Site icon Vistara News

Amazon Company | ಮತಾಂತರಕ್ಕೆ ಅಮೆಜಾನ್ ಕಂಪನಿ ಫಂಡಿಂಗ್! ಎನ್ಐಎ ತನಿಖೆಗೆ ಸ್ವದೇಶ್‌ ಜಾಗರಣ್‌ ಮಂಚ್‌ ಆಗ್ರಹ

amazon and Organizer

ನವದೆಹಲಿ: ಬಲವಂತದ ಮತಾಂತರದ ವಿರುದ್ಧ ಸುಪ್ರೀಂ ಕೋರ್ಟ್​ ಸಮರ ಸಾರಿರುವಂತೆಯೇ ಅತ್ತ ಈಶಾನ್ಯ ರಾಜ್ಯಗಳಲ್ಲಿ ಇ-ಕಾಮರ್ಸ್​ ದೈತ್ಯ ಅಮೆಜಾನ್​ ಸಂಸ್ಥೆ (Amazon Company) ಮತಾಂತರಕ್ಕೆ ಫಂಡಿಂಗ್ ಮಾಡುತ್ತಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ಆರೆಸ್ಸೆಸ್​ ಮುಖವಾಣಿ ಆರ್ಗನೈಸರ್​ನಲ್ಲಿ ( Organiser) ಈ ಕುರಿತು ಹಲವು ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ. ಈಶಾನ್ಯ ಭಾರತದಲ್ಲಿ ಮತಾಂತರಕ್ಕೆ ಅಮೆಜಾನ್​ ಆರ್ಥಿಕ ನೆರವು ನೀಡುತ್ತಿದೆ. ಅಮೆಜಾನ್ ಈಸ್ಟ್ ಇಂಡಿಯಾ ಕಂಪನಿ 2.0 ಆಗಿ ವರ್ತಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲದೇ, ಈ ಕುರಿತು ಎನ್ಐಎ ತನಿಖೆಗೆ ಸ್ವದೇಶ್ ಜಾಗರಣ್ ಮಂಚ್ ಒತ್ತಾಯಿಸಿದೆ.

ಈಶಾನ್ಯ ರಾಜ್ಯಗಳು ಮಾತ್ರವಲ್ಲದೇ ಪಂಜಾಬ್, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ವ್ಯಾಪಕವಾಗಿ ಮತಾಂತರವನ್ನು ಕೈಗೊಳ್ಳಲಾಗುತ್ತಿದೆ ಎಂದು ಸ್ವದೇಶಿ ಜಾಗರಣ್ ಮಂಚ್(ಎಸ್‌ಜೆಎಂ) ರಾಷ್ಟ್ರೀಯ ಸಂಚಾಲಕ ಅಶ್ವನಿ ಮಹಾಜನ್ ಅವರು ಹೇಳಿದ್ದಾರೆ. ಈ ಬಹುರಾಷ್ಟ್ರೀಯ ಇ-ಕಾಮರ್ಸ್ ಕಂಪನಿಗಳು ದೇಶದ ಸಣ್ಣ ವ್ಯಾಪಾರಸ್ಥರನ್ನು ಬೀದಿಗೆ ತಳ್ಳಿವೆ ಎಂದೂ ಅವರು ಆರೋಪಿಸಿದ್ದಾರೆ.

ಈ ದೈತ್ಯ ಇ ಕಾಮರ್ಸ್ ತಾಣಗಳ ಬಿಸಿನೆಸ್ ಮಾಡೆಲ್‌ ಬಗ್ಗೆ ತನಿಖೆ ನಡೆಸಬೇಕು ಎನ್ನುವುದು ಸ್ವದೇಶಿ ಜಾಗರಣ್ ಮಂಚ್(SJM) ಬಹುದಿನಗಳಿಂದಲೂ ಬೇಡಿಕೆ ಸಲ್ಲಿಸುತ್ತಾ ಬಂದಿದೆ. ವಿವಿಧ ಸ್ಥಳಗಳಿಂದ ನಮಗೆ ಬರುತ್ತಿರುವ ಪ್ರತಿಕ್ರಿಯೆಗಳ ಪ್ರಕಾರ ಅಮೆಜಾನ್ ಸಹ ಮತಾಂತರವನ್ನು ಉತ್ತೇಜಿಸುವುದಕ್ಕಾಗಿ ವ್ಯಾಪಾರೀ ಕುತಂತ್ರಗಳನ್ನು ಜಾರಿಗೊಳಿಸುತ್ತಿದೆ. ಅಮೆಜಾನ್‌ನ ಈ ಕೃತ್ಯವು ನಮ್ಮ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿರುವ ಮಹಾಜನ್, ಇ-ಕಾಮರ್ಸ್‌ ಕಂಪನಿಗಳ ತ್ವರಿತ ಬೆಳವಣಿಗೆಯನ್ನು ಕೇಂದ್ರ ತನಿಖಾ ಸಂಸ್ಥೆಗಳು ಕೂಡಲೇ ತನಿಖೆ ಮಾಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ಆರ್ಗನೈಸರ್ Amazing Cross Connection ಎಂಬ ಶೀರ್ಷಿಕೆಯಡಿ ವಿಸ್ತಾರ ವರದಿಯನ್ನು ಪ್ರಕಟಿಸಿದ್ದು, ಈಶಾನ್ಯ ಭಾರತದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಮೇಲೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಅವುಗಳನ್ನು ನಿಯಂತ್ರಿಸದೇ ಹೋದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ನಿರ್ಬಂಧಗಳನ್ನು ಹೇರುವುದರಿಂದ ಕ್ರೈಸ್ತ ಮಿಷನರಿಗಳ ಪಾಪ ಕೃತ್ಯಗಳು, ವೀಸಾ ನಿಯಮಗಳ ಉಲ್ಲಂಘನೆ ಮತ್ತು ದೇಶದ ಭೌಗೋಳಿಕತೆಯನ್ನು ಬದಲಿಸಲು ಕಾರ್ಪೊರೇಟ್ ಕಂಪನಿಗಳ ಜತೆ ಕೈಜೋಡಿಸಿರುವ ಸಂಗತಿಗಳೆಲ್ಲವೂ ಬಯಲಾಗಲಿವೆ ಎಂದು ತಿಳಿಸಲಾಗಿದೆ.

ಇ-ಕಾಮರ್ಸ್ ಅಮೆಜಾನ್ ಅಮೆರಿಕನ್ ಬ್ಯಾಪ್ಟಿಸ್ಟ್ ಮಿಷನ್(ಎಬಿಎಂ) ನಡೆಸುತ್ತಿರುವ ಕ್ರೈಸ್ತ ಮತಾಂತರ ವ್ಯವಸ್ಥೆಗೆ ಹಣಕಾಸು ನೆರವು ನೀಡುತ್ತಿದೆ. ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಮತಾಂತರವನ್ನು ನಡೆಸುವುದಕ್ಕಾಗಿ ಬಹು ರಾಷ್ಟ್ರೀಯ ಕಂಪನಿಗಳನ್ನು ನಡೆಸುತ್ತಿರುವವರು ಮತ್ತು ಆಲ್ ಇಂಡಿಯಾ ಮಿಷನ್(ಎಬಿಎಂ) ನಡುವೆ ನಂಟಿದೆ. ಈ ಮೂಲಕ ಅಕ್ರಮ ಹಣ ವರ್ಗಾವಣೆ ನಡೆಸುತ್ತಿರುವ ಎಲ್ಲ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಮೆಜಾನ್ ಮೂಲಕ ಭಾರತೀಯರು ಖರೀದಿಸುವ ಪ್ರತಿ ಖರೀದಿಯಿಂದ ಆಲ್ ಇಂಡಿಯಾ ಮಿಷನ್‌ಗೆ ದೇಣಿಗೆಯನ್ನು ಅಮೆಜಾನ್ ಒದಗಿಸುತ್ತದೆ. ಈಗಾಗಲೇ ಆಲ್ ಇಂಡಿಯಾ ಮಿಷನ್ ಮೂಲಕ ಈಶಾನ್ಯ ಭಾರತದಲ್ಲಿ 25 ಸಾವಿರ ಜನರನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಹಾಗೆ ನೋಡಿದರೆ, ಆರ್ಗನೈಸರ್ ಇದೇ ಮೊದಲ ಬಾರಿಯೇನೂ ಅಮೆಜಾನ್ ವಿರುದ್ಧ ಆರೋಪ ಮಾಡುತ್ತಿಲ್ಲ. ಈ ಹಿಂದೆಯೂ ಅಂದರೆ ಸೆಪ್ಟೆಂಬರ್ ತಿಂಗಳಲ್ಲೂ ಇಂಥದ್ದೇ ಒಂದು ವರದಿಯನ್ನು ಪ್ರಕಟಿಸಿತ್ತು.

ಆರ್ಗನೈಸರ್ ವರದಿಯಲ್ಲಿ ಏನಿದೆ?
| ಈಶಾನ್ಯ ಭಾರತದಲ್ಲಿ ವಿದೇಶಿ ಕ್ರಿಶ್ಚಿಯನ್​ ಮಿಷನರಿಗಳ ದಬ್ಬಾಳಿಕೆ
| ಮತಾಂತರ ಮನಿ ಲಾಂಡರಿಂಗ್‌ನಲ್ಲಿ ಅಮೆಜಾನ್ ಕಂಪನಿ ಭಾಗಿಯಾಗಿದೆ
| ಅಮೆಜಾನ್ ಸ್ಮೈಲ್​ ​ಫೌಂಡೇಶನ್ ಮೂಲಕ ಮತಾಂತರಕ್ಕೆ ಧನ ಸಹಾಯ
| ಆಲ್ ಇಂಡಿಯಾ ಮಿಷನ್​​ಗೆ ಅಮೆಜಾನ್ ಕಂಪನಿ​ಯಿಂದ ಹಣಕಾಸಿನ ನೆರವು
| 25 ಸಾವಿರ ಭಾರತೀಯರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ
| ಈಶಾನ್ಯ ಭಾರತದ ಭೌಗೋಳಿಕತೆ ಬದಲಾಯಿಸಲು ಅಮೆಜಾನ್ ಷಡ್ಯಂತ್ರ
| ಅಮೆರಿಕನ್ ಬ್ಯಾಪ್ಟಿಸ್ಟ್ ಚರ್ಚ್ ಜತೆ ಒಡನಾಟ ಹೊಂದಿರುವ ಅಮೆಜಾನ್​

ಇದನ್ನೂ ಓದಿ | Forced religious conversion | ಬಲವಂತದ ಮತಾಂತರದಿಂದ ದೇಶದ ಭದ್ರತೆಗೆ ಅಪಾಯ ಎಂದ ಸುಪ್ರೀಂಕೋರ್ಟ್

Exit mobile version