ಶ್ರೀನಗರ: ಜೂನ್ ೩೦ರಂದು ಆರಂಭಗೊಂಡಿರುವ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಪಹಲ್‌ಗಾಂವ್ ಪ್ರದೇಶದಲ್ಲಿ ಅಮರನಾಥ ಗುಹೆಗೆ ಹೋಗುವ ದಾರಿಯಲ್ಲಿ ಹವಾಮಾನ ಪ್ರತಿಕೂಲವಾಗಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.
ಪಹಲ್‌ಗಾಂವ್‌ನ ನುನ್ವಾನ್ ಮೂಲ ಶಿಬಿರದಲ್ಲಿ ಸುಮಾರು ೩೦೦೦ ಯಾತ್ರಿಕರಿದ್ದು, ಅವರನ್ನು ಮುಂದೆ ಹೋಗದಂತೆ ತಡೆಯಲಾಗಿದೆ. ಅಲ್ಲಿಂದ ಮುಂದೆ ಯಾರನ್ನೂ ಬಿಡಲಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
೪೦೦೦ ಯಾತ್ರಿಕರು ಭೇಟಿ
ಜೂನ್ ೩೦ರಂದು ಆರಂಭಗೊಂಡ ಯಾತ್ರೆಯಲ್ಲಿ ಇದುವರೆಗೆ ೬೫೦೦೦ ಮಂದಿ ಯಾತ್ರಿಕರು ಗುಹಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ, ಪ್ರತಿಕೂಲ ಹವಾಮಾನ ಮತ್ತು ಆರೋಗ್ಯದ ಸಮಸ್ಯೆಯಿಂದ ಒಟ್ಟು ಐವರು ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಯಾತ್ರೆ ಆಗಸ್ಟ್ ೧೧ರ ರಕ್ಷಾಬಂಧನದ ದಿನ ಅಂತ್ಯಗೊಳ್ಳಲಿದೆ.
ಎರಡು ರೂಟ್‌ಗಳಲ್ಲಿ ಯಾತ್ರೆ
ಅಮರನಾಥ ಯಾತ್ರೆ ಎರಡು ರೂಟ್‌ಗಳಲ್ಲಿ ನಡೆಯುತ್ತದೆ. ಉತ್ತರ ಕಾಶ್ಮೀರದ ಬಲ್ಟಾಲ್ ರೂಟ್‌ನಲ್ಲಿ ಹೋಗುವವರು ೩,೮೮೮ ಮೀಟರ್ ಎತ್ತರದ ಈ ಗುಹಾ ದೇವಾಲಯಕ್ಕೆ ೧೪ ಕಿ.ಮೀ. ಟ್ರೆಕ್ಕಿಂಗ್ ಮಾಡಬೇಕು. ಬೇಸ್ ಕ್ಯಾಂಪ್‌ನಿಂದ ಬೆಳಗ್ಗೆ ಹೊರಟು ಯಾತ್ರಿಕರು ಅದೇ ಸಂಜೆ ಮರಳಿ ಬರಬೇಕು.
ಸಾಂಪ್ರದಾಯಿಕವಾಗಿ ಹೋಗುವವರು ದಕ್ಷಿಣ ಕಾಶ್ಮೀರದ ಪಹಲ್‌ಗಾಂವ್ ರೂಟನ್ನು ಬಳಸುತ್ತಾರೆ. ಇದು ಸುಮಾರು ೪೮ ಕಿ.ಮೀ. ಉದ್ದದ ಮಾರ್ಗವಾಗಿದ್ದು, ನಾಲ್ಕು ದಿನ ಬೇಕಾಗುತ್ತದೆ. ಎರಡೂ ರೂಟ್‌ನಲ್ಲಿ ಹೆಲಿಕಾಪ್ಟರ್ ಸೇವೆಗೂ ಅವಕಾಶವಿದೆ.
ಇದನ್ನೂ ಓದಿ| ಅಮರನಾಥ ಯಾತ್ರಿಕರ ಮೇಲೆ ದಾಳಿಗೆ ಸ್ಕೆಚ್, ಇಬ್ಬರು ಮೋಸ್ಟ್ ವಾಂಟೆಡ್ ಉಗ್ರರು ಅರೆಸ್ಟ್, ಒಬ್ಬ I love NAMO ಎಂದಿದ್ದ!