Site icon Vistara News

Akhilesh Yadav: ಲೋಕಸಭೆ ಚುನಾವಣೆ ಹೊತ್ತಲ್ಲೇ ಅಖಿಲೇಶ್‌ ಯಾದವ್‌ಗೆ ಸಿಬಿಐ ಸಮನ್ಸ್;‌ ಏನಿದು ಕೇಸ್?

Akhilesh Yadav

Even If I Win All 80 Seats In Uttar Pradesh, Do Not Trust EVMs: Says Akhilesh Yadav

ಲಖನೌ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ತಿಂಗಳು ಬಾಕಿ ಇವೆ. ಉತ್ತರ ಪ್ರದೇಶದಲ್ಲಿ ಮುನ್ನಡೆ ಸಾಧಿಸುವ ದಿಸೆಯಲ್ಲಿ ಇಂಡಿಯಾ ಒಕ್ಕೂಟದ (India Bloc) ಕಾಂಗ್ರೆಸ್‌ ಜತೆ ಸಮಾಜವಾದಿ ಪಕ್ಷವು ಮೈತ್ರಿ ಮಾಡಿಕೊಂಡಿದೆ. ಚುನಾವಣೆಗೆ ಈಗಾಗಲೇ ರಣತಂತ್ರ ರೂಪಿಸುತ್ತಿದೆ. ಇದರ ಬೆನ್ನಲ್ಲೇ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ (Akhilesh Yadav) ಅವರಿಗೆ ಸಿಬಿಐ ಸಮನ್ಸ್‌ (CBI Summons) ಜಾರಿ ಮಾಡಿದೆ. ಅಕ್ರಮವಾಗಿ ಗಣಿಗಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಮನ್ಸ್‌ ನೀಡಿದೆ.

ಅಕ್ರಮ ಗಣಿಕಾರಿಕೆ ಪ್ರಕರಣದಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆ (CRPC) ಅಡಿಯಲ್ಲಿ ಸಮನ್ಸ್‌ ಜಾರಿಗೊಳಿಸಿದೆ. ಫೆಬ್ರವರಿ 29ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸೂಚಿಸಿದೆ. ಹಾಗಾಗಿ, ಲೋಕಸಭೆ ಚುನಾವಣೆ ಗೆಲುವಿಗೆ ರಣತಂತ್ರ ರೂಪಿಸುತ್ತಿರುವ ಅಖಿಲೇಶ್‌ ಯಾದವ್‌ ಅವರಿಗೆ ಸಂಕಷ್ಟ ಎದುರಾಗಿದೆ. ಫೆಬ್ರವರಿ 29ರಂದು ಸಿಬಿಐ ವಿಚಾರಣೆಗೆ ಅಖಿಲೇಶ್‌ ಯಾದವ್‌ ಅವರು ಹಾಜರಾಗುತ್ತಾರೋ, ಇಲ್ಲವೋ ಎಂಬುದರ ಕುರಿತು ಇದುವರೆಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಏನಿದು ಪ್ರಕರಣ?

ಅಖಿಲೇಶ್‌ ಯಾದವ್‌ ಅವರು ಉತ್ತರ ಪ್ರೇದೇಶದ ಮುಖ್ಯಮಂತ್ರಿಯಾಗಿದ್ದಾಗ ಅಂದರೆ, 2012ರಿಂದ 2016ರ ಅವಧಿಯಲ್ಲಿ ಹಮೀರ್‌ಪುರ ಜಿಲ್ಲೆಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದಾರೆ ಎಂಬ ಆರೋಪವಿದೆ. ಅಲ್ಲದೆ, ಕಾನೂನುಬಾಹಿರವಾಗಿ ಮರಳು ಗಣಿಗಾರಿಕೆಗೆ ಅನುಮತಿ, ಅಕ್ರಮವಾಗಿ ಮರಳು ಸಾಗಣೆ ಮಾಡುವವರ ಪರವಾನಗಿ ನವೀಕರಣ ಸೇರಿ ಹಲವು ಆರೋಪಗಳು ಎದುರಾಗಿವೆ. ಹಾಗಾಗಿ, ಅಖಿಲೇಶ್‌ ಯಾದವ್‌ ಅವರಿಗೆ ಸಿಬಿಐ ಸಮನ್ಸ್‌ ನೀಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Delhi Liquor Policy Case: ಬಿಆರ್‌ಎಸ್‌ ನಾಯಕಿಗೆ ಸಿಬಿಐ ಸಮನ್ಸ್‌

ಕಾನೂನು ಬಾಹಿರವಾಗಿ ಗಣಿಗಾರಿಕೆಗೆ ಅನುಮತಿ ನೀಡಿದ ಪರಿಣಾಮ ರಾಜ್ಯ ಸರ್ಕಾರದ ಖಜಾನೆಗೆ ಭಾರಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಖನಿಜ ಸಂಪನ್ಮೂಲಗಳನ್ನು ಹೊರತೆಗೆಯಲು ಕೂಡ ಅನುಮತಿ ನೀಡಿರುವುದು ಸಂಪನ್ಮೂಲದ ಹಾನಿಗೆ ಕಾರಣವಾಗಿದೆ. ಇದೇ ಪ್ರಕರಣಕ್ಕೆ ಸಂಬಂದಿಸಿದಂತೆ ಸಿಬಿಐ ಅಧಿಕಾರಿಗಳು 2019ರ ಮೇ 1ರಂದು ಹಮೀರ್‌ಪುರ, ನೊಯ್ಡಾ, ಕಾನ್ಪುರ, ಲಖನೌ ಸೇರಿ 12 ಕಡೆ ದಾಳಿ ನಡೆಸಿದ್ದರು. ದಾಳಿಯ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು, ಚಿನ್ನ ಹಾಗೂ ಭಾರಿ ಪ್ರಮಾಣದ ನಗದು ಪತ್ತೆಯಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version