Site icon Vistara News

Live Updates: ಅಮರನಾಥ ಯಾತ್ರೆ ದುರಂತ; ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆ

Amarnath tragedy

ನವ ದೆಹಲಿ: ಜಮ್ಮು-ಕಾಶ್ಮೀರದ ಅಮರನಾಥ ಗುಹಾ ದೇವಾಲಯದ ಮೂಲ ಶಿಬಿರದ ಬಳಿ ನಡೆದ ಮಹಾ ಮೇಘಸ್ಫೋಟದಲ್ಲಿ ಮೃತಪಟ್ಟ ಯಾತ್ರಿಕರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಸುಮಾರು 40ಮಂದಿ ಗಾಯಗೊಂಡಿದ್ದಾರೆ. ಭಾರತೀಯ ಸೇನೆ ಯೋಧರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುಮಾರು 30-35ಮಂದಿ ನಾಪತ್ತೆಯಾಗಿದ್ದು, ಐವರು ಮಾತ್ರ ಪತ್ತೆಯಾಗಿದದಾರೆ. ಅತಿಯಾದ ಮಳೆಯಿಂದಾಗಿ ಪರ್ವತ ಪ್ರದೇಶದಿಂದ ಒಂದೇ ಸಮ ನೀರು ಚಿಮ್ಮುತ್ತಿದೆ. ಇದರಿಂದಾಗಿ ಗುಡ್ಡಗಳು ಕುಸಿದು ಬೀಳುತ್ತಿದ್ದು, ಶಿಬಿರದಲ್ಲಿದ್ದ 25ಕ್ಕೂ ಹೆಚ್ಚು ಟೆಂಟ್‌ಗಳು, ಯಾತ್ರಿಕರಿಗೆ ಅಡುಗೆ ಮಾಡಲೆಂದು ನಿರ್ಮಿಸಲಾಗಿದ್ದ ಮೂರು ಟೆಂಟ್‌ಗಳೆಲ್ಲ ಕೊಚ್ಚಿಕೊಂಡು ಹೋಗಿವೆ.

ಏನೆಲ್ಲ ಆಯ್ತು?
ಶುಕ್ರವಾರ ಸಂಜೆ 5.30ರ ಹೊತ್ತಿಗೆ ಅಮರನಾಥ ಗುಹೆ ದೇಗುಲದ ಸಮೀಪದಲ್ಲಿಯೇ ಮೇಘಸ್ಫೋಟ ಉಂಟಾಗಿತ್ತು. ಗುಹೆಯ ಅಕ್ಕಪಕ್ಕದಿಂದ ನೀರು ಒಮ್ಮೆಲೇ ಜೋರಾಗಿ ಬರಲು ಶುರುವಾಯಿತು. ಈ ಅವಘಡ ಶುರುವಾಗುತ್ತಿದ್ದಂತೆ ಬಾಲ್ಟಾಲ್‌ ಮೂಲ ಶಿಬಿರದಲ್ಲಿರುವವರನ್ನೆಲ್ಲ ಸ್ಥಳಾಂತರ ಮಾಡಲಾಗಿದೆ. ನಿನ್ನೆ ಘಟನೆ ನಡೆದಾಗಿನಿಂದ ಇಲ್ಲಿಯವರೆಗೆ 16 ಮೃತದೇಹಗಳು ಪತ್ತೆಯಾಗಿವೆ. ಮೇಘಸ್ಫೋಟದಿಂದ ಸುರಿದ ಭಾರಿ ಮಳೆಯಿಂದಾಗಿ ಕಲ್ಲು, ಮಣ್ಣುಗಳೆಲ್ಲ ಕುಸಿದು ಬಿದ್ದಿವೆ. ಅದರಡಿಯಲ್ಲಿ ಮನುಷ್ಯರು ಸಿಕ್ಕಿಬಿದ್ದಿದ್ದಾರೆ. ಇವತ್ತಿನವರೆಗೆ 15ಸಾವಿರ ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಗಾಯಗೊಂಡವರಿಗೆ ಚಿಕಿತ್ಸೆಯನ್ನೂ ಕೊಡಲಾಗುತ್ತಿದೆ.

ಭಾರತೀಯ ಸೇನೆಯ ಪ್ಯಾರಾಮಿಲಿಟರಿ ಪಡೆಯ ಸಿಬ್ಬಂದಿ, ಎನ್‌ಡಿಆರ್‌ಎಫ್‌ ತಂಡಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ. ರಕ್ಷಣಾ ಕಾರ್ಯಾಚರಣೆಗಾಗಿ ಸಣ್ಣ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಮೇಘಸ್ಫೋಟದಿಂದ ಉಂಟಾದ ಅವಘಡದಲ್ಲಿ ನಾಪತ್ತೆಯಾದವರನ್ನು ಹುಡುಕಲು, ಮಣ್ಣು-ಕಲ್ಲಿನ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಇಂಡೊ-ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ (ITBP) ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ನಮ್ಮ ಪರ್ವತ ರಕ್ಷಣಪಡೆಯವರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಐಟಿಬಿಪಿ ವಕ್ತಾರ ವಿವೇಕ್‌ ಕುಮಾರ್‌ ಪಾಂಡೆ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರತಿಕೂಲ ಹವಾಮಾನ: ಅಮರನಾಥ ಯಾತ್ರೆಗೆ ತಾತ್ಕಾಲಿಕ ತಡೆ, 3000 ಮಂದಿ ಶಿಬಿರದಲ್ಲಿ

Prabhakar R

ಜಮ್ಮು-ಕಾಶ್ಮೀರ ಸ್ಥಳೀಯ ಆಡಳಿತದ ಸೂಚನೆಯಂತೆ ಶುಕ್ರವಾರ ದರ್ಶನಕ್ಕೆ ತೆರಳಲು ಬೇಸ್ ಕ್ಯಾಂಪ್‌ಗೆ ಮಹಿಳಾ ತಂಡ ತೆರಳಿತ್ತು. ಬಳಿಕ ದರ್ಶನಕ್ಕೆ ಹೋಗಲಾಗದೇ ಬೇಸ್ ಕ್ಯಾಂಪ್‌ನಿಂದ ತಂಡ ಅಮರನಾಥ ಯಾತ್ರೆಯನ್ನೇ ರದ್ದುಗೊಳಿಸಿ ಶ್ರೀನಗರಕ್ಕೆ ತಲುಪಿದ್ದು, ಬಳಿಕ ಬೆಂಗಳೂರಿಗೆ ಮರಳಿ ಬರಲಿದೆ. ಜುಲೈ 4ರಂದು ತಂಡ ಶಿವಮೊಗ್ಗದಿಂದ ಅಮರನಾಥ ದರ್ಶನಕ್ಕೆ ತೆರಳಿತ್ತು.

Prabhakar R

ಅಮರನಾಥ ಯಾತ್ರೆಗೆ ಶಿವಮೊಗ್ಗದಿಂದ ತೆರಳಿದ್ದ ಮಹಿಳೆಯರ ತಂಡ ಸುರಕ್ಷಿತವಾಗಿದೆ. ತಂಡದಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಸುರೇಖಾ ಮುರಳೀಧರ್ ಸೇರಿ 16 ಮಂದಿ ಇದ್ದರು. ಪೂರ್ವ ನಿಗದಿಯಂತೆ ಶುಕ್ರವಾರವೇ ಈ ತಂಡ ಅಮರನಾಥ ದರ್ಶನಕ್ಕೆ ಹೋಗಬೇಕಿತ್ತು. ಆದರೆ ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ದರ್ಶನ ಮುಂದೂಡಲ್ಪಟ್ಟಿತ್ತು. ಹೀಗಾಗಿ ಅಮರನಾಥ ಸಮೀಪದ ಪಹಲ್ಗಾಮ್ ಬೇಸ್‌ಕ್ಯಾಂಪ್‌ನಲ್ಲಿ ಮಹಿಳಾ ತಂಡ ತಂಗಿತ್ತು.

Lakshmi Hegde

ದುರ್ಘಟನೆ ನಡೆದ ಬೆನ್ನಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಜಮ್ಮು ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಸ್ಥಳದಲ್ಲಿ ಇರುವ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುವ ಜತೆ, ಕೇಂದ್ರದಿಂದ ಎಲ್ಲ‌ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

Lakshmi Hegde

ಶುಕ್ರವಾರ ಮಧ್ಯಾಹ್ನ 4.30ರಿಂದ ಸಂಜೆ 6.30ರವರೆಗೆ ದೇವಾಲಯದ ಬಳಿ 31 ಎಂಎಂ ಮಳೆಯಾಗಿದೆ. ಇಷ್ಟು ಭರ್ಜರಿ ಮಳೆಯಿಂದಲೇ ಭೂಕುಸಿತ ಉಂಟಾಯಿತು ಎಂದು ಹವಾಮಾನ ಇಲಾಖೆ ತಿಳಿಸಿದೆ.

Exit mobile version