ಮುಂಬೈ: ಏಪ್ರಿಲ್ 14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ (Ambedkar Jayanti) ಅವರ ಜಯಂತ್ಯುತ್ಸವ. ದೇಶಾದ್ಯಂತ ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಗುತ್ತದೆ. ಅವರ ಆಚಾರ-ವಿಚಾರ, ಅಪಾರ ಜ್ಞಾನ, ಸಂವಿಧಾನ ರಚನೆ ಸೇರಿ ಹಲವು ವಿಷಯಗಳನ್ನು ಸ್ಮರಿಸಲಾಗುತ್ತದೆ. ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ನೆನೆಯಲಾಗುತ್ತದೆ. ಇನ್ನು ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ 18 ಸಾವಿರ ನೋಟ್‌ಬುಕ್‌ಗಳಿಂದ ಸಂವಿಧಾನ ಶಿಲ್ಪಿಯ ಭಾವಚಿತ್ರ ರಚಿಸಲಾಗಿದೆ. ಈ ಫೋಟೊ ಈಗ ವೈರಲ್ ಆಗಿದೆ.
ಮಹಾರಾಷ್ಟ್ರದ ಲಾಥೂರ್ ನಗರದಲ್ಲಿರುವ ಉದ್ಯಾನದಲ್ಲಿ 18 ಕಲಾವಿದರು ಶ್ರಮವಹಿಸಿ, 18 ಸಾವಿರ ನೋಟ್‌ಪುಸ್ತಕಗಳಿಂದ ಮೊಸಾಯಿಕ್ ಕಲಾ ಶೈಲಿಯಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ರಚಿಸಿದ್ದಾರೆ. ಇದು 100×110 ಅಡಿ ಭಾವಚಿತ್ರವನ್ನು 11 ಸಾವಿರ ಚದರ ಅಡಿಯಲ್ಲಿ ರಚಿಸಲಾಗಿದೆ. ಅಂಬೇಡ್ಕರ್ ಅವರ ಮನಮೋಹಕ ಭಾವಚಿತ್ರವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ದಿಸೆಯಲ್ಲಿ ಚಿತ್ರ ರಚಿಸಲಾಗಿದೆ ಎಂದು ತಿಳಿದುಬಂದಿದೆ.
ಲಾಥೂರ್ ಬಿಜೆಪಿ ಸಂಸದ ಸುಧಾಕರ್ ಶ್ರಂಗರೆ ಅವರು ಭಾವಚಿತ್ರದ ಹೊಣೆಯನ್ನು ಹೊತ್ತುಕೊಂಡಿದ್ದು, ಅಂಬೇಡ್ಕರ್ ಜಯಂತಿ ಬಳಿಕ 18 ಸಾವಿರ ನೋಟ್ ಪುಸ್ತಕಗಳನ್ನು ಬಡ ವಿದ್ಯಾರ್ಥಿಗಳಿಗೆ ವಿತರಣೆ ಮಾಡುವ ಉದ್ದೇಶ ಹೊಂದಿದ್ದಾರೆ. ಆ ಮೂಲಕ ಅಂಬೇಡ್ಕರ್ ಜಯಂತ್ಯುತ್ಸವದಂದು ಶಿಕ್ಷಣದ ಕುರಿತು ಜಾಗೃತಿ ಮೂಡಿಸುವುದು ಅವರ ಆಶಯವಾಗಿದೆ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.
ಅಲ್ಲದೆ, ಅಂಬೇಡ್ಕರ್ ಜಯಂತಿಯಾದ ಏಪ್ರಿಲ್ 14ರಂದು ಬಿಜೆಪಿ ದೇಶಾದ್ಯಂತ ʼಘರ್ ಘರ್ ಜೋಡೋʼ ಯಾತ್ರೆ ಆರಂಭಿಸಲಿದೆ. ದಲಿತ ಸಮುದಾಯವನ್ನು ಗುರಿಯಾಗಿಸಿಟ್ಟುಕೊಂಡು ಈ ಯಾತ್ರೆ ನಡೆಸಲಾಗುತ್ತಿದೆ. ಯಾತ್ರೆಯಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ದೇಶದ ದಲಿತರ ಮನೆ ಮನೆಗೆ ತೆರಳಲಿದ್ದಾರೆ. ಈವರೆಗೆ ಅವರು ಯಾವ ಸೌಲಭ್ಯದಿಂದ ವಂಚಿತರಾಗಿದ್ದರೋ ಆ ಸೌಲಭ್ಯವನ್ನು ಅವರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
ಅಂಬೇಡ್ಕರ್ ಜಯಂತಿಯಂದು ಆರಂಭವಾಗಲಿರುವ ಯಾತ್ರೆಯು ಬುದ್ಧ ಜಯಂತಿಯಾದ ಮೇ 5ಕ್ಕೆ ಮುಕ್ತಾಯವಾಗಲಿದೆ. ದೆಹಲಿಯ ತಲ್ಕತೊರ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ನಡೆಸಿ, ಯಾತ್ರೆಯನ್ನು ಮುಕ್ತಾಯ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ದಲಿತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Belagavi News: ಸುವರ್ಣಸೌಧದ ಎದುರು ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣ, ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ