ಕುಂಭಕೋಣಂ: ರಾಜಕಾರಣಿಗಳ ಅಬ್ಬರ, ಅಟ್ಟಹಾಸಕ್ಕೆ ಸಿಲುಕಿ ಜನಸಾಮಾನ್ಯರು ನಲುಗುವುದನ್ನು ಕೇಳಿದ್ದೇವೆ. ಆದರೆ, ತಮಿಳುನಾಡಿನಲ್ಲಿ ನಡೆದ ಒಂದು ವಿದ್ಯಮಾನದಲ್ಲಿ ಇವರ ದಾರ್ಷ್ಟ್ಯ ಎಷ್ಟರ ಮಟ್ಟಿಗೆ ಇತ್ತೆಂದರೆ ಮಂತ್ರಿಯೊಬ್ಬರ ಸಂಚಾರಕ್ಕೆ ರೋಗಿ ಇದ್ದ ಆಂಬ್ಯುಲೆನ್ಸನ್ನೇ ತಡೆದು ನಿಲ್ಲಿಸಲಾಗಿದೆ!
ಹೌದು, ತಮಿಳುನಾಡಿನ ಕುಂಭಕೋಣಂನಲ್ಲಿ ಡಿಎಂಕೆ ಸಚಿವ ಅನ್ಬಿಲ್ ಮಹೇಶ್ ಅವರಿಗೆ ದಾರಿ ಬಿಡಲೆಂದು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಐಸಿಯು ಅಂಬ್ಯುಲೆನ್ಸನ್ನೇ ತಡೆದು ನಿಲ್ಲಿಸಿದ್ದಾರೆ. ಸಚಿವರ ಕಾರು ಮತ್ತು ಜತೆಗಿದ್ದ ೧೫ ವಾಹನಗಳನ್ನು ಬಿಟ್ಟ ಬಳಿಕವಷ್ಟೇ ಆಂಬ್ಯುಲೆನ್ಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆಂಬ್ಯುಲೆನ್ಸ್ ಚಾಲಕ ಗುಂಯ್‌ಗುಡುವ ಹಾರ್ನ್ ಅನ್ನು ಜೋರಾಗಿ ಬಾರಿಸುತ್ತಿದ್ದರೂ ಪೊಲೀಸ್ ಅಧಿಕಾರಿಗೆ ಮನಸು ಕರಗಿಲ್ಲ. ಬಹುಶಃ ಅವರೂ ರಾಜಕಾರಣಿಗಳ ಆಕ್ರೋಶಕ್ಕೆ ಹೆದರಿದ್ದಾರೋ ಏನೋ.
ಈ ರೀತಿಯ ಅಮಾನವೀಯತೆ ಮೆರೆದ ಘಟನೆಯ ವಿಡಿಯೊ ಎಲ್ಲ ಕಡೆ ಹರಿದಾಡಿದ್ದು, ಸಾಮಾಜಿಕ ಜಾಲ ತಾಣದಲ್ಲಿ ರಾಜಕಾರಣಿಗಳ ಜನ್ಮ ಜಾಲಾಡಲಾಗುತ್ತಿದೆ.
ಅನ್ಬಿಲ್ ಮಹೇಶ್ ಅವರು ಕೊಲ್ಲಿಡಾಮ್‌ನಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಅವಲೋಕನ ಮಾಡುವುದಕ್ಕಾಗಿ ಈ ವಾಹನದಲ್ಲಿ ಹೊರಟಿದ್ದರು. ಅವರ ಜತೆಗೆ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳು ಕೂಡಾ ಇದ್ದರು. ಮಂತ್ರಿಗಳು ಮತ್ತು ಅಧಿಕಾರಿಗಳ ವಾಹನ ಸಾಕಷ್ಟು ದೂರ ಹೋದ ಬಳಿಕವೇ ಆಂಬ್ಯುಲೆನ್ಸ್ ಸೇರಿದಂತೆ ಉಳಿದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಯಿತು.
ʻʻಆನೈಕಟ್ಟಿ ಸೇತುವೆಯ ಒಂದು ಭಾಗದಲ್ಲಿ ರಿಪೇರಿ ಕೆಲಸ ನಡೆಯುತ್ತಿದೆ. ಮತ್ತೊಂದು ಭಾಗದಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಸೇತುವೆ ಕಿರಿದಾಗಿದ್ದರಿಂದ ಒಮ್ಮೆಗೆ ಒಂದು ಭಾಗದಿಂದ ಮಾತ್ರ ವಾಹನವನ್ನು ಬಿಡಲಾಗುತ್ತಿತ್ತು. ಹೀಗಾಗಿ ಈ ಸಮಸ್ಯೆ ಆಯಿತು ಎಂದು ಸಾಮಾಜಿಕ ಜಾಲತಾಣಗಳ ಆಕ್ರೋಶದ ಬಳಿಕ ಮಹೇಶ್ ಸ್ಪಷ್ಟೀಕರಣ ನೀಡಿದ್ದಾರೆ.
ಇದನ್ನೂ ಓದಿ| Video Viral | ಡಿಸಿ ಅಂಕಲ್ ನಮ್ಮೂರಿಗೆ ಯಾವಾಗ ಬರ್ತೀರ, ಕರೆಂಟು ಕೊಡ್ತೀರಾ?; ಪುಟ್ಟ ಹುಡುಗಿ ಮನವಿ