Site icon Vistara News

Amala Paul | ಎರ್ನಾಕುಲಂನ ದೇಗುಲ ಪ್ರವೇಶಕ್ಕೆ ನಿರ್ಬಂಧ! ಬೇಸರ ವ್ಯಕ್ತಪಡಿಸಿದ ಹೆಬ್ಬುಲಿ ನಟಿ ಅಮಲಾ ಪೌಲ್

ತಿರುವನಂತಪುರಂ: ನಟ ನಟಿಯರು ದೇವಸ್ಥಾನ, ಧಾರ್ಮಿಕ ಸ್ಥಳಗಳಿಗೆ ತೆರಳುವ ವಿಚಾರ ಸಾಕಷ್ಟು ಸುದ್ದಿಯಾಗುತ್ತಿರುತ್ತದೆ. ಆದರೆ ಇತ್ತೀಚೆಗೆ ನಟಿ ಅಮಲಾ ಪೌಲ್‌ (Amala Paul) ಅವರಿಗೆ ದೇವಸ್ಥಾನದ ಒಳಗೆ ಪ್ರವೇಶವನ್ನೇ ನೀಡದಿರುವುದು ಸುದ್ದಿಯಾಗಿದೆ. ಕಿಚ್ಚ ಸುದೀಪ್ ಅವರ ಹೆಬ್ಬುಲಿ ಚಿತ್ರದಲ್ಲಿ ಅಮಲಾ ಪೌಲ್ ಅವರು ನಾಯಕಿಯಾಗಿದ್ದರು.

ಇದನ್ನೂ ಓದಿ: Bhagavad Gita | ಕೇರಳದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಲ್ಲಿ ಭಗವದ್ಗೀತೆ, ಸಂಸ್ಕೃತ ವ್ಯಾಕರಣದ ದೇವಭಾಷಾ ಸಿಲಬಸ್ ಜಾರಿ

ಅಮಲಾ ಅವರು ಸೋಮವಾರ ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ದೇಗುಲಕ್ಕೆ ತೆರಳಿದ್ದಾರೆ. ಆದರೆ ಅಲ್ಲಿನ ಆಡಳಿತ ಮಂಡಳಿಯು ನಟಿಯನ್ನು ದೇಗುಲದ ಗೇಟಿನ ಬಳಿಯೇ ತಡೆದಿದ್ದಾರೆ. “ಈ ದೇಗುಲದೊಳಗೆ ಹಿಂದೂ ಧರ್ಮದವರ ಪ್ರವೇಶಕ್ಕೆ ಮಾತ್ರ ಅವಕಾಶವಿದೆ” ಎಂದು ತಿಳಿಸಿದ್ದಾರೆ. ಕ್ರಿಶ್ಚಿಯನ್‌ ಧರ್ಮದವರಾದ ಅಮಲಾ ಅವರಿಗೆ ದೇವರ ದರ್ಶನ ಪಡೆಯುವುದಕ್ಕೆ ಆಡಳಿತ ಮಂಡಳಿ ಅವಕಾಶ ಮಾಡಿಕೊಟ್ಟಿಲ್ಲ.


ಈ ವಿಚಾರವಾಗಿ ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ದೇಗುಲದ ಪ್ರವಾಸಿಗರ ಡೈರಿಯಲ್ಲಿ ಇದೇ ವಿಚಾರವನ್ನು ಬರೆದು ಬಂದಿದ್ದಾರೆ. “ನಾನು ಹಿಂದೂ ಅಲ್ಲ ಎನ್ನುವ ಕಾರಣಕ್ಕೆ ದೇವರ ದರ್ಶನಕ್ಕೆ ಅವಕಾಶ ಕೊಟ್ಟಿಲ್ಲ. ನಾನು ದೇವರ ದರ್ಶನ ಪಡೆಯದಿದ್ದರೂ ದೇವರ ಚೈತನ್ಯವನ್ನು ಅನುಭವಿಸಿದ್ದೇನೆ. 2023ರಲ್ಲಿ ನಾವಿದ್ದರೂ ಈಗಲೂ ಧಾರ್ಮಿಕ ತಾರತಮ್ಯ ಇದೆ ಎನ್ನುವುದು ಬೇಸರ ತರುತ್ತಿದೆ. ಈ ತಾರತಮ್ಯ ಹೋಗಬೇಕು. ಎಲ್ಲ ಧರ್ಮದವರಿಗೂ ಸಮಾನ ಅವಕಾಶ ಸಿಗುವ ಕಾಲವೊಂದು ಬಂದೇ ಬರುತ್ತದೆ” ಎಂದು ನಟಿ ಬರೆದು ಬಂದಿದ್ದಾರೆ.

ಈ ವಿಚಾರವಾಗಿ ದೇಗುಲದ ಆಡಳಿತ ಮಂಡಳಿ ಪ್ರತಿಕ್ರಿಯಿಸಿದ್ದು, “ಹಲವಾರು ವರ್ಷಗಳಿಂದ ಈ ನಿಯಮ ನಮ್ಮಲ್ಲಿ ಜಾರಿಯಿದೆ. ನಾವು ಅಮಲಾ ಅವರ ವಿಚಾರದಲ್ಲೂ ಅದನ್ನೇ ಪಾಲಿಸಿದ್ದೇವೆ. ಜನಸಾಮಾನ್ಯರು ಬಂದಾಗ ಇದೊಂದು ದೊಡ್ಡ ವಿಚಾರ ಆಗುವುದೇ ಇಲ್ಲ. ಆದರೆ ಸೆಲೆಬ್ರಿಟಿಗಳು ಬಂದಾಗ ಇದನ್ನೇ ದೊಡ್ಡ ವಿಚಾರ ಮಾಡಿ ವಿವಾದ ಸೃಷ್ಟಿಸಲಾಗುತ್ತದೆ” ಎಂದು ತಿಳಿಸಿದೆ.

ಇದನ್ನೂ ಓದಿ: Shiva Temple Collapse | ಜೆಸಿಬಿ ಡಿಕ್ಕಿಯಾಗಿ ಕುಸಿದು ಬಿದ್ದ ಶಿವನ ದೇವಸ್ಥಾನ; ಚರಂಡಿ ನಿರ್ಮಾಣ ಮಾಡುತ್ತಿದ್ದಾಗ ಎಡವಟ್ಟು

ಅಮಲಾ ಅವರು ಅಜಯ್‌ ದೇವಗನ್‌ ಅವರ ಮುಂಬರುವ ಚಿತ್ರವಾದ ʼಭೋಲಾʼದಲ್ಲಿ ನಟಿಸಲಿದ್ದಾರೆ. ವಾರಾಣಸಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಅದರಲ್ಲಿ ನಟಿ ಬನಾರಸಿ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವರದಿಯಿದೆ. ಈ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ಮಾಹಿತಿ ಕೊಟ್ಟಿಲ್ಲ.

Exit mobile version