ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ (Ram Mandir) ಜನವರಿ 22ರಂದು ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗದವರು ಕನಿಷ್ಠ ರಾಮಮಂದಿರದ ಪ್ರಸಾದ ಸಿಗಲಿ ಎಂದು ಭಕ್ತರು ಕಾಯುತ್ತಿದ್ದಾರೆ. ಇದನ್ನೇ ಕೆಲ ವ್ಯಾಪಾರಿಗಳು ಬಂಡವಾಳವನ್ನಾಗಿಸಿಕೊಂಡಿದ್ದು, ಅಮೆಜಾನ್‌ನಲ್ಲಿ ರಾಮಮಂದಿರ ಪ್ರಸಾದದ (Ram Mandir Prasad) ಹೆಸರಿನಲ್ಲಿ ಸಿಹಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಇ-ಕಾಮರ್ಸ್ ಸಂಸ್ಥೆ ಅಮೆಜಾನ್‌ಗೆ (Amazon) ಕೇಂದ್ರ ಸರ್ಕಾರ ನೋಟಿಸ್ ನೀಡಿದೆ.
“ರಾಮಮಂದಿರದ ಪ್ರಸಾದ ಎಂದು ಅಮೆಜಾನ್‌ನಲ್ಲಿ ಸಿಹಿ ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಜನರ ದಾರಿ ತಪ್ಪಿಸಲಾಗುತ್ತಿದೆ. ಈ ಕುರಿತು ಕೂಡಲೇ ಕ್ರಮ ತೆಗೆದುಕೊಳ್ಳಬೇಕು” ಎಂದು ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ನೋಟಿಸ್ ನೀಡಿದೆ. ಸಿಹಿ ತಿನಿಸುಗಳನ್ನೇ “ಶ್ರೀರಾಮ ಮಂದಿರ ಅಯೋಧ್ಯೆ ಪ್ರಸಾದ” ಎಂಬುದಾಗಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿದೆ.
ಕಠಿಣ ಕ್ರಮ ಎಂದ ಅಮೆಜಾನ್
ಸಿಸಿಪಿಎ ನೋಟಿಸ್‌ಗೆ ಅಮೆಜಾನ್ ಪ್ರತಿಕ್ರಿಯೆ ನೀಡಿದೆ. “ಕಾನೂನಾತ್ಮಕವಾಗಿಯೇ ಉತ್ಪನ್ನಗಳನ್ನು ಮಾಡುವುದು ಅಮೆಜಾನ್ ನೀತಿಯಾಗಿದೆ. ನಮ್ಮ ನೀತಿಗೆ ವಿರುದ್ಧವಾಗಿ ಯಾವುದೇ ಉತ್ಪನ್ನಗಳನ್ನು ಮಾರಾಟ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಅಮೆಜಾನ್ ವಕ್ತಾರರೊಬ್ಬರು ಸ್ಪಷ್ಟನೆ ನೀಡಿದ್ದಾರೆ. ರಘುಪತಿ ತುಪ್ಪದ ಲಾಡು, ಖೊಯಾ ಖೋಬಿ ಲಾಡು, ದೇಸಿ ಹಸುವಿನ ಹಾಲಿನ ಪೇಡಾ ಸೇರಿ ರಾಮಮಂದಿರದ ಪ್ರಸಾದದ ಹೆಸರಿನಲ್ಲಿ ಹಲವು ಸಿಹಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: Ayodhya Rama Mandir: ರಾಮಮಂದಿರಕ್ಕೆ 50 ಕೋಟಿ ರೂ. ದೇಣಿಗೆ ನೀಡಿದ್ರಾ ಪ್ರಭಾಸ್?
ತಯಾರಾಗುತ್ತಿದೆ 7 ಸಾವಿರ ಕೆ.ಜಿ ರಾಮ ಹಲ್ವಾ
ರಾಮಮಂದಿರ ಲೋಕಾರ್ಪಣೆ ದಿನ ವಿಶೇಷ ‘ರಾಮ ಹಲ್ವಾ’ ತಯಾರಿಸಲಾಗುತ್ತದೆ. ವಿಶೇಷ ಪ್ರಸಾದವನ್ನು ನಾಗ್ಪುರ ಮೂಲದ, ಅಂತಾರಾಷ್ಟ್ರೀಯ ಖ್ಯಾತಿಯ ಬಾಣಸಿಗ ವಿಷ್ಣು ಮನೋಹರ್ ಅವರು ತಯಾರಿಸಲಿದ್ದಾರೆ. ವಿಷ್ಣು ಮನೋಹರ್ ಅವರು ರಾಮಮಂದಿರ ಉದ್ಘಾಟನೆಯ ದಿನ ಸುಮಾರು 7 ಸಾವಿರ ಕೆ.ಜಿ ರಾಮ ಹಲ್ವಾ ತಯಾರಿಸಲಿದ್ದಾರೆ. ಇದಕ್ಕಾಗಿ ಅವರು 12 ಸಾವಿರ ಲೀಟರ್ ನೀರಿನ ಸಾಮರ್ಥ್ಯದ ಬೃಹತ್ ಕಡಾಯಿಯೊಂದನ್ನು ಕೂಡ ತಯಾರಿಸಿದ್ದಾರೆ. “900 ಕೆಜಿ ರವೆ, 1 ಸಾವಿರ ಕೆಜಿ ತುಪ್ಪ, ಸಾವಿರ ಕೆಜಿ ಸಕ್ಕರೆ, 2 ಸಾವಿರ ಲೀಟರ್ ಹಾಲು, 2,500 ಲೀಟರ್ ನೀರು, 300 ಕೆಜಿ ಡ್ರೈ ಫ್ರೂಟ್ಸ್, 75 ಕೆಜಿ ಏಲಕ್ಕಿ ಪೌಡರ್ ಬಳಸಿಕೊಂಡು ವಿಶೇಷ ರಾಮ ಹಲ್ವಾ ತಯಾರಿಸಲಾಗುವುದು” ಎಂದು ವಿಷ್ಣು ಮನೋಹರ್ ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ