ಲಖನೌ: ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಐವರು ಶಂಕಿತ ಉಗ್ರರನ್ನು ಬಂಧಿಸಿದ ಬೆನ್ನಲ್ಲೇ ಐಸಿಸ್ ಉಗ್ರರ (ISIS Link) ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ. ಜಾರ್ಖಂಡ್‌ನ ಲೋಹರ್ದಗ ಜಿಲ್ಲೆಯಲ್ಲಿ ವಿದ್ಯಾರ್ಥಿಯನ್ನು ಬಂಧಸಲಾಗಿದೆ.
ಬಂಧಿತ ವಿದ್ಯಾರ್ಥಿಯನ್ನು ಫೈಜನ್ ಅನ್ಸಾರಿ ಎಂದು ಗುರುತಿಸಲಾಗಿದ್ದು, ಈತ ಉತ್ತರ ಪ್ರದೇಶದಲ್ಲಿರುವ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಭಾರತದಲ್ಲಿ ಐಸಿಸ್ ಉಗ್ರ ಚಟುವಟಿಕೆಗಳಿಗೆ ಸಂಚು ರೂಪಿಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಎನ್‌ಐಎ ಅಧಿಕಾರಿಗಳು ಜುಲೈ 16 ಹಾಗೂ 17ರಂದು ಉತ್ತರ ಪ್ರದೇಶ ಹಾಗೂ ಜಾರ್ಖಂಡ್‌ನಲ್ಲಿ ದಾಳಿ ನಡೆಸಿದ್ದು, ಶಂಕಿತರ ಮನೆಯಲ್ಲಿ ಪರಿಶೀಲನೆ ಮಾಡಿದ್ದಾರೆ. ತೀವ್ರ ಶೋಧದ ಬಳಿಕ ಫೈಜನ್ ಅನ್ಸಾರಿಯನ್ನು ಅಧಿಕಾರಿಗಳು ಜುಲೈ 19ರಂದು ವಶಕ್ಕೆ ಪಡೆದಿದ್ದಾರೆ ಎಂದು ಎನ್‌ಐಎ ಮೂಲಗಳು ತಿಳಿಸಿದ್ದಾರೆ.
ಫೈಜನ್ ಅನ್ಸಾರಿಯು ಐಸಿಸ್ ಉಗ್ರರ ಜತೆ ಸಾಮಾಜಿಕ ಜಾಲತಾಣಗಳಲ್ಲಿ ನಂಟು ಹೊಂದಿದ್ದು, ಭಾರತದಲ್ಲಿ ಐಸಿಸ್ ಉಗ್ರ ಚಟುವಟಿಕೆಗಳ ಕುರಿತು ಚರ್ಚಿಸುತ್ತಿದ್ದ ಎಂದು ತಿಳಿದುಬಂದಿದೆ. ಫೈಜನ್ ಅನ್ಸಾರಿಯನ್ನು ವಶಕ್ಕೆ ಪಡೆದಿರುವ ಎನ್‌ಐಎ ಅಧಿಕಾರಿಗಳು ಆತನ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಹಲವು ಸೆಕ್ಷನ್ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿ, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Terrorists in Bengaluru: ಹಿಂದೂ- ಮುಸ್ಲಿಂ ಗಲಭೆ ಸೃಷ್ಟಿಗೆ ಉಗ್ರರ ಸ್ಕೆಚ್, ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹ!
“ಫೈಜನ್ ಅನ್ಸಾರಿ ಹಾಗೂ ಆತನ ಸಹಚರರು ಸಾಮಾಜಿಕ ಜಾಲತಾಣಗಳಲ್ಲಿ ಐಸಿಸ್ ಸಿದ್ಧಾಂತವನ್ನು ಪಸರಿಸುವುದಲ್ಲದೆ ಐಸಿಸ್ ಪರವಾಗಿ ದೇಶದಲ್ಲಿ ಉಗ್ರ ಚಟುವಟಿಕೆಗಳನ್ನು ಕೈಗೊಳ್ಳಲು ಸಂಚು ರೂಪಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಎನ್‌ಐಎ ತಿಳಿಸಿದೆ. ಬೆಂಗಳೂರಿನಲ್ಲೂ ಉಗ್ರ ಚಟುವಟಿಕೆಗಳಿಗೆ ಸಂಚು ರೂಪಿಸಿದ, 10ಕ್ಕೂ ಅಧಿಕ ದಾಳಿ ನಡೆಸಲು ಮುಂದಾಗಿದ್ದ ಐವರು ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.