‘ಭಾರತೀಯರು ದೇಶಕ್ಕಾಗಿ ಹೇಗೆ ನಗುತ್ತಲೇ ಕುಣಿಕೆಗೆ ಕೊರಳೊಡ್ಡುತ್ತಾರೆ ಎಂಬುದನ್ನು ನೋಡಿ’ ಎನ್ನುತ್ತಲೇ, ದೇಶದ ಸ್ವಾತಂತ್ರ್ಯಕ್ಕಾಗಿ ೨೪ನೇ ವಯಸ್ಸಿಗೇ ಪ್ರಾಣತ್ಯಾಗ ಮಾಡಿದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಪ್ರತಿ ಜನ್ಮದಿನವಾದ (Bhagat Singh Birthday) ಇಂದು (ಸೆ.೨8) ಎಲ್ಲರೂ ಅವರನ್ನು ನೆನೆಯೋಣ. ಅದರಲ್ಲೂ, ಕ್ರಾಂತಿಕಾರಿಗಳನ್ನು ಒಗ್ಗೂಡಿಸಿದ ರೀತಿ, ಮೀಸೆ ಚಿಗುರುವ ಮುನ್ನವೇ ದೇಶದ ಸ್ವಾತಂತ್ರ್ಯದ ಕನಸು ಕಂಡು, ಹೋರಾಡಿದ ಪರಿ, ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ ಛಾತಿಯನ್ನು ಸ್ಮರಿಸೋಣ. ಹಾಗೆಯೇ, ಭಗತ್ ಸಿಂಗ್ ಅವರ ಬಗ್ಗೆ ಗೊತ್ತಿರದ 10 ಪ್ರಮುಖ ಸಂಗತಿಗಳನ್ನೂ ತಿಳಿಯೋಣ.
೧. ಆಟ ಆಡುವ ವಯಸ್ಸಿನಲ್ಲಿ ಅಂದರೆ, ಎಂಟನೇ ವಯಸ್ಸಿನಲ್ಲಿಯೇ ಭಗತ್ ಸಿಂಗ್ ಸ್ವಾತಂತ್ರ್ಯದ ಕನಸು ಕಾಣುತ್ತಿದ್ದರು. ದೇಶ, ಸ್ವಾತಂತ್ರ್ಯ, ಹೋರಾಟದ ಬಗ್ಗೆ ಮನೆಯವರ ಬಳಿ ಹೇಳುತ್ತಿದ್ದರು. ಏಕೆಂದರೆ, ಭಗತ್ ಸಿಂಗ್ ಅವರ ಕುಟುಂಬವೇ ಸ್ವಾತಂತ್ರ್ಯ ಹೋರಾಟಗಾರಕ್ಕೆ ಧುಮುಕಿತ್ತು.
೨. ರ‍್ಯಾಂಕ್ ಪಡೆದು, ಐದಂಕಿ ಸಂಬಳದ ಉದ್ಯೋಗ ಗಳಿಸುವುದೇ ನಮ್ಮ ಗುರಿಯಾಗಿದೆ. ಆದರೆ, ಕ್ರಾಂತಿಕಾರಿ ಭಗತ್ ಹಾಗಲ್ಲ. ಅವರು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಲು ೧೩ನೇ ವಯಸ್ಸಿಗೇ ಶಾಲೆ ಬಿಟ್ಟರು. ಅಲ್ಲದೆ, ಯಾವುದೇ ನಾಟಕಗಳಲ್ಲಿ ಭಾಗವಹಿಸಿದರೂ ಅವರು, “ಮಹಾರಾಣಾ ಪ್ರತಾಪ್, ಸಾಮ್ರಾಟ್ ಚಂದ್ರಗುಪ್ತ” ಅವರ ಪಾತ್ರವನ್ನು ಮಾಡುತ್ತಿದ್ದರು. ಅಷ್ಟರಮಟ್ಟಿಗೆ ಅವರ ಮನಸ್ಸಿನಲ್ಲಿ ವೀರರು, ಶೂರರು ನೆಲೆಸಿದ್ದರು.
೩. ಕ್ರಾಂತಿಕಾರಿಯು ಶಾಲೆಯಲ್ಲಿ ಓದುವಾಗ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ವಿಚಲಿತನನ್ನಾಗಿ ಮಾಡಿತು. ೧೨ ವರ್ಷದ ಪೋರ ಭಗತ್ ಸಿಂಗ್, ಹತ್ಯಾಕಾಂಡ ನಡೆದ ಸ್ಥಳಕ್ಕೆ ತೆರಳಿದರು. ಅಲ್ಲಿ, ದೇಶಕ್ಕಾಗಿ ಮಡಿದ ವೀರರ ರಕ್ತವು ಮಣ್ಣಿನಲ್ಲಿ ಬೆರೆತಿತ್ತು. ಅದೇ ಮಣ್ಣನ್ನು ಬಾಟಲಿಯಲ್ಲಿ ತುಂಬಿಕೊಂಡು ಬಂದು ಮನೆಯಲ್ಲಿ ಇಟ್ಟು ಆರಾಧಿಸುತ್ತಿದ್ದವರು ಭಗತ್ ಸಿಂಗ್.
೪. ಭಗತ್ ಸಿಂಗ್ ಅವರಿಗೆ ವೈಯಕ್ತಿಕ ಜೀವನಕ್ಕಿಂತ ದೇಶವೇ ಮುಖ್ಯವಾಗಿತ್ತು. ಹಾಗಾಗಿಯೇ ಅವರು ಮದುವೆಯ ಪ್ರಸ್ತಾಪವನ್ನೇ ನಿರಾಕರಿಸಿದ್ದರು. ‘ಬ್ರಿಟಿಷರ ಆಡಳಿತದಲ್ಲಿ ನಾನು ಮದುವೆಯಾಗುವುದು ಅಂತಾದರೆ, ಅದು ಸಾವಿನ ಜತೆ” ಎಂದು ಮನೆಯವರಿಗೆ ಪತ್ರ ಬರೆದಿದ್ದರು.
೫. ಸಮಾಜವಾದವು ಭಗತ್ ಸಿಂಗ್ ಅವರನ್ನು ಆಕರ್ಷಿಸಿತ್ತು. ಅದೇ ರೀತಿಯ ಪುಸ್ತಕಗಳನ್ನು ಓದುತ್ತಿದ್ದರು. ಇದೇ ಕಾರಣಕ್ಕಾಗಿಯೇ, “ಬ್ರಿಟಿಷರು ನನ್ನನ್ನು ಕೊಲ್ಲಬಹುದು, ಅದರೆ ನನ್ನಲ್ಲಿರುವ ಸಿದ್ಧಾಂತಗಳನ್ನು ಹತ್ತಿಕ್ಕಲು ಆಗುವುದಿಲ್ಲ. ಅವರು ನನ್ನ ರಕ್ತ ಬಸಿಯಬಹುದು, ಆದರೆ, ನನ್ನ ಸ್ಫೂರ್ತಿಯನ್ನು ಅವರು ಅಲುಗಾಡಿಸಲು ಸಾಧ್ಯವಿಲ್ಲ” ಎನ್ನುತ್ತಿದ್ದರು.
೬. ಲಾಲಾ ಲಜಪತ್‌ರಾಯ್ ಅವರ ಸಾವಿಗೆ ಸೇಡು ತೀರಿಸಿಕೊಳ್ಳಲು ಲಾಹೋರ್‌ನಲ್ಲಿ ಬ್ರಿಟಿಷ್ ಎಸ್‌ಪಿ ಜೇಮ್ಸ್ ಸ್ಕಾಟ್‌ನನ್ನು ಭಗತ್ ಸಿಂಗ್ ಹಾಗೂ ಸುಖದೇವ್ ಹತ್ಯೆ ಮಾಡಿದರು. ದೆಹಲಿಯ ಸೆಂಟ್ರಲ್ ಅಸೆಂಬ್ಲಿ ಹಾಲ್ ಮೇಲೆ ಬಾಂಬ್ ಎಸೆದರು. “ಇಂಕ್ವಿಲಾಬ್ ಜಿಂದಾಬಾದ್” (ಕ್ರಾಂತಿಕಾರಿಗಳಿಗೆ ಜಯವಾಗಲಿ) ಎಂದು ಘೋಷಣೆ ಕೂಗಿದರು. ಇದು ಬ್ರಿಟಿಷರಿಗೆ ನುಂಗಲಾರದ ತುತ್ತಾಗಿತ್ತು.
೭. ದೇಶಕ್ಕಾಗಿ ಹೋರಾಡಿ, ಬ್ರಿಟಿಷರನ್ನು ಕೊಂದು ಜೈಲು ಸೇರಿದರೂ ಭಗತ್ ಸಿಂಗ್ ಅವರು ಯಾರಿಗೂ ಬಗ್ಗಲಿಲ್ಲ, ಜಗ್ಗಲಿಲ್ಲ. ಜೈಲಿನಲ್ಲಿಯೇ ಉಪವಾಸವಿದ್ದು ಪ್ರತಿಭಟನೆ ವ್ಯಕ್ತಪಡಿಸಿದರು. ಊಟ ಮಾಡದಿದ್ದರೂ ಹಾಡು ಹಾಡುತ್ತ, ಪುಸ್ತಕ ಓದುತ್ತ, ಬರೆಯುತ್ತ, ಕೋರ್ಟ್‌ಗಳಿಗೆ ಅಲೆಯುತ್ತ ಉಲ್ಲಾಸದಿಂದಲೇ ಇದ್ದರು. ಏಕೆಂದರೆ, ಅವರಲ್ಲಿ ನಾನು ದೇಶಕ್ಕಾಗಿ ಹೋರಾಡುತ್ತಿದ್ದೇನೆ ಎಂಬ ಹೆಮ್ಮೆ, ಗರ್ವ ಇತ್ತು.
೮. ಭಗತ್ ಸಿಂಗ್ ಅವರು ಮೊದಲ ಬಾರಿಗೆ “ಇಂಕ್ವಿಲಾಬ್ ಜಿಂದಾಬಾದ್” ಎಂದು ಘೋಷಿಸಿದ್ದು ಸಾವಿರಾರು ಕ್ರಾಂತಿಕಾರಿಗಳಿಗೆ ಸ್ಫೂರ್ತಿಯಾಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ ಮೌಲಾನ ಹಸ್ರತ್ ಮೊಹಾನಿ ಅವರೂ ಇದೇ ಘೋಷಣೆ ಕೂಗಿದರು. ಅಷ್ಟರಮಟ್ಟಿಗೆ ಸ್ವಾತಂತ್ರ್ಯ ಹೋರಾಟದ ಮೇಲೆ ಭಗತ್ ಸಿಂಗ್ ಪ್ರಭಾವ ಬೀರಿದ್ದರು.
೯. ಕ್ರಾಂತಿಕಾರಿ ಭಗತ್ ಸಿಂಗ್ ಅವರು ಜೈಲಿನಲ್ಲಿ ಒಟ್ಟು ೧೧೬ ದಿನ ಉಪವಾಸ ಇದ್ದರು. ಹಾಗೆಯೇ, “ನನ್ನನ್ನು ಗಲ್ಲಿಗೇರಿಸುವ ಬದಲು ಶೂಟ್ ಮಾಡಬೇಕು” ಎಂದು ಬ್ರಿಟಿಷರಿಗೆ ಸವಾಲು ಹಾಕುತ್ತಿದ್ದರು.
೧೦. ಭಗತ್ ಸಿಂಗ್ ಅವರನ್ನು ೧೯೩೧ರ ಮಾರ್ಚ್ ೨೩ರಂದು ಗಲ್ಲಿಗೇರಿಸಲಾಯಿತು. ಜೈಲಿನಲ್ಲಿದ್ದಾಗ ಅವರ ತಾಯಿ ಬಂದರೆ, ನಗುತ್ತಲೇ ಮಾತನಾಡಿ ಕಳುಹಿಸಿದ್ದರು. ನಗುತ್ತಲೇ ಕುಣಿಕೆಗೆ ಕೊರಳೊಡ್ಡಿದರು. ಇಂತಹ ಕ್ರಾಂತಿಕಾರಿ ಅಗಲಿ ೯೧ ವರ್ಷವಾಗಿದೆ. ಆದರೂ, ಅವರು ನಮ್ಮ ಮನೆ, ಮನಗಳಲ್ಲಿ ಸ್ಥಾನ ಪಡೆದಿದ್ದಾರೆ. ಇಂಕ್ವಿಲಾಬ್ ಜಿಂದಾಬಾದ್!
ಇದನ್ನೂ ಓದಿ | Bhagat Singh | ಜನ್ಮದಿನಕ್ಕೆ 3 ದಿನ ಬಾಕಿ ಇರುವಾಗಲೇ ಚಂಡೀಗಢ ಏರ್‌ಪೋರ್ಟ್‌ಗೆ ಭಗತ್ ಸಿಂಗ್ ಹೆಸರು, ಮೋದಿ ಘೋಷಣೆ