ನವದೆಹಲಿ: ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ದಿಲ್ಲಿಯ ಆಮ್ ಆದ್ಮಿ ಪಾರ್ಟಿ(AAP) ಸರ್ಕಾರವು ದೀಪಾವಳಿ ಸಂದರ್ಭದಲ್ಲಿ ಸಂಪೂರ್ಣವಾಗಿ ಪಟಾಕಿ ಬಳಕೆ ಮೇಲೆ ನಿಷೇಧ ಹೇರಿದೆ(Firecracker Ban in Delhi). ಪಟಾಕಿ ಉತ್ಪಾದನೆ, ಸಂಗ್ರಹ, ಮಾರಾಟಾ, ಆನ್‌ಲೈನ್ ಡೆಲಿವರಿ ಮತ್ತು ಪಟಾಕಿ ಸುಡವುದನ್ನು ನಿಷೇಧಿಸಲಾಗಿದೆ. ದೀಪಾವಳಿ (Diwali Festival) ದಿನ ಸುಡುವ ಪಟಾಕಿಯಿಂದ ದಿಲ್ಲಿಯಲ್ಲಿ ಸಾಕಷ್ಟು ಹೊಗೆಯು ವಾತಾವರಣದಲ್ಲಿ ಸಂಗ್ರಹವಾಗುತ್ತದೆ ಮತ್ತು ದಿಲ್ಲಿಯ ನೆರೆಯ ಪ್ರದೇಶಗಳಲ್ಲಿ ರೈತರು ಹುಲ್ಲು ಸುಡುವುದರಿಂದ ಉತ್ಪತ್ತಿಯಾಗುವ ಹೊಗೆಯೂ ಸೇರುವುದರಿಂದ ನಗರದಲ್ಲಿ ಮಾಲಿನ್ಯವು ಅಪಾಯದ ಮಟ್ಟವನ್ನು ತಲುಪತ್ತದೆ ಎಂದು ದಿಲ್ಲಿ ಪರಿಸರ ಸಚಿವ ಗೋಪಾಲ್ ರೈ ಅವರು ಹೇಳಿದ್ದಾರೆ.
ಈ ಎಲ್ಲ ಕಾರಣಕ್ಕಾಗಿ ದಿಲ್ಲಿ ಮುಖ್ಯಮಂತ್ರಿಗಳು ಸಂಪೂರ್ಣವಾಗಿ ಪಟಾಕಿ ಮೇಲೆ ಬ್ಯಾನ್ ಮಾಡಲಾಗುತ್ತಿದೆ. ಪಟಾಕಿ ಉತ್ಪಾದನೆ, ಸಂಗ್ರಹ, ಮಾರಾಟ, ಆನ್‌ಲೈನ್ ಡೆಲಿವರಿ ಹಾಗೂ ಪಟಾಕಿ ಸುಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ನಾವು ಡಿಪಿಸಿಸಿಗೆ ನಿರ್ದೇಶನ ನೀಡಿದ್ದೇವೆ. ಪ್ರತಿ ವರ್ಷದಂತೆ ಈ ವರ್ಷವೂ ನಿರ್ಧಾರ ಕೈಗೊಳ್ಳಲಾಗಿದೆ. ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಅಥವಾ ಆನ್‌ಲೈನ್‌ನಲ್ಲಿ ಯಾರಿಗೂ ಪಟಾಕಿ ವಿತರಣೆಗೆ ಯಾವುದೇ ಪರವಾನಗಿ ನೀಡದಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ: ಪಟಾಕಿ ಹೊಡೆಯಲು ದಿನಕ್ಕೆ 2 ಗಂಟೆ ಟೈಂ ಫಿಕ್ಸ್; ಗ್ರೀನ್ ಪಟಾಕಿಗಷ್ಟೇ ಗ್ರೀನ್ ಸಿಗ್ನಲ್!
ದಿಲ್ಲಿಯಲ್ಲಿ ದೀಪಾವಳಿ ಹಬ್ಬಕ್ಕೆ ಸಂಪೂರ್ಣವಾಗಿ ಪಟಾಕಿ ನಿಷೇಧ ಕ್ರಮವು ಈಗ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. 2018 ಅಕ್ಟೋಬರ್ 10ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ, ಪಟಾಕಿ ಮೇಲೆ ಸಂಪೂರ್ಣ ನಿಷೇಧ ಹೇರುವಂತೆ ಸೂಚಿಸಿತ್ತು. ಅಂದಿನಿಂದಲೂ ದಿಲ್ಲಿಯಲ್ಲಿ ಹಬ್ಬದ ವೇಳೆ ಪಟಾಕಿ ಬಳಕೆಯನ್ನು ನಿಷೇಧಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಅಪಾಯಕಾರಿ ಪಟಾಕಿಗಳ ಮೇಲೆ ನಿಷೇಧ ಹೇರಿದ್ದರೂ 2018ರಲ್ಲಿ ಗ್ರೀನ್ ಪಟಾಕಿಗಳನ್ನು ಸುಡಲು ಅವಕಾಶ ನೀಡಲಾಗಿತ್ತು. ಹಾಗಿದ್ದೂ, ಆ ವರ್ಷ ಮಾಲಿನ್ಯವು ಅಪಾಯಕಾರಿ ಮಟ್ಟವನ್ನು ತಲುಪಿತ್ತು. ಹಾಗಾಗಿ, 2020 ಆದೇಶ ಹೊರಡಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ದಿಲ್ಲಿ-ಎನ್‌ಸಿಆರ್ ಪ್ರದೇಶದಲ್ಲಿ ಸಂಪೂರ್ಣವಾಗಿ ಪಟಾಕಿಗಳ ಮೇಲೆ ನಿಷೇಧ ಹೇರಿತು. ಈ ನಿಷೇಧವು 2021, 2022 ಮತ್ತು 2023ರಲ್ಲ ಮುಂದುವರಿಯುತ್ತಿದೆ.