ ರಾಷ್ಟ್ರೀಯ ಸಂಯೋಜಕರಾಗಿದ್ದಾರೆ ಮತ್ತು ಇತ್ತೀಚೆಗೆ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಬಿಎಸ್‌ಪಿಯ ಉಸ್ತುವಾರಿಯಾಗಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಬಿಎಸ್‌ಪಿಗಾಗಿ ವ್ಯಾಪಕವಾಗಿ ಕೆಲಸ ಮಾಡಿದರು. ದಲಿತರು, ಧಾರ್ಮಿಕ ಅಲ್ಪಸಂಖ್ಯಾತರು, ಒಬಿಸಿಗಳು ಮತ್ತು ಬುಡಕಟ್ಟು ಜನಾಂಗದವರ ಸಮಸ್ಯೆಗಳನ್ನು ಒಳಗೊಂಡ ಪಕ್ಷದ ಚುನಾವಣಾ ಪ್ರಚಾರವನ್ನು ತಯಾರಿಸಲು ನಿಯೋಗದ ಭಾಗವಾಗಿ ಮಾಯಾವತಿ ಅವರನ್ನು ನಿಯೋಜಿಸಿದ್ದರು.

2017ರಲ್ಲಿ ರಾಜಕೀಯ ಪ್ರವೇಶಿಸಿದ ಆಕಾಶ್

ಆಕಾಶ್ ಆನಂದ್ ತಮ್ಮ 22ನೇ ವಯಸ್ಸಿನಲ್ಲಿ 2017ರಲ್ಲಿ ರಾಜಕಾರಣವನ್ನು ಪ್ರವೇಶಿಸಿದರು. ಲಂಡನ್‌ನಲ್ಲಿ ಓದಿರುವ ಆಕಾಶ್ ಎಂಬಿಎ ಪದವೀಧರರು. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾಯಾವತಿಯವರೊಂದಿಗೆ ಅವರ ರಾಜಕೀಯ ಚೊಚ್ಚಲ ಪ್ರವೇಶವಾಗಿತ್ತು, ಅಲ್ಲಿ ಅವರು ಅಖಿಲೇಶ್ ಯಾದವ್ ಮತ್ತು ಅಜಿತ್ ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಂಡರು.

2019ರಲ್ಲಿ ಆಕಾಶ್ ಆನಂದ್ ಉತ್ತರ ಪ್ರದೇಶದ ಆಗ್ರಾದಲ್ಲಿ ತಮ್ಮ ಮೊದಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಆಗ ಬಿಎಸ್‌ಪಿ ಮಹಾಘಟಬಂಧನ್‌ನ ಒಂದು ಭಾಗವಾಗಿತ್ತು, ಇದು 2019 ರ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳದೊಂದಿಗೆ ಅಖಿಲೇಶ್ ಯಾದವ್ ಮತ್ತು ಮಾಯಾವತಿ ನೇತೃತ್ವದಲ್ಲಿ ರಚನೆಯಾದ ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧಿ ಬಣವಾಗಿತ್ತು.

ಪಾದಯಾತ್ರೆ ಸಂಘಟಿಸಿದ್ದ ಆಕಾಶ್ ಆನಂದ್

ಸಾಮಾನ್ಯವಾಗಿ ಬಹುಜನ ಸಮಾಜ ಪಾರ್ಟಿಯ ಪಾದಯಾತ್ರೆಗಳಂಥ ರಾಜಕೀಯ ಚಟುವಟಿಕೆಗಳನ್ನು ನಡೆಸುವುದಿಲ್ಲ. ಆದರೆ, ಆಕಾಶ್ ಆನಂದ್ ಅವರು ಈ ಪದ್ಧತಿಯನ್ನು ಮುರಿದು ಇದೇ ಮೊದಲ ಬಾರಿಗೆ, 14 ದಿನಗಳ ಸರ್ವಜನ ಹಿತಾಯ, ಸರ್ವಜನ ಸುಖಾಯ ಸಂಕಲ್ಪ ಯಾತ್ರೆಯನ್ನು ಕೈಗೊಂಡಿದ್ದರು. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಮತ್ತು ರಾಜಸ್ಥಾನದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅವರು ಈ ಯಾತ್ರೆ ನಡೆಸಿದ್ದರು.

ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ದೀರ್ಘಾವಧಿಗೆ ಸಿದ್ಧ ಮಾಡುತ್ತಿದ್ದರು. ಮಾಯಾವತಿಯವರ ಸಹೋದರ ಆನಂದ್ ಕುಮಾರ್ ಅವರ ಪುತ್ರರಾಗಿರುವ 28 ವರ್ಷದ ಆಕಾಶ್ ಆನಂದ್ ಬಿಎಸ್ಪಿ ವಲಯಗಳಲ್ಲಿ ಚಿರಪರಿಚಿತ ಹೆಸರು. ಇನ್‌ಸ್ಟಾಗ್ರಾಮದಲ್ಲಿ ಅವರು ತಮ್ಮನ್ನು ತಾವು “ಬಾಬಾ ಸಾಹೇಬ್ ಅವರ ದೃಷ್ಟಿಯ ಯುವ ಬೆಂಬಲಿಗರು. ನಾನು ಶಿಕ್ಷಣ, ಸಬಲೀಕರಣ ಮತ್ತು ಸಮಾನತೆಗಾಗಿ ನಿಲ್ಲುತ್ತೇನೆ” ಎಂದು ಕರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Mayawati : ಸೋದರಳಿಯನನ್ನೇ ಉತ್ತರಾಧಿಕಾರಿಯಾಗಿ ಘೋಷಿಸಿದ ಬಿಎಸ್​ಪಿ ನಾಯಕಿ ಮಾಯಾವತಿ

Exit mobile version