ಬೆಂಗಳೂರು: ಜೂನ್ ತಿಂಗಳು ಬಂದಾಗಿದೆ. ಸೂರ್ಯನ ಪ್ರತಾಪ ತುಸು ಕಡಿಮೆಯಾಗಿ, ಬೆವರಿನಿಂದ ಸ್ನಾನ ಮಾಡಿದಂತ ಅನುಭವ ಇಲ್ಲದಂತಾಗಿದೆ. ಕೆಲವೆಡೆ ಮಳೆಯಾಗಿದೆ, ಇನ್ನೂ ಕೆಲವೆಡೆ ಮೋಡ ಕವಿದ ವಾತಾವರಣ ಇದೆ. ರೈತರು ಆಗಸದತ್ತ ಮುಖ ಮಾಡಿ, ಮಳೆಗಾಗಿ ಕಾಯುತ್ತಿದ್ದಾರೆ. ಮೊದಲ ಮಳೆಯ ನಂತರದ ಮಣ್ಣಿನ ಸುವಾಸನೆಗೆ ಕಾಯುತ್ತಿದ್ದಾರೆ. ಹಾಗೆ ನೋಡಿದರೆ, ಜೂನ್ 1ರಂದು ಮುಂಗಾರು ಮಳೆ ಕೇರಳ ಪ್ರವೇಶಿಸಬೇಕಿತ್ತು. ಆದರೆ, ಜೂನ್ 7 ಅಥವಾ ಅದಕ್ಕಿಂತ ಮೊದಲು ಮುಂಗಾರು (Monsoon Season) ಮಳೆಯಾಗಲಿದೆ. ಹಾಗಾದರೆ, ಭಾರತದಲ್ಲಿ ಮುಂಗಾರು ಮಳೆ ಹೇಗೆ ಉಂಟಾಗುತ್ತದೆ? ಅದು ಹೇಗೆ ದೇಶಾದ್ಯಂತ ಹರಡುತ್ತದೆ? ಮಾನ್ಸೂನ್ ಎಂಬ ಪದವಾದರೂ ಎಲ್ಲಿಂದ ಬಂತು ಎಂಬುದು ಸೇರಿ ವಿವಿಧ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಮುಂಗಾರು ಮಳೆ ಸೃಷ್ಟಿ ಹೇಗೆ?
ಭಾರತದಲ್ಲಿ ಭೂಮಿ ಹಾಗೂ ಸಮುದ್ರದ ತಾಪಮಾನದಿಂದ ಮುಂಗಾರು ಮಳೆಯ ಸೃಷ್ಟಿಯಾಗುತ್ತದೆ. ನೈಋತ್ಯ ಬೇಸಿಗೆಯಲ್ಲಿ ವಾಯುಭಾರ ಕುಸಿತ ಕಡಿಮೆ ಇರುವುದರಿಂದ ರಾಜಸ್ಥಾನದದ ಥಾರ್ ಮರುಭೂಮಿಯಲ್ಲಿ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತದೆ. ಅದನ್ನೇ ಬೇಸಿಗೆ ಎನ್ನುತ್ತೇವೆ. ಆದರೆ, ಮುಂಗಾರು ಅವಧಿಯಲ್ಲಿ ಗಾಳಿ ಬೀಸುವುದು ಹಿಮ್ಮುಖವಾಗಿರುತ್ತದೆ. ಇದೇ ವೇಳೆ ಹಿಂದು ಮಹಾಸಾಗರದಿಂದ ತೇವಾಂಶ ತುಂಬಿದ ಗಾಳಿ ಬೀಸುತ್ತದೆ. ಆ ಗಾಳಿಯು ಹಿಮಾಲಯ ಪ್ರದೇಶದಿಂದ ಮುಂದೆ ಬರಲು ಸಾಧ್ಯವಾಗುವುದಿಲ್ಲ. ಹೀಗೆ, ಹಿಂದು ಮಹಾಸಾಗರದಿಂದ ಬಂದ ತೇವಾಂಶಯುತ ಗಾಳಿಯು ಹಿಮಾಲಯದಲ್ಲಿ ತಡೆದು, ಬಳಿಕ ಮೋಡಗಳಾಗಿ ಸೃಷ್ಟಿಯಾಗುತ್ತದೆ. ಮೋಡದಿಂದ ಸುರಿಯುವ ಮಳೆಯೇ ಮುಂಗಾರು ಮಳೆ ಆಗುತ್ತದೆ.
ದೇಶಾದ್ಯಂತ ಮಳೆಯಾಗುವುದು ಹೇಗೆ?
ನೈಋತ್ಯ ಮುಂಗಾರು ಭಾರತ ಪ್ರವೇಶಿಸುತ್ತಲೇ ಭಾರತದ ಸೌತ್ ಸೆಂಟ್ರಲ್‌ನಲ್ಲಿರುವ ಪಶ್ಚಿಮ ಘಟ್ಟಗಳ ಗಿರಿ ಪ್ರದೇಶದಲ್ಲಿ ಎರಡು ಭಾಗವಾಗಿ ವಿಂಗಡಣೆಯಾಗುತ್ತದೆ. ಹೀಗೆ ಎರಡು ಭಾಗಗಳಾಗಿ ವಿಂಗಡಣೆಯಾದ ಮಳೆಯು ಅರಬ್ಬೀ ಸಮುದ್ರದ ಮೂಲಕ ಪಶ್ಚಿಮ ಘಟ್ಟಗಳ ಕರಾವಳಿ ತೀರದತ್ತ ಹೋಗುತ್ತದೆ. ಮತ್ತೊಂದು, ಬಂಗಾಳ ಕೊಲ್ಲಿ ಮೂಲಕ ಅಸ್ಸಾಂ ಸೇರಿ ಪೂರ್ವ ಹಿಮಾಲಯ ಪ್ರದೇಶಗಳತ್ತ ಹೋಗುತ್ತದೆ. ಹೀಗೆ, ಹರಡಿದ ಮುಂಗಾರು ದೇಶಾದ್ಯಂತ ಮಳೆ ಸುರಿಸುತ್ತದೆ.
ಮುಂಗಾರು ಮಳೆ ಪ್ರವೇಶ ಯಾವಾಗ?
ಭಾರತದಲ್ಲಿ ಸಾಮಾನ್ಯವಾಗಿ ಜೂನ್ 1ರಂದು ಮುಂಗಾರು ಕೇರಳ ಪ್ರವೇಶಿಸುತ್ತದೆ. ಅಲ್ಲಿಂದಲೇ ಮುಂಗಾರು ಮಳೆಯ ಅಧಿಕೃತ ಆರಂಭವಾಗುತ್ತದೆ. ಇದಾದ ಬಳಿಕ ಮುಂಬೈ, 10 ದಿನಗಳ ನಂತರ ದೆಹಲಿ ಪ್ರವೇಶಿಸುತ್ತದೆ. ಜುಲೈ ಮಧ್ಯಭಾಗದ ಹೊತ್ತಿಗೆ ಮುಂಗಾರು ಮಳೆ ದೇಶಾದ್ಯಂತ ಆವರಿಸಿಕೊಳ್ಳುತ್ತದೆ. ಆಗಸ್ಟ್ ವೇಳೆಗೆ ಮುಂಬೈ ಹಾಗೂ ಕೋಲ್ಕೊತಾದಲ್ಲಿ ಹೆಚ್ಚಿನ ಮಳೆಯಾಗುತ್ತದೆ. ದೇಶದ ಮುಂಗಾರು ಸೆಪ್ಟೆಂಬರ್‌ವರೆಗೆ ಇರುತ್ತದೆ.
ಮುಂಗಾರು ಮಳೆಯ ಹನಿಗಳ ಲೀಲೆಯೇ ವಿಚಿತ್ರ…
ಜೂನ್‌ನಲ್ಲಿ ಪ್ರವೇಶವಾಗುವ ಮುಂಗಾರು ಮಳೆಯ ವರ್ತನೆಯೇ ವಿಚಿತ್ರ. ಜೂನ್‌ನಲ್ಲಿ ಬಹುತೇಕ ದಿನ ನಿತ್ಯ ಸರಾಸರಿ ಎರಡು ಗಂಟೆಯವರೆಗೆ ಮಳೆಯಾಗುತ್ತದೆ. ಆದರೆ, ಮಳೆ ಬಂದರೂ ಝಳ, ಬೆವರಿನಿಂದ ಜನ ಬಸವಳಿಯುವಂತೆ ಮಾಡುತ್ತದೆ. ಇನ್ನು, ಜುಲೈನಲ್ಲಿ ಮುಂಗಾರು ಗರಿಷ್ಠ ಮಟ್ಟಕ್ಕೆ ತಲುಪುತ್ತದೆ. ದೇಶದ ಬಹುತೇಕ ಭಾಗಗಳನ್ನು ಆವರಿಸಿ, ರೈತರ ಬಿತ್ತನೆ ಕಾರ್ಯಗಳಿಗೆ ಚಾಲನೆ ನೀಡುತ್ತದೆ. ಆಗಸ್ಟ್ ಕೊನೆಯ ವಾರದವರೆಗೆ ಭಾರಿ ಮಳೆಯಾಗಲಿದೆ. ಇದಾದ ನಂತರ ನಿಯಮಿತವಾಗಿ ಮಳೆ ಕಡಿಮೆಯಾಗುತ್ತ ಸೆಪ್ಟೆಂಬರ್ ಅಂತ್ಯದ ವೇಳೆಗೆ ಮುಂಗಾರು ಕೂಡ ಅಂತ್ಯವಾಗುತ್ತದೆ.
ಎಲ್ಲೆಲ್ಲಿ ಕಡಿಮೆ ಮಳೆ?
ದೆಹಲಿ, ಬೆಂಗಳೂರು, ಚೆನ್ನೈ ಸೇರಿ ದೇಶದ ಕೆಲ ನಗರಗಳಲ್ಲಿ ಮಳೆಯ ಪ್ರಮಾಣ ನಿಯಮಿತವಾಗಿರುತ್ತದೆ. ಈಶಾನ್ಯ ಮುಂಗಾರು ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಸುರಿಯಲಿದ್ದು, ತಮಿಳುನಾಡು, ಕರ್ನಾಟಕ, ಕೇರಳ ರಾಜ್ಯಗಳು ಪ್ರವಾಸಕ್ಕೆ ಹೇಳಿಮಾಡಿಸಿದ ಹಾಗಿರುತ್ತವೆ. ಕೂರ್ಗ್, ವಯನಾಡು, ಮಲೆನಾಡಿಗೆ ಹೋದರೆ ಸ್ವರ್ಗಕ್ಕೆ ಹೋದ ಅನುಭವವಾಗುತ್ತದೆ.
ಇದನ್ನೂ ಓದಿ: Weather Report: ಉತ್ತರ ಕನ್ನಡದಲ್ಲಿ ಮಳೆ ಅಬ್ಬರ, ಇರಲಿ ಎಚ್ಚರ; ಮೀನುಗಾರರಿಗೆ ಕಟ್ಟೆಚ್ಚರ
ಮುಂಗಾರು ಪದದ ವ್ಯುತ್ಪತ್ತಿ ಹೇಗಾಯಿತು?
ಮಾನ್ಸೂನ್ ಎಂಬ ಪದವು ಅರೇಬಿಕ್ ಭಾಷೆಯ ಮೌಸಿಮ್ (Mausim) ಎಂಬ ಪದದಿಂದ ವ್ಯುತ್ಪತ್ತಿಯಾಗಿದೆ. ಅರೇಬಿಕ್ ಭಾಷೆಯಲ್ಲಿ ಮೌಸಿಮ್ ಎಂದರೆ ಹವಾಮಾನ ಎಂದರ್ಥ. ಇದೇ ಮೌಸಿಮ್ ಪದವು ಮಾನ್ಸೂನ್ ಎಂದು ಬದಲಾಗಿದೆ.