Site icon Vistara News

ಶಿಂಧೆಗೆ ಮಹಾ ಸಿಎಂ ಕುರ್ಚಿ ಬಿಟ್ಟುಕೊಟ್ಟರೂ, ಪ್ರಮುಖ ಖಾತೆಗಳು ಬಿಜೆಪಿ ಕೈಗೆ ಸಂಭವ

devendra-shinde

ಮುಂಬಯಿ: ಏಕನಾಥ್‌ ಶಿಂಧೆ ಅವರಿಗೆ ಮಹಾರಾಷ್ಟ್ರ ಸಿಎಂ ಪದವಿಯನ್ನು ಬಿಟ್ಟುಕೊಟ್ಟರೂ, ಪ್ರಮುಖ ಖಾತೆಗಳನ್ನು ಬಿಜೆಪಿ ತನ್ನ ಬಳಿಯೇ ಇಟ್ಟುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ದೇವೇಂದ್ರ ಫಡ್ನವಿಸ್‌ ಉಪಮುಖ್ಯಮಂತ್ರಿಯಾಗಿ ರಾಜ್ಯ ಮತ್ತು ಸರ್ಕಾರದಲ್ಲಿ ಪಕ್ಷದ ಹಿತಾಸಕ್ತಿಯನ್ನು ನೋಡಿಕೊಳ್ಳಲಿದ್ದಾರೆ.

ಏಕನಾಥ್‌ ಶಿಂಧೆಗೆ ಮುಖ್ಯಮಂತ್ರಿ ಹುದ್ದೆಯನ್ನು ಪಕ್ಷ ಬಿಟ್ಟುಕೊಡಲಿದೆ ಎಂಬ ಸಂಗತಿ ಮಹಾರಾಷ್ಟ್ರ ಬಿಜೆಪಿಯ ಯಾವೊಬ್ಬ ನಾಯಕರಿಗೂ ಗೊತ್ತಿರಲಿಲ್ಲ. ಅವರಿಗೆಲ್ಲ ಹೈಕಮಾಂಡ್‌ ನಿರ್ಣಯದಿಂದ ಶಾಕ್‌ ಆಗಿತ್ತು. ಆದರೆ ಉದ್ಧವ್‌ ಠಾಕ್ರೆ ರೆಬೆಲ್‌ ಶಾಸಕರಿಗೆ ಸಿಎಂ ಹುದ್ದೆಯನ್ನೂ ಬಿಟ್ಟುಕೊಡುವ ಆಫರ್‌ ಮುಂದಿಟ್ಟ ಬಳಿಕ ಬಿಜೆಪಿಯ ಹೈಕಮಾಂಡ್‌, ಮುಖ್ಯಮಂತ್ರಿ ಪಟ್ಟವನ್ನು ಏಕನಾಥ್‌ ಶಿಂಧೆ ಅವರಿಗೆ ವಹಿಸಲು ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.

ಶಿಂಧೆ ಬಣಕ್ಕೆ ೧೫ ಸಚಿವ ಸ್ಥಾನ, ಬಿಜೆಪಿಗೆ ಗೃಹ, ಹಣಕಾಸು, ಕಂದಾಯ?

ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಸೂತ್ರವನ್ನು ಸಿದ್ಧಪಡಿಸುವ ನಿರೀಕ್ಷೆ ಇದೆ. ಏಕನಾಥ್‌ ಶಿಂದೆ ಬಣಕ್ಕೆ ೧೫ ಸಚಿವ ಸ್ಥಾನ, ಬಿಜೆಪಿಗೆ ಗೃಹ, ಹಣಕಾಸು, ಕಂದಾಯ, ಲೋಕೋಪಯೋಗಿ, ಶಿಕ್ಷಣ, ಪರಿಸರ, ಕೃಷಿ ಸೇರಿದಂತೆ ಪ್ರಮುಖ ಖಾತೆಗಳು ದೊರೆಯುವ ಸಾಧ್ಯತೆ ಇದೆ. ಈ ಮೂಲಕ ನನೆಗುದಿಯಲ್ಲಿರುವ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಚುರುಕುಗೊಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಬುಲೆಟ್‌, ಮೆಟ್ರೊ ರೈಲಿನ ಯೋಜನೆಗೆ ಉದ್ಧವ್‌ ಠಾಕ್ರೆ ಸರ್ಕಾರ ಅಡ್ಡಗಾಲು ಹಾಕಿತ್ತು.

೨೦೧೪ರಲ್ಲಿ ಬಿಜೆಪಿ-ಶಿವಸೇನಾ ಸರ್ಕಾರದಲ್ಲಿ ಶಿವಸೇನಾಕ್ಕೆ ೧೨ ಖಾತೆಗಳನ್ನು ನೀಡಲಾಗಿತ್ತು. ಆದರೆ ಅದರಲ್ಲಿ ಯಾವುದೂ ಪ್ರಭಾವಿ ಖಾತೆಗಳು ಇದ್ದಿರಲಿಲ್ಲ. ಇದರಿಂದ ಶಿವಸೇನಾ ಮುನಿಸಿಕೊಂಡಿತ್ತು. ಆದರೆ ಈ ಸಲ ಏಕನಾಥ್‌ ಶಿಂಧೆಗೆ ಚೌಕಾಶಿ ಮಾಡಲು ಹೆಚ್ಚಿನ ಬಲ ಸಿಕ್ಕಿದೆ. ಶಿಂಧೆ ಬಣದಲ್ಲಿರುವ ೫೦ ರೆಬೆಲ್‌ ಶಾಸಕರ ಪೈಕಿ ೯ ಮಂದಿ ಎಂವಿಎ ಸರ್ಕಾರದಲ್ಲಿ ಸಚಿವರಾಗಿದ್ದವರು.

ಮಹಾರಾಷ್ಟ್ರ ಕ್ಯಾಬಿನೆಟ್‌ ಸಿಎಂ ಹುದ್ದೆ ಸೇರಿ ೪೩ ಸ್ಥಾನಗಳ ಗಾತ್ರವನ್ನು ಹೊಂದಿದೆ. ಏಕನಾಥ್‌ ಶಿಂಧೆ ನಗರಾಭಿವೃದ್ಧಿ ಖಾತೆಯನ್ನು ತಮ್ಮ ಬಳಿ ಇಟ್ಟುಕೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಅಧಿಕಾರ ಬದಲಾವಣೆ ಎಫೆಕ್ಟ್‌, ಬುಲೆಟ್‌ ರೈಲು ಯೋಜನೆಗೆ ಸ್ಪೀಡ್‌ ನಿರೀಕ್ಷೆ

Exit mobile version