Site icon Vistara News

Akhilesh Yadav: ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ರಾಹುಲ್ ಜತೆ ಅಖಿಲೇಶ್

Akhilesh Yadav joins Bharat Jodo Nyay Yatra of Rahul Gandhi

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ (Lok Sabha election) ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ (Uttar Pradesh) ಕಾಂಗ್ರೆಸ್ (Congress Party) ಮತ್ತು ಸಮಾಜವಾದಿ ಪಕ್ಷದ (Samajwadi Party) ನಡುವೆ ಸೀಟು ಹಂಚಿಕೆ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ (Bharat Jodo Nyay Yatra) ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಭಾನುವಾರ ಪಾಲ್ಗೊಂಡರು.

ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಸೀಟ್ ಷೇರಿಂಗ್ ಫೈನಲ್ ಮಾಡಲು ನೆರವು ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರೂ ಈ ವೇಳೆ ಕಾಣಿಸಿಕೊಂಡರು. ರಾಹುಲ್ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಜನವರಿ 14ರಿಂದ ಮಣಿಪುರದಿಂದ ಆರಂಭವಾಗಿದ್ದು, ಈಗ ಉತ್ತರ ಪ್ರದೇಶದಲ್ಲಿದೆ. ಈಗಾಗಲೇ ರಾಯ್ ಬರೇಲಿ ಮತ್ತು ಅಮೇಠಿಯಲ್ಲಿ ಹಾದು ಹೋಗಿದೆ. ಮುಂಬೈನಲ್ಲಿ ಮಾರ್ಚ್ 20ರಂದು ಮುಕ್ತಾಯಗೊಳ್ಳಲಿರುವ ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ಪ್ರತಿಪಕ್ಷ ನಾಯಕ ಅಖಿಲೇಶ್ ಯಾದವ್ ಅವರಾಗಿದ್ದಾರೆ.

ಭಾರತ್ ಜೋಡೋ ನ್ಯಾಯ ಯಾತ್ರೆಯು ಪಶ್ಚಿಮ ಬಂಗಾಳದಲ್ಲಿ ಹಾದು ಹೋಗುವಾಗ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಾಲ್ಗೊಳ್ಳಲಿದ್ದಾರೆಂದು ಹೇಳಲಾಗಿತ್ತು. ಆದರೆ, ಅವರು ರಾಹುಲ್ ಗಾಂಧಿ ಅವರ ಯಾತ್ರೆಯಲ್ಲಿ ಮಮತಾ ಬ್ಯಾನರ್ಜಿ ಅವರು ಹಿಂದೇಟು ಹಾಕಿದರು. ಇಂಡಿಯಾ ಕೂಟದ ಪ್ರಮುಖ ಪಕ್ಷಗಳಾಗಿದ್ದ ಕಾಂಗ್ರೆಸ್ ಮತ್ತು ಟಿಎಂಸಿ ನಡುವೆ ಸೀಟು ಹಂಚಿಕೆ ಸಂಬಂಧ ಒಡಕು ಮೂಡಿದೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಜಂಟಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿವೆ. 80 ಸ್ಥಾನಗಳಿರುವ ಉತ್ತರ ಪ್ರದೇಶದಲ್ಲಿ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದರೆ, ಉಳಿದ 63 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷವು ಸ್ಪರ್ಧಿಸಲಿದೆ.

4 ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಎಎಪಿ- ಕಾಂಗ್ರೆಸ್ ಮೈತ್ರಿ ಹೋರಾಟ; ಯಾವ ರಾಜ್ಯ, ಎಷ್ಟು ಸೀಟು?

ಮುಂಬರುವ ಲೋಕಸಭೆ ಚುನಾವಣೆಗೆ (Lok Sabha Election 2024) ಆಮ್ ಆದ್ಮಿ ಪಕ್ಷ (Aam Admi Party) ಮತ್ತು ಕಾಂಗ್ರೆಸ್ (Congress) ಮೈತ್ರಿಯನ್ನು ಶನಿವಾರ ಖಚಿತಪಡಿಸಿವೆ. ಎರಡೂ ಪಕ್ಷಗಳು ದಿಲ್ಲಿ, ಗೋವಾ, ಗುಜರಾತ್ ಮತ್ತು ಹರಿಯಾಣ ರಾಜ್ಯಗಳಲ್ಲಿ ತಮ್ಮ ಸೀಟು ಹಂಚಿಕೆ (Seat sharing) ಒಪ್ಪಂದವನ್ನು ಮಾಡಿಕೊಂಡಿವೆ.

ಗುಜರಾತ್‌ನಲ್ಲಿ ಕಾಂಗ್ರೆಸ್ 24 ಸ್ಥಾನಗಳಲ್ಲಿ, ಎಎಪಿ 2 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಹರಿಯಾಣದಲ್ಲಿ ಕಾಂಗ್ರೆಸ್ 9 ಸ್ಥಾನಗಳಲ್ಲಿ, ಎಎಪಿ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದೆ. ದೆಹಲಿಯಲ್ಲಿ ಎಎಪಿ ನಾಲ್ಕು, ಕಾಂಗ್ರೆಸ್ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದೆ. ಗೋವಾದಲ್ಲಿ ಎರಡು ಲೋಕಸಭಾ ಕ್ಷೇತ್ರಗಳಿದ್ದು, ಇಲ್ಲಿ ಆಪ್‌ ಪ್ರಾಬಲ್ಯ ಇಲ್ಲದಿರುವುದರಿಂದ ಎರಡರಲ್ಲೂ ಕಾಂಗ್ರೆಸ್ ಸ್ಪರ್ಧಿಸಲಿದೆ. ಎರಡೂ ಪಕ್ಷಗಳೂ ಅಸ್ಸಾಂನಲ್ಲಿ ಸ್ಪರ್ಧೆಯ ಕುರಿತು ಚರ್ಚೆ ನಡೆಸುತ್ತಿವೆ.

“ಗುಜರಾತ್ 26 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್ 24ರಲ್ಲಿ ಸ್ಪರ್ಧಿಸಲಿದೆ. ಎಎಪಿ ತನ್ನ ಅಭ್ಯರ್ಥಿಗಳನ್ನು ಭರೂಚ್ ಮತ್ತು ಭಾವನಗರದಲ್ಲಿ ಹಾಕಲಿದೆ. ಹರಿಯಾಣ 10 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 9ರಲ್ಲಿ ಸ್ಪರ್ಧಿಸಲಿದ್ದು, ಆಪ್‌ ತನ್ನ ಅಭ್ಯರ್ಥಿಯನ್ನು ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಲ್ಲಿ ಹಾಕಲಿದೆ. ದೆಹಲಿಯಲ್ಲಿ ಆಪ್‌ ಹೊಸ ದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ ಮತ್ತು ಪೂರ್ವ ದೆಹಲಿಯಲ್ಲಿ ಸ್ಪರ್ಧಿಸಲಿದೆ. ಚಾಂದಿನಿ ಚೌಕ್, ಈಶಾನ್ಯ ಮತ್ತು ವಾಯುವ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ” ಎಂದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಮುಕುಲ್ ವಾಸ್ನಿಕ್ ಹೇಳಿದ್ದಾರೆ.

ಉಭಯ ಪಕ್ಷಗಳ ನಾಯಕರ ಸುದೀರ್ಘ ಚರ್ಚೆಯ ನಂತರ, ಚಂಡೀಗಢ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಲು ನಿರ್ಧರಿಸಿದೆ ಎಂದು ವಾಸ್ನಿಕ್ ಹೇಳಿದರು. ಎರಡೂ ಪಕ್ಷಗಳು ಪಂಜಾಬ್‌ನಲ್ಲಿ ಸ್ಪರ್ಧೆಯ ಬಗ್ಗೆ ಯಾವುದೇ ಮಾತನಾಡಿಲ್ಲ. ಇಲ್ಲಿ 2022ರಲ್ಲಿ ಕಾಂಗ್ರೆಸ್ ಅನ್ನು ಪದಚ್ಯುತಗೊಳಿಸಿದ ಆಪ್‌ ನಂತರ ಸರ್ಕಾರವನ್ನು ರಚಿಸಿತ್ತು. ಈ ತಿಂಗಳ ಆರಂಭದಲ್ಲಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ (Arvind Kejriwal), ತಮ್ಮ ಪಕ್ಷವು ಪಂಜಾಬ್‌ನ ಎಲ್ಲಾ 13 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದರು.

ಪಂಜಾಬ್ ಮತ್ತು ದೆಹಲಿಯಲ್ಲಿ ಹಳೆಯ ಪ್ರತಿಸ್ಪರ್ಧಿಗಳಾದ ಎಎಪಿ ಮತ್ತು ಕಾಂಗ್ರೆಸ್ ಕಳೆದ ತಿಂಗಳು ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ಈ ಮೈತ್ರಿ ಅಭ್ಯರ್ಥಿ ಗೆದ್ದ ಘೋಷಣೆ ಮಾಡಲಾಗಿದೆ.

“ಇಂದು ದೇಶ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಬಿಜೆಪಿ ಸರಕಾರ ಒಂದೊಂದಾಗಿ ಎಲ್ಲಾ ಸಂಸ್ಥೆಗಳನ್ನು ಮುಗಿಸುತ್ತಿದೆ. ಚುನಾವಣೆಗಳಲ್ಲಿ ಅಕ್ರನ ನಡೆಸಲಾಗುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಲಾಗುತ್ತಿದೆ. ರೈತರಿಗೆ ಅನ್ಯಾಯವಾಗುತ್ತಿದೆ. ದೇಶದ ಜನರು ನಿರುದ್ಯೋಗ ಮತ್ತು ಹಣದುಬ್ಬರದಿಂದ ನರಳುತ್ತಿದ್ದಾರೆ. ದೇಶಕ್ಕೆ ಪ್ರಾಮಾಣಿಕ ಮತ್ತು ಬಲಿಷ್ಠ ಪರ್ಯಾಯದ ಅಗತ್ಯವಿದೆ” ಎಂದು ಎಎಪಿ ಸಂಸದ ಸಂದೀಪ್ ಪಾಠಕ್ ಮೈತ್ರಿಯನ್ನು ಘೋಷಿಸಿದ ನಂತರ ಹೇಳಿದರು.

“ಇದನ್ನು ಗಮನದಲ್ಲಿಟ್ಟುಕೊಂಡು, ನಮ್ಮದೇ ಆದ ರಾಜಕೀಯ ಹಿತಾಸಕ್ತಿಗಳನ್ನು ಬದಿಗಿಟ್ಟು ಮತ್ತು ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ಮೈತ್ರಿಕೂಟದಲ್ಲಿ ಒಂದಾಗಿದ್ದೇವೆ. ಇಂದು ದೇಶ ಮುಖ್ಯ, ಪಕ್ಷ ಗೌಣ. ಕಾಂಗ್ರೆಸ್ ಇಲ್ಲಿಂದ, ಎಎಪಿ ಅಲ್ಲಿಂದ ಸ್ಪರ್ಧಿಸಿದರೂ ಒಟ್ಟಾರೆಯಾಗಿ ಇಂಡಿಯಾ ಮೈತ್ರಿಕೂಟ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ” ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Bharat Jodo Nyaya Yatra: ಭಾರತ್‌ ಜೋಡೊ ನ್ಯಾಯ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಅಖಿಲೇಶ್‌ ಯಾದವ್‌

Exit mobile version