ನವ ದೆಹಲಿ: ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್ (Central Armed Police Force -CAPF) ಆಸ್ಪತ್ರೆಗಳನ್ನು ಸಾರ್ವಜನಿಕರ ಬಳಕೆಗೂ ಮುಕ್ತವಾಗಿಸಿದೆ. ಆಯುಷ್ಮಾನ್ CAPF ಅಡಿಯಲ್ಲಿ ಎಲ್ಲ ಆಸ್ಪತ್ರೆಗಳು (CAPF Hospital) ಸಾರ್ವಜನಿಕರಿಗೂ ಪ್ರವೇಶಾವಕಾಶ ಮತ್ತು ಚಿಕಿತ್ಸೆ ಸೌಲಭ್ಯವನ್ನು ಒದಗಿಸಬೇಕು. ನಗರಗಳಿಂದ ದೂರ ಇರುವ ಪ್ರದೇಶಗಳಲ್ಲಿ ಹೆಲ್ತ್ ಕೇರ್ ಸೌಲಭ್ಯ ವಿಸ್ತರಣೆಗೆ ಇದರಿಂದ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಗೃಹ ಸಚಿವ ಅಮಿತ್ ಶಾ ಅವರು ಆರೋಗ್ಯ ಮೂಲ ಸೌಕರ್ಯ ಅಭಿವೃದ್ಧಿಗೆ ಹಿರಿಯ ಅಧಿಕಾರಿಗಳ ಸಭೆಯನ್ನು ಇತ್ತೀಚೆಗೆ ನಡೆಸಿ ಚರ್ಚಿಸಿದ್ದರು. ಗಡಿ ಭಾಗ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಹೆಲ್ತ್ ಕೇರ್ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿತ್ತು.
ಆಸ್ಪತ್ರೆಯನ್ನು ಸಾರ್ವಜನಿಕರಿಗೆ ಮುಕ್ತವಾಗಿರಿಸಿರುವುದರ ಬಗ್ಗೆ ಸಮೀಪದ ಗ್ರಾಮಗಳಲ್ಲಿ ಪ್ರಚಾರ ಮಾಡಲು ಸಿಎಪಿಎಫ್ ಆಸ್ಪತ್ರೆಗಳಿಗೆ ಸರ್ಕಾರ ಸೂಚಿಸಿದೆ. ಈ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೂ ಚಿಕಿತ್ಸೆ ಒದಗಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದುವರೆಗೆ ಸಶಸ್ತ್ರ ಪಡೆಗಳ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ಇದ್ದಿರಲಿಲ್ಲ. ತುರ್ತು ಸಂದರ್ಭಗಳಲ್ಲಿ ಮಾತ್ರ ಸಾರ್ವಜನಿಕರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಲಡಾಕ್, ಜಮ್ಮು & ಕಾಶ್ಮೀರ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಮಾಡಲಾಗುತ್ತಿತ್ತು.
ಗಡಿ ಭಾಗದ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದಲೂ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಿಂದುಳಿದ ಪ್ರದೇಶಗಳಲ್ಲಿನ ಸಿಎಪಿಎಫ್ ಆಸ್ಪತ್ರೆಗಳಲ್ಲಿ ಸಶಸ್ತ್ರ ಸೇನಾ ಪಡೆಯ ಮಂದಿ ಚಿಕಿತ್ಸೆ ಪಡೆಯುವುದು ಕೂಡ ಕಡಿಮೆ. ಏಕೆಂದರೆ ಅಲ್ಲಿ ಅವರ ನಿಯೋಜನೆಯೂ ಅಷ್ಟಾಗಿ ಇರುವುದಿಲ್ಲ. ಆದರಿಂದ ಸಾರ್ವಜನಿಕರಿಕೆ ಮುಕ್ತಗೊಳಿಸುವುದರಿಂದ ಅನುಕೂಲವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಇದನ್ನೂ ಓದಿ: Tumkur News: ಶಿರಾದ ತಾಯಿ ಮಕ್ಕಳ ಆಸ್ಪತ್ರೆಗೆ ತಹಸೀಲ್ದಾರ್ ಭೇಟಿ, ಸ್ವಚ್ಛತೆಗೆ ಆದ್ಯತೆ ನೀಡಲು ಸೂಚನೆ
ಭಾರತದಲ್ಲಿ ಸಾರ್ವಜನಿಕ ಆಸ್ಪತ್ರೆಗಳು ಜನತೆಗೆ ಬಹುತೇಕ ಉಚಿತವಾಗಿ ಚಿಕಿತ್ಸೆ ಒದಗಿಸುತ್ತವೆ. ಹೀಗಿದ್ದರೂ, ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಕೊರತೆ ಕಾಡುತ್ತಿದೆ. ಇದರ ಪರಿಣಾಮ ಖಾಸಗಿ ಆಸ್ಪತ್ರೆಗಳ ವಲಯ ವ್ಯಾಪಕವಾಗಿ ಬೆಳೆದಿದೆ.