Site icon Vistara News

ಶಿವನ ಫೋಟೊ ಇಟ್ಟು ‘ಎಣ್ಣೆ’ ಪಾರ್ಟಿ; ಹಿಂದುಗಳಿಂದ ತೀವ್ರ ಆಕ್ರೋಶ, ಕ್ರಮಕ್ಕೆ ಆಗ್ರಹ

Goa Party

Alcohol, Music & Lord Shiva's Pic: Goa's Sunburn Festival Under Fire for Hurting Religious Sentiments

ಪಣಜಿ: ಗೋವಾ ಎಂದರೆ ಮದ್ಯದ ಪಾರ್ಟಿಗಳಿಗೆ, ಮೋಜು-ಮಸ್ತಿಗೆ ಹೇಳಿ ಮಾಡಿಸಿದ ನಗರ ಎನ್ನುವಷ್ಟು ಖ್ಯಾತಿ ಪಡೆದಿದೆ. ಅದರಲ್ಲೂ, ಹೊಸ ವರ್ಷಕ್ಕೆ (New Year 2024) ಕ್ಷಣಗಣನೆ ಆರಂಭವಾದ ಕಾರಣ ಗೋವಾದಲ್ಲಿ ಪಾರ್ಟಿ, ಮೋಜು-ಮಸ್ತಿ ಜೋರಾಗಿದೆ. ಇದರ ಬೆನ್ನಲ್ಲೇ ಗೋವಾದಲ್ಲಿ ಆಯೋಜಿಸಲಾಗಿದ್ದ ಸನ್‌ಬರ್ನ್‌ ಫೆಸ್ಟಿವಲ್ (Sunburn Festival) (ಮದ್ಯದ ಪಾರ್ಟಿ) ವೇಳೆ ಶಿವನ ಫೋಟೊ ಇಟ್ಟು, ಎಲ್ಲರೂ ಮದ್ಯ ಸೇವಿಸುತ್ತ, ಜೋರು ಶಬ್ದದಲ್ಲಿ ಹಾಡು ಕೇಳುತ್ತ ಪಾರ್ಟಿ ಮಾಡಿದ ಸಂಗತಿ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆಯೋಜಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹಿಂದು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

ವಟಗೋರ್‌ನಲ್ಲಿ ನಡೆದ ಪಾರ್ಟಿಯ ವೇಳೆ ಜೋರು ಶಬ್ದದಲ್ಲಿ ಯುವಕ-ಯುವತಿಯರು ಹಾಡು ಕೇಳಿದ್ದಾರೆ. ಬಹುತೇಕರು ಮದ್ಯದ ಮತ್ತಿನಲ್ಲಿ ಕುಣಿದಿದ್ದಾರೆ. ಇದೇ ವೇಳೆ ಡಿಜಿಟಲ್‌ ಸ್ಕ್ರೀನ್‌ ಮೇಲೆ ಶಿವನ ಫೋಟೊ ಕಾಣಿಸಿದೆ. ಈ ಸಂಗತಿಯನ್ನು ಗೋವಾ ಆಮ್‌ ಆದ್ಮಿ ಪಕ್ಷದ ಅಧ್ಯಕ್ಷ ಅಮಿತ್‌ ಪಾಳೇಕರ್‌ ಅವರು ಬೆಳಕಿಗೆ ತಂದಿದ್ದಾರೆ. “ಗೋವಾದಲ್ಲಿ ಶಿವನ ಫೋಟೊ ಡಿಸ್‌ಪ್ಲೇ ಆಗುತ್ತಿದ್ದರೂ ಸನ್‌ಬರ್ನ್‌ ಪಾರ್ಟಿ ಮಾಡಲಾಗಿದೆ. ಸನಾತನ ಧರ್ಮಕ್ಕೆ ಧಕ್ಕೆ ತರಲು, ಹಿಂದುಗಳ ಭಾವನೆಗಳಿಗೆ ಕುಂದುಂಟು ಮಾಡಲು ಹೀಗೆ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೊ ಸಮೇತ ಅವರು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Kannada Name plate: ಧರ್ಮದ್ದಾದರೆ ಕೇಸ್‌ ವಾಪಸ್‌; ಕನ್ನಡದ ಹೋರಾಟವಾದರೆ ಯಾಕಿಲ್ಲ: ಪ್ರವೀಣ್‌ ಶೆಟ್ಟಿ ಗುಡುಗು

ದಾಖಲಾಯ್ತು ಕೇಸ್‌

ಸನ್‌ಬರ್ನ್‌ ಪಾರ್ಟಿ ವೇಳೆ ಶಿವನ ಫೋಟೊ ಡಿಸ್‌ಪ್ಲೇ ಮಾಡಿದ್ದನ್ನು ಖಂಡಿಸಿ ಕಾಂಗ್ರೆಸ್‌ ನಾಯಕ ವಿಜಯ್‌ ಭಿಕೆ ಅವರು ಶುಕ್ರವಾರ (ಡಿಸೆಂಬರ್‌ 29) ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ಹಿಂದುಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಸನ್‌ಬರ್ನ್‌ ಫೆಸ್ಟಿವಲ್‌ ಆಯೋಜಕರ ವಿರುದ್ಧ ಹಿಂದು ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಏನಿದು ಸನ್‌ಬರ್ನ್‌ ಫೆಸ್ಟಿವಲ್‌?

ಸನ್‌ಬರ್ನ್‌ ಫೆಸ್ಟಿವಲ್‌ ಎಂಬುದು ಆಧುನಿಕ ಕಾಲದಲ್ಲಿ ಯುವಕ-ಯುವತಿಯರು ಮಾಡುವ ಪಾರ್ಟಿಯಾಗಿದೆ. ಸನ್‌ಬರ್ನ್‌ ಇಡಿಎಂ ಎಂದರೆ ಎಲೆಕ್ಟ್ರಾನಿಕ್‌, ಡಾನ್ಸ್‌ ಹಾಗೂ ಮ್ಯೂಸಿಕ್‌ ಎಂಬುದು ಈ ಪಾರ್ಟಿಯ ರೀತಿ. ಎಲ್ಲ ಯುವಕ-ಯುವತಿಯರು ಮದ್ಯ ಸೇವಿಸುತ್ತ, ಜೋರು ಹಾಡು ಕೇಳುತ್ತ, ಕುಣಿಯುತ್ತ ಮಾಡುವ ಪಾರ್ಟಿ ಇದಾಗಿದೆ. ಗೋವಾದ ವಗಟೋರ್‌ನಲ್ಲಿ ಡಿಸೆಂಬರ್‌ 28ರಿಂದ 30ರವರೆಗೆ ಸನ್‌ಬರ್ನ್‌ ಪಾರ್ಟಿ ನಡೆದಿದ್ದು, ಸಾವಿರಾರು ಜನ ಪಾಲ್ಗೊಂಡಿದ್ದಾರೆ. ಆದರೆ, ಇದೇ ವೇಳೆ ಶಿವನ ಫೋಟೊ ಡಿಸ್‌ಪ್ಲೇ ಆಗಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version