ಲಖನೌ: ಐಸಿಸ್ ಉಗ್ರ ಸಂಘಟನೆ (ISIS Link) ಜತೆ ಸಂಪರ್ಕ ಹೊಂದಿರುವ ಹಾಗೂ ದೇಶದ ಹಲವೆಡೆ ದಾಳಿಗೆ ಸಂಚು ರೂಪಿಸಿರುವ ಆರೋಪದಲ್ಲಿ ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ದಳದ (ATS) ಅಧಿಕಾರಿಗಳು ದಾಳಿ ಮುಂದುವರಿಸಿದ್ದು, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (Aligarh Muslim University) ಮತ್ತೊಬ್ಬ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಐಸಿಸ್ ಜತೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಅಲಿಗಢ ಮುಸ್ಲಿಂ ವಿವಿಯ 10 ವಿದ್ಯಾರ್ಥಿಗಳನ್ನು ಬಂಧಿಸಿದಂತಾಗಿದೆ.
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸೋಷಿಯಲ್ ವರ್ಕ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಫೈಜಾನ್ (24) ಬಂಧಿತ ಆರೋಪಿ. ಈತನು ಅಲಿಗಢದಲ್ಲಿ ಐಸಿಸ್ ಉಗ್ರ ಸಂಘಟನೆಯ ಘಟಕ ಸ್ಥಾಪಿಸುವುದು, ಅದಕ್ಕೆ ಯುವಕರನ್ನು ನೇಮಿಸಲು ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳ ವಿಚಾರಣೆ ವೇಳೆ ಈತನ ಕುರಿತು ಮಾಹಿತಿ ಲಭ್ಯವಾಗಿದ್ದು, ಫೈಜಾನ್ ಕುರಿತು ಮಾಹಿತಿ ನೀಡಿದವರಿಗೆ 25 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದರು. ಈಗ ಎಟಿಎಸ್ ಅಧಿಕಾರಿಗಳು ಈತನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
Aligarh Muslim University Student Faizan was arrested by the Anti-Terrorist Squad for having ISIS links. He was even preparing a module on Aligarh ISIS & adding other people to it.#RamMandirPranPratishta #AyodhaRamMandir #Ayodhya #StockMarketNews #AirStrike #AMU #ISIS pic.twitter.com/1MOfd5l39e
— News Factor India 🇮🇳 (Hinglish News) (@NewsFactorIndia) January 17, 2024
ಅಲಿಗಢ ಮುಸ್ಲಿಂ ವಿದ್ಯಾರ್ಥಿಗಳ ಒಕ್ಕೂಟದ ಸಭೆಯಲ್ಲಿಯೇ ದಾಳಿ ಕುರಿತು ಸಂಚು ರೂಪಿಸುವುದು ಸೇರಿ ಹಲವು ಪಿತೂರಿ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳ ಒಕ್ಕೂಟದ ಸಭೆಯಲ್ಲಿಯೇ ದಾಳಿಗೆ ಸಂಚು ರೂಪಿಸುವುದು, ಐಸಿಸ್ ಪರವಾಗಿ ಕೆಲಸ ಮಾಡಲು ಯುವಕರನ್ನು ನೇಮಿಸಿಕೊಳ್ಳುವುದು ಸೇರಿ ಹಲವು ಪಿತೂರಿಗಳನ್ನು ನಡೆಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಹಾಗೆಯೇ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳ ಕಣ್ಣೂ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: JNU Campus : ಜೆಎನ್ಯು ಕ್ಯಾಂಪಸ್ನಲ್ಲಿ ದೇಶ ವಿರೋಧಿ ಘೋಷಣೆ, ಪ್ರತಿಭಟನೆ ನಿಷೇಧ!
ಇದುವರೆಗೆ 10 ಮುಸ್ಲಿಂ ವಿದ್ಯಾರ್ಥಿಗಳ ಬಂಧನ
ಐಸಿಸ್ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಇದುವರೆಗೆ ಅಲಿಗಢ ಮುಸ್ಲಿಂ ವಿವಿಯ 10 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕೆಲ ತಿಂಗಳ ಹಿಂದಷ್ಟೇ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಆರು ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ಬಂಧಿತರಲ್ಲಿ ನಾಲ್ವರು ಆರೋಪಿಗಳನ್ನು ರಕೀಬ್ ಇನಾಮ್, ನಾವೆದ್ ಸಿದ್ದಿಕಿ, ಮೊಹಮ್ಮದ್ ನೊಮಾನ್ ಹಾಗೂ ಮೊಹಮ್ಮದ್ ನಾಜಿಮ್ ಎಂಬುದಾಗಿ ಗುರುತಿಸಲಾಗಿತ್ತು. ದೇಶದ ಹಲವೆಡೆ ಪ್ರಮುಖ ಉಗ್ರ ದಾಳಿ ನಡೆಸುವುದು ಈ ಆರು ವಿದ್ಯಾರ್ಥಿಗಳ ಸಂಚಾಗಿತ್ತು ಎಂದು ತಿಳಿದುಬಂದಿತ್ತು. ಫೈಜಾನ್ ಸೇರಿ ಒಂಬತ್ತು ವಿದ್ಯಾರ್ಥಿಗಳನ್ನು ಬಂಧಿಸಿದ್ದರೆ, ಒಬ್ಬ ಶರಣಾಗಿದ್ದಾನೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ