Site icon Vistara News

Jagdeep Dhankhar: ನೀವು ಎಲ್ಲೆ ಮೀರಿದ್ದೀರಿ; ರಾಜ್ಯಸಭೆಯಲ್ಲಿ ಗಲಾಟೆ ಬಳಿಕ ಜಗದೀಪ್‌ ಧನಕರ್‌ ಸಭಾತ್ಯಾಗ

Jagdeep Dhankhar

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Olympics) ವಿನೇಶ್‌ ಫೋಗಟ್‌ (Vinesh Phogat) ಅವರು ಅನರ್ಹಗೊಂಡು, ಚಿನ್ನದ ಪದಕದಿಂದ ವಂಚಿತರಾಗಿರುವುದಕ್ಕೆ ದೇಶಾದ್ಯಂತ ಅಸಮಾಧಾನ, ಬೇಸರ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ, ಅವರ ಅನರ್ಹತೆ ವಿಚಾರಕ್ಕೆ ರಾಜಕೀಯದ ಲೇಪನ ಸಿಕ್ಕಿದೆ. ವಿನೇಶ್‌ ಫೋಗಟ್‌ ಅವರ ಅನರ್ಹತೆಗೆ ಮೋದಿ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್‌ ಹೇಳಿದೆ. ಇನ್ನು, ವಿನೇಶ್‌ ಫೋಗಟ್‌ ಅವರ ಅನರ್ಹತೆಯ ವಿಚಾರ ಚರ್ಚಿಸಲು ಅವಕಾಶ ನೀಡಲಿಲ್ಲ ಎನ್ನುವ ಕಾರಣಕ್ಕೆ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟದ ಸದಸ್ಯರು ರಾಜ್ಯಸಭೆಯಲ್ಲಿ ಗಲಾಟೆ ನಡೆಸಿದ್ದಾರೆ. ಇದರಿಂದ ಬೇಸತ್ತ ಸಭಾಧ್ಯಕ್ಷ ಜಗದೀಪ್‌ ಧನಕರ್‌ (Jagdeep Dhankhar) ಅವರೇ ಸಭಾತ್ಯಾಗ ಮಾಡಿದ್ದಾರೆ.

ಪಟ್ಟಿ ಮಾಡಲಾದ ದಾಖಲೆಗಳನ್ನು ಸದನದಲ್ಲಿ ಮಂಡಿಸಿದ ಕೂಡಲೇ ಪ್ರತಿಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎದ್ದು ನಿಂತು ಅನರ್ಹತೆಯ ವಿಷಯವನ್ನು ಪ್ರಸ್ತಾವಿಸಿದರು. ಇದರ ಹಿಂದೆ ಯಾರು ಇದ್ದಾರೆ ಎಂದು ಪ್ರಶ್ನಿಸಿದರು. ಆದರೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಖರ್ಗೆ ಅವರಿಗೆ ಈ ವಿಷಯ ಎತ್ತಲು ಅವಕಾಶ ನೀಡಲಿಲ್ಲ. ಬಳಿಕ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯಾನ್ ಕೂಡ ಪ್ರಶ್ನೆಗಳನ್ನು ಕೇಳಲು ಮುಂದಾದರು. ಅವರಿಗೂ ಅವಕಾಶ ದೊರೆಯಲಿಲ್ಲ. ಇದಕ್ಕೆ ಡೆರೆಕ್ ಒ’ಬ್ರಿಯಾನ್ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಜೈರಾಮ್‌ ರಮೇಶ್‌ ಅವರು ವ್ಯಂಗ್ಯವಾಗಿ ನಗಲು ಶುರು ಮಾಡಿದರು. ಇದರಿಂದ ಕುಪಿತರಾದ ಜಗದೀಪ್‌ ಧನಕರ್‌ ಅವರು, “ನಿಮ್ಮ ಅಭ್ಯಾಸ ನನಗೆ ಗೊತ್ತು. ನನಗೆ ಬಿಡಿ, ಸಭಾಧ್ಯಕ್ಷರ ಸ್ಥಾನಕ್ಕಾದರೂ ಗೌರವ ಕೊಡಿ. ಇದು ನೀವು ದೇಶದ ಪ್ರಜಾಪ್ರಭುತ್ವಕ್ಕೆ, ಸ್ಪೀಕರ್‌ ಹುದ್ದಗೆ ಮಾಡುತ್ತಿರುವ ಅವಮಾನ. ನಿಮ್ಮ ವರ್ತನೆ ನೋಡಿದರೆ ನಾನು ಇಲ್ಲಿ ಕೂರಲು ಅರ್ಹನೇ ಅಲ್ಲ ಎಂದು ಎನಿಸುತ್ತಿದೆ. ಹಾಗಾಗಿ ನಾನಿನ್ನು ಇಲ್ಲಿ ಕೂರುವುದಿಲ್ಲ” ಎಂದು ಧನಕರ್‌ ಅವರು ಸಭಾತ್ಯಾಗ ಮಾಡಿದರು.

ಇದಕ್ಕೂ ಮೊದಲು, “ನೀವು ಸಭಾಧ್ಯಕ್ಷರ ಮೇಲೆ ಕೂಗುತ್ತಿದ್ದೀರಿ. ನಿಮ್ಮ ಈ ನಡವಳಿಕೆ ಸರಿಯಲ್ಲ. ನಿಮ್ಮ ಕ್ರಮವನ್ನು ನಾನು ಖಂಡಿಸುತ್ತೇನೆ. ಈ ವರ್ತನೆ ಪುನರಾವರ್ತಿಸಿದರೆ ಮುಂದಿನ ಬಾರಿ ಸದನದಿಂದ ಹೊರಗೆ ಕಳುಹಿಸಬೇಕಾಗುತ್ತದೆʼʼ ಎಂದು ಜಗದೀಪ್‌ ಧನಕರ್‌ ಅವರು ಎಚ್ಚರಿಕೆ ನೀಡಿದರು. ಇದರಿಂದ ಸದನದಲ್ಲಿ ಕೋಲಾಹಲ ಮೂಡಿ ಪ್ರತಿಪಕ್ಷಗಳ ಸದಸ್ಯರು ಕೂಡ ಸಭಾತ್ಯಾಗ ಮಾಡಿದರು. ವಿನೇಶ್‌ ಫೋಗಟ್‌ ಅನರ್ಹತೆ ಕುರಿತು ಈಗಾಗಲೇ ಕೇಂದ್ರ ಸಚಿವ ಮನ್ಸುಖ್‌ ಮಂಡಾವಿಯ ಅವರು ಸದನದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Sonu Sood : ಸೋನು ಸೂದ್​, ಕಂಗನಾ ರಣಾವತ್​ ‘ಎಂಜಲು ರೊಟ್ಟಿಯ’ ಗಲಾಟೆ

Exit mobile version