Site icon Vistara News

ಮಾರ್ಚ್‌ 15ರಿಂದ ಆರ್‌ಎಸ್‌ಎಸ್‌ ಅಖಿಲ ಭಾರತೀಯ ಪ್ರತಿನಿಧಿ ಸಭೆ; ಹೊಸಬಾಳೆ ಮರು ಆಯ್ಕೆ?

Mohan Bhagwat And Dattatreya Hosabale

Akhil Bharatiya Pratinidhi Sabha of RSS to be held on March 15-17 in Nagpur

ಬೆಂಗಳೂರು: ಮಹಾರಾಷ್ಟ್ರದ ನಾಗ್ಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯು (Akhil Bharatiya Pratinidhi Sabha) ಮಾರ್ಚ್‌ 15ರಿಂದ 17ರವರೆಗೆ ನಡೆಯಲಿದೆ. ನಾಗ್ಪುರದ (Nagpur) ರೇಶಿಂ ಬಾಗ್‌ನಲ್ಲಿರುವ ಸ್ಮೃತಿ ಭವನ ಸಮುಚ್ಚಯದಲ್ಲಿ ಆರ್‌ಎಸ್‌ಎಸ್‌ ಪ್ರಮುಖ ಸಭೆ ನಡೆಯಲಿದ್ದು, ಆರ್‌ಎಸ್‌ಎಸ್‌ ಸರಕಾರ್ಯವಾಹ, ಕನ್ನಡಿಗರೂ ಆದ ದತ್ತಾತ್ರೇಯ ಹೊಸಬಾಳೆ ಅವರ ಅವಧಿಯನ್ನು ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಮೂರು ದಿನ ನಡೆಯುವ ಸಭೆಯಲ್ಲಿ 2023-24ನೇ ಸಾಲಿನಲ್ಲಿ ಆರ್‌ಎಸ್‌ಎಸ್‌ ಕೈಗೊಂಡ ಕಾರ್ಯಚಟುವಟಿಕೆಗಳು, ಬೈಠಕ್‌ಗಳು, ಸೇವಾ ಕಾರ್ಯಗಳ ಅವಲೋಕನ ಮಾಡಲಾಗುತ್ತದೆ. ಹಾಗೆಯೇ, 2024-25ನೇ ಸಾಲಿನಲ್ಲಿ ಸಂಘಟನೆಯು ಕೈಗೊಳ್ಳಬೇಕಾದ ಚಟುವಟಿಕೆಗಳು, ಯೋಜನೆಗಳ ಕರಿತು ಚರ್ಚಿಸಲಾಗುತದೆ. ಸರಸಂಘಚಾಲಕ (ಮುಖ್ಯಸ್ಥ) ಮೋಹನ್‌ ಭಾಗವತ್‌ ಹಾಗೂ ಅಖಿಲ ಭಾರತೀಯ ಕಾರ್ಯಕರ್ತರ ಪ್ರವಾಸದ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಆರ್‌ಎಸ್‌ಎಸ್‌ ತಿಳಿಸಿದೆ.

ದತ್ತಾತ್ರೇಯ ಹೊಸಬಾಳೆ ಮರು ಆಯ್ಕೆ?

ಕರ್ನಾಟಕದ ಶಿವಮೊಗ್ಗದವರಾದ ದತ್ತಾತ್ರೇಯ ಹೊಸಬಾಳೆ ಅವರು ಆರ್‌ಎಸ್‌ಎಸ್‌ ಸರಕಾರ್ಯವಾಹರಾಗಿ ಮತ್ತೊಂದು ಅವಧಿಗೆ ಮರು ಆಯ್ಕೆಯಾಗುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದು ತಿಳಿದುಬಂದಿದೆ. 2021ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರನ್ನು ಸರಕಾರ್ಯವಾಹರನ್ನಾಗಿ ಆಯ್ಕೆ ಮಾಡಲಾಗಿತ್ತು. ಈಗ ಅವರನ್ನು ಇನ್ನೊಂದು ಅವಧಿಗೆ ಆಯ್ಕೆ ಮಾಡುವ ಕುರಿತು ನಾಗ್ಪುರದ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: Mohan Bhagawat: ಒಬ್ಬ ವ್ಯಕ್ತಿಯಿಂದ ಭಾರತದ ಏಳಿಗೆ ಅಸಾಧ್ಯ: ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌

ಅಖಿಲ ಭಾರತೀಯ ಪ್ರತಿನಿಧಿ ಸಭೆಯು ಪ್ರತಿ ವರ್ಷ ದೇಶದ ಹಲವೆಡೆ ನಡೆಯುತ್ತದೆ. ಪ್ರತಿ ಮೂರು ವರ್ಷಗಳ ಬಳಿಕ ನಾಗ್ಪುರದಲ್ಲಿ ಸಭೆ ಆಯೋಜಿಸಲಾಗುತ್ತದೆ. ದೇಶದ ಸುಮಾರು 45 ಪ್ರಾಂತ್ಯಗಳ 1,500 ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ. ಮೋಹನ್‌ ಭಾಗವತ್‌, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲ ಸಹ ಸರಕಾರ್ಯವಾಹರು ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version