ನವದೆಹಲಿ: ಕಾಂಗ್ರೆಸ್‌ನ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಅವರು ಮಂಗಳವಾರವಷ್ಟೇ, ಸಂವಿಧಾನ ರಕ್ಷಣೆಗೆ ಸಮಾನ ಮನಸ್ಕ ಪಕ್ಷಗಳ ಜತೆಗೆ ಕಾಂಗ್ರೆಸ್ ಮೈತ್ರಿಗೆ ಸಿದ್ಧವಿದೆ ಎಂದು ಲೇಖನದ ಮೂಲಕ ಸಂದೇಶ ರವಾನಿಸಿದ್ದಾರೆ. ಅದರ ಭಾಗವಾಗಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar), ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejeshwi Yadav) ಹಾಗೂ ಜೆಡಿಯು ಮುಖ್ಯಸ್ಥ ರಾಜೀವ್ ರಂಜನ್ ಸಿಂಗ್ ಅವರು ಬುಧವಾರ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ರಾಹುಲ್ ಗಾಂಧಿ (Rahul Gandhi) ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಮೂರು ದಿನಗಳ ಕಾಲ ದಿಲ್ಲಿ ಭೇಟಿಗೆ ಆಗಮಿಸಿರುವ ದಿಲ್ಲಿ ಸಿಎಂ ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಪಕ್ಷ ಹಾಗೂ ಇತರ ರಾಜಕೀಯ ಪಕ್ಷಗಳ ನಡುವಿನ ಮೈತ್ರಿಗೆ ಬೆಸುಗೆ ಹಾಕುವ ಕೆಲಸ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಾಯಕರ ಸಭೆಯು ದಿಲ್ಲಿಯ ಮಲ್ಲಿಕಾರ್ಜುನ ಖರ್ಗೆ ಅವರು ನಿವಾಸದಲ್ಲಿ ನಡೆಯಿತು. ಕೇಂದ್ರದಲ್ಲಿ ಬಿಜೆಪಿ ವಿರುದ್ದ ಪ್ರಬಲ ಒಗ್ಗಟ್ಟಿನ ಪ್ರತಿಪಕ್ಷಗಳ ಕೂಟವನ್ನು ರಚಿಸುವುದು ನಿತೀಶ್ ಕುಮಾರ್ ಅವರ ಅಜೆಂಡಾ ಆಗಿದೆ.
ಇದನ್ನೂ ಓದಿ: Rahul Gandhi: ರಾಹುಲ್ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದ ಮಲ್ಲಿಕಾರ್ಜುನ ಖರ್ಗೆ
ಈ ಮೊದಲು ಲಾಲು ಪ್ರಸಾದ್ ಯಾದವ್ ಅವರನ್ನು ನಿತೀಶ್ ಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದರು. ಉದ್ಯೋಗಕ್ಕಾಗಿ ಭೂಮಿ ಹಗರಣ ಸಂಬಂಧ ವಿಚಾರಣೆಗೆ ಸಿಬಿಐ ಕರೆದಿರುವ ಹಿನ್ನೆಲೆಯಲ್ಲಿ ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಅವರು ಈಗಾಗಲೇ ದಿಲ್ಲಿಯಲ್ಲೇ ಬೀಡು ಬಿಟ್ಟಿದ್ದಾರೆ.
ಬಿಜೆಪಿಯನ್ನು ಎದುರಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಒಗ್ಗೂಡಿಸುವ ಪ್ರಯತ್ನದಲ್ಲಿ, ಖರ್ಗೆ ಇತ್ತೀಚೆಗೆ ಹಲವಾರು ವಿರೋಧ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಸಹ ಸಂಪರ್ಕಿಸಿದ್ದಾರೆ ಮತ್ತು ಮುಂಬರುವ ವಾರಗಳಲ್ಲಿ ಉನ್ನತ ವಿರೋಧ ಪಕ್ಷದ ನಾಯಕರೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ.