ರಾಯಪುರ (ಛತ್ತೀಸ್‌ಗಢ): ದೇಶದಲ್ಲಿ ಈಗ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ವನ್ನು ಕೇವಲ ಆರ್ಥಿಕ ವಿಕಾಸದ ಆಧಾರದಲ್ಲಿ ಅಳತೆ ಮಾಡಲಾಗುತ್ತಿದೆ. ಅದರ ಬದಲಾಗಿ ಪರ್ಯಾಯ ಸೂಚ್ಯಂಕವೊಂದನ್ನು ರೂಪಿಸಬೇಕಾಗಿದೆ ಎಂದು ಸ್ವದೇಶಿ ಜಾಗರಣ ಮಂಚ್ ಸಲಹೆ ನೀಡಿದೆ.
ಛತ್ತೀಸ್‌ಗಢದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮನ್ವಯ ಬೈಠಕ್ ಸಂದರ್ಭದಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ. ಸಂಘ ಪರಿವಾರದ 36 ಸಂಘಟನೆಗಳು ತಮ್ಮ ಕೆಲಸ, ಆಲೋಚನೆಗಳನ್ನು ಹಂಚಿಕೊಂಡಿದ್ದು, ಸ್ವದೇಶಿ ಜಾಗರಣ ಮಂಚ್ ಜಿಡಿಪಿಗೆ ಪರ್ಯಾಯವಾದ ಸೂಚ್ಯಂಕ ರೂಪಿಸಬೇಕು ಎಂದು ಸಲಹೆಯನ್ನು ನೀಡಿದೆ. ಇದು ಆರೆಸ್ಸೆಸ್ ಸಮನ್ವಯ ಬೈಠಕ್‌ನಲ್ಲಿ ಗಮನ ಸೆಳೆದ ಪ್ರಮುಖ ವಿಚಾರಗಳಲ್ಲಿ ಒಂದಾಗಿದೆ. ಆರೆಸ್ಸೆಸ್ ಸಹ ಸರಕಾರ್ಯವಾಹ ಡಾ. ಮನಮೋಹನ್ ವೈದ್ಯ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಚಾರಗಳನ್ನು ತಿಳಿಸಿದರು.
ಪರ್ಯಾಯ ಸೂಚ್ಯಂಕ ಯಾಕೆ?
ಈಗಿನ ಲೆಕ್ಕಾಚಾರದಲ್ಲಿ ಜಿಡಿಪಿಯನ್ನು ಕೇವಲ ಆರ್ಥಿಕ ವಿಕಾಸದ ಆಧಾರದಲ್ಲಿ ಅಳತೆ ಮಾಡಲಾಗುತ್ತಿದೆ. ಆದರೆ ಮನೆಯಲ್ಲಿ ಮಹಿಳೆಯರು ಬಹಳ ಕೆಲಸ ಮಾಡುತ್ತಾರೆ, ಅವರಿಗೆ ಸಂಬಳ ಸಿಗುವುದಿಲ್ಲ ಎಂಬ ಕಾರಣಕ್ಕೆ ಅವರ ಕೊಡುಗೆ ದೇಶದ ಆರ್ಥಿಕತೆಯಲ್ಲಿ ಎಲ್ಲಿಯೂ ಗಣನೆಗೇ ಬರುತ್ತಿಲ್ಲ. ಇದೆಲ್ಲವನ್ನೂ ಗಮನಿಸಿ, ಸಮಾಜದ ಎಲ್ಲ ಚಟುವಟಿಕೆಗಳನ್ನೂ ಗಣನೆಗೆ ತೆಗೆದುಕೊಂಡು ಸೂಚ್ಯಂಕ ತಯಾರಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ಸ್ವದೇಶಿ ಜಾಗರಣ್ ಮಂಚ್ ತಾನು ಸಲ್ಲಿಸಿದ ಪ್ರಸ್ತಾವನೆಯಲ್ಲಿ ತಿಳಿಸಿದೆ.
ಸ್ವದೇಶಿ ಜಾಗರಣ ಮಂಚ್ ಮಾರುಕಟ್ಟೆ ಸ್ವರೂಪವನ್ನು ಮರು ವಿನ್ಯಾಸಗೊಳಿಸುವ ವಿಚಾರದಲ್ಲಿ ಕೆಲಸ ಮಾಡುತ್ತಿದೆ ಎಂದು ಅದು ತಿಳಿಸಿದೆ ಎಂದು ಡಾ. ಮನಮೋಹನ್ ವೈದ್ಯ ಹೇಳಿದರು.
ದೇಶದಲ್ಲಿ ಮಹಿಳೆಯರು ಮನೆಯಲ್ಲಿ ಮಾಡುವ ಕೆಲಸಗಳನ್ನೂ ಸೇರಿಸಿಕೊಂಡರೆ, ಅದಕ್ಕೂ ಮೌಲ್ಯವಿದೆ ಎಂದು ನಿರೂಪಿಸಿದರೆ ದೇಶದ ಜಿಡಿಪಿ ಇನ್ನೂ ಎತ್ತರಕ್ಕೆ ಹೋಗುವ ಸಾಧ್ಯತೆ ಇದೆ.
ಕಿಸಾನ್ ಸಂಘ ಸಲಹೆ
ದೇಶದಲ್ಲಿ ನೈಸರ್ಗಿಕ, ಸಾವಯವ ಕೃಷಿಗೆ ಒತ್ತು ನೀಡಬೇಕು. ಕೃಷಿ ಶಿಕ್ಷಣದಲ್ಲಿ ಬದಲಾವಣೆ ಮಾಡಬೇಕಿದೆ ಎಂದು ಕಿಸಾನ್ ಸಂಘ ಸಲಹೆ ನೀಡಿದೆ.
ಗ್ರಾಹಕ್ ಪಂಚಾಯತ್ ಸಲಹೆ ಏನು?
ಈಗೀಗ ದೇಶದಲ್ಲಿ ಬ್ರ್ಯಾಂಡೆಡ್ ಅದರಲ್ಲೂ ವಿದೇಶಿ ಬ್ರ್ಯಾಂಡ್‌ಗಳ ವ್ಯಾಮೋಹ ಹೆಚ್ಚಿದೆ. ಆದರೆ, ಅದರ ಬದಲಾಗಿ ಸ್ಥಳೀಯ ಉತ್ಪನ್ನಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕಾಗಿದೆ. ನಮ್ಮ ಸ್ಥಳೀಯ ಉತ್ಪನ್ನಗಳ ಖರೀದಿಯಿಂದ ಸ್ಥಳೀಯ ಆರ್ಥಿಕತೆಗೆ ಪೂರಕವಾಗುತ್ತದೆ ಎಂದು ಗ್ರಾಹಕ ಪಂಚಾಯತ್ ಅಭಿಪ್ರಾಯ ಪಟ್ಟಿದೆ.
ಏನಿದು ಸಮನ್ವಯ ಬೈಠಕ್?
ರಾಷ್ಟ್ರೀಯ ಸ್ವಯಂಸೇವಕ ಸಂಘದಡಿ ಕಾರ್ಯಾಚರಿಸುತ್ತಿರುವ ೩೬ ಸಂಘಟನೆಗಳ ನಡುವೆ ಸಮನ್ವಯಕ್ಕಾಗಿ ಸೆಪ್ಟೆಂಬರ್ ೧೦ರಂದು ಮೂರು ದಿನಗಳ ಈ ಬೈಠಕ್ ಆರಂಭಗೊಂಡಿದೆ. ವಿದ್ಯಾ ಭಾರತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸಕ್ಷಮ್, ವನವಾಸಿ ಕಲ್ಯಾಣ್ ಆಶ್ರಮ್, ಸೇವಾ ಭಾರತಿ, ವಿಶ್ವ ಹಿಂದೂ ಪರಿಷತ್, ರಾಷ್ಟ್ರ ಸೇವಿಕಾ ಸಮಿತಿ, ಭಾರತೀಯ ಜನತಾ ಪಾರ್ಟಿ, ಅಖಿಲ ಭಾರತೀಯ ಮಜ್ದೂರ್ ಸಂಘ ಸೇರಿದಂತೆ ರಾಷ್ಟ್ರೀಯತೆ ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸುವ ೩೬ ಸಂಸ್ಥೆಗಳು ಈ ಸಭೆಯಲ್ಲಿ ಪಾಲ್ಗೊಂಡಿವೆ. ಸಂಘಟನೆಗಳು ತಾವು ಮಾಡುತ್ತಿರುವ ಕೆಲಸ ಮತ್ತು ಮುಂದೆ ಸಮಗ್ರವಾಗಿ ಆಗಬೇಕಾಗಿರುವ ಬದಲಾವಣೆಗಳಿಗೆ ಸಲಹೆ ನೀಡಿವೆ.
ಸರ ಸಂಘ ಚಾಲಕ ಡಾ. ಮೋಹನ್ ಭಾಗವತ್, ದತ್ತಾತ್ರೇಯ ಹೊಸಬಾಳೆ, ಕೃಷ್ಣ ಗೋಪಾಲ್, ಮನ್‌ಮೋಹನ್ ವೈದ್ಯ, ಅರುಣ್ ಕುಮಾರ್, ಮುಕುಂದ್, ರಾಮ್‌ದತ್ ಚಕ್ರಧರ್ ಸೇರಿದಂತೆ ಎಲ್ಲ ಸಹ ಸರಕಾರ್ಯವಾಹರು ಈ ಬೈಠಕ್‌ನಲ್ಲಿ ಪಾಲೊಂಡಿದ್ದು, ಸೋಮವಾರ ಸಂಜೆ ಸಮಾರೋಪಗೊಳ್ಳಲಿದೆ.