Site icon Vistara News

Al-Qaeda Targets India | ಇಸ್ಲಾಂ ರಾಷ್ಟ್ರಗಳು ಭಾರತವನ್ನು ಬಾಯ್ಕಾಟ್‌ ಮಾಡಲಿ, ಹಿಂದುಗಳನ್ನು ಓಡಿಸಲಿ: ಅಲ್‌ಕೈದಾ ಮತ್ತೆ ಕುತಂತ್ರ

Al Qaeda Targets India

ನವದೆಹಲಿ: ಕರ್ನಾಟಕದಲ್ಲಿ ಭುಗಿಲೆದ್ದಿದ್ದ ಹಿಜಾಬ್‌ ಪರ ಹೋರಾಟದಲ್ಲಿ ಮೂಗು ತೂರಿಸಿದ್ದ, ‘ಅಲ್ಲಾ ಹು ಅಕ್ಬರ್’‌ ಎಂದು ಘೋಷಣೆ ಕೂಗಿದ ಮಂಡ್ಯ ವಿದ್ಯಾರ್ಥಿನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಅಲ್‌ಕೈದಾ (Al-Qaeda Targets India) ಉಗ್ರ ಸಂಘಟನೆಯು ಈಗ ಭಾರತದ ವಿಚಾರದಲ್ಲಿ ಮತ್ತೆ ಉದ್ಧಟತನ ಮಾಡಿದೆ. “ಇಸ್ಲಾಮಿಕ್‌ ರಾಷ್ಟ್ರಗಳು ಭಾರತವನ್ನು ಬಾಯ್ಕಾಟ್‌ ಮಾಡಬೇಕು” ಎಂದು ಕರೆ ನೀಡುವ ಮೂಲಕ ಹೊಸ ಉಪಟಳ ಮಾಡಿದೆ.

ಪ್ರವಾದಿ ಮೊಹಮ್ಮದ್‌ ಕುರಿತು ಬಿಜೆಪಿ ಉಚ್ಚಾಟಿತ ವಕ್ತಾರೆ ನೂಪುರ್‌ ಶರ್ಮಾ ಹೇಳಿಕೆ ವಿಚಾರದಲ್ಲಿ ಮೂಗು ತೂರಿಸಿರುವ ಅಲ್‌ಕೈದಾ, ಉಗ್ರ ಸಂಘಟನೆಯ ಮ್ಯಾಗಜಿನ್‌ ‘ಒನ್‌ ಉಮ್ಮಾ’ (One Umma)ದ ಐದನೇ ಸಂಚಿಕೆಯಲ್ಲಿ ಭಾರತವನ್ನು ಗುರಿಯಾಗಿಸಿ ಹಲವು ಲೇಖನಗಳನ್ನು ಪ್ರಕಟಿಸಿದೆ. “ಪ್ರತಿಯೊಂದು ಇಸ್ಲಾಮಿಕ್‌ ರಾಷ್ಟ್ರಗಳು ಕೂಡ ಭಾರತವನ್ನು ಬಾಯ್ಕಾಟ್‌ ಮಾಡಬೇಕು. ಭಾರತದ ಉತ್ಪನ್ನಗಳನ್ನು ಬ್ಯಾನ್‌ ಮಾಡಬೇಕು. ಹಾಗೆಯೇ, ಅರಬ್‌ ರಾಷ್ಟ್ರಗಳಲ್ಲಿರುವ ಹಿಂದುಗಳನ್ನು ಓಡಿಸಬೇಕು” ಎಂದು ಕರೆ ನೀಡಿದೆ.

ನರೇಂದ್ರ ಮೋದಿ ವಿರುದ್ಧವೂ ಲೇಖನ
ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಒಳಗೊಂಡ ಲೇಖನವನ್ನೂ ಬೆರೆಸುವ ಜತೆಗೆ, ಮೋದಿ ಅವರನ್ನು ಗುರಿಯಾಗಿಸಲಾಗಿದೆ. “ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮುಸ್ಲಿಮರ ಧ್ವನಿ ಅಡಗಿಸಲು ಯತ್ನಿಸುತ್ತಿದೆ. ಹಾಗೆಯೇ, ಪ್ರವಾದಿ ಮೊಹಮ್ಮದ್‌ ವಿರುದ್ಧ ಹೇಳಿಕೆಗಳನ್ನು ನೀಡಲು ಪ್ರಚೋದಿಸುತ್ತಿದೆ. ಹಿಂದುತ್ವವಾದಿ ಸರ್ಕಾರವು ಇಸ್ಲಾಂ ವಿರುದ್ಧ ಸಮರ ಸಾರಿದೆ. ಇದರಿಂದಾಗಿ ಮುಸ್ಲಿಮರಿಗೆ ತೊಂದರೆಯಾಗಿದೆ. ಮುಸ್ಲಿಮರು ಭಾರತದಲ್ಲಿ ಅಸುರಕ್ಷಿತರಾಗಿದ್ದಾರೆ” ಎಂದು ಉದ್ಧಟತನದ ಲೇಖನ ಬರೆಸಿದೆ.

“ಇಷ್ಟೆಲ್ಲ ಕಾರಣಗಳಿಂದಾಗಿ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರಗಳು ನಿರ್ಬಂಧಿಸಬೇಕು. ಭಾರತದ ಜತೆಗಿನ ಭದ್ರತೆ, ವ್ಯಾಪಾರ ಸೇರಿ ಹಲವು ಕ್ಷೇತ್ರಗಳಲ್ಲಿ ಮಾಡಿಕೊಂಡ ಒಪ್ಪಂದಗಳನ್ನು ಮೊಟಕುಗೊಳಿಸಬೇಕು. ಅರಬ್‌ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಗಳನ್ನು ಕೆಲಸದಿಂದ ವಜಾಗೊಳಿಸಬೇಕು” ಎಂದಿದೆ.

ಇದನ್ನೂ ಓದಿ | Al-Qaeda Links | ಅಸ್ಸಾಂನಲ್ಲಿ ಉಗ್ರರ ಜಾಲ ಬಯಲು, ಅಲ್‌ಕೈದಾ ಜತೆ ನಂಟು ಹೊಂದಿರುವ ಇಬ್ಬರು ಮೌಲ್ವಿಗಳ ಸೆರೆ

Exit mobile version