ಚೆನ್ನೈ: ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆ ಟೊಮ್ಯಾಟೊ ಬೆಲೆ ಕೆ.ಜಿ 100 ರೂ. ದಾಟಿದೆ. ಬೆಂಗಳೂರಿನಲ್ಲಿಯೇ 150 ರೂ.ಗೆ ಒಂದು ಕೆ.ಜಿ ಟೊಮ್ಯಾಟೊ ಸಿಗುತ್ತಿದೆ. ಶುಂಠಿ, ಬದನೆಕಾಯಿ ಸೇರಿ ಹಲವು ತರಕಾರಿ ಬೆಲೆಯೂ ಜಾಸ್ತಿಯಾಗಿದೆ. ಇದರಿಂದ ಜನರ ಜೇಬಿಗೆ ಭಾರಿ ಹೊಡೆತ ಬೀಳುತ್ತಿದೆ. ಬೆಲೆಯೇರಿಕೆಯ ಇಂತಹ ದುರಿತ ಕಾಲದಲ್ಲಿ ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬರು 20 ರೂಪಾಯಿಗೆ ಒಂದು ಕೆ.ಜಿ ಟೊಮ್ಯಾಟೊ ಮಾರಾಟ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಹೌದು, ಕಡ್ಡಲೂರು ಜಿಲ್ಲೆ ಸೆಲ್ಲನ್‌ಕುಪ್ಪಮ್‌ನಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡಿರುವ ಡಿ.ರಾಜೇಶ್ ಅವರು ಕಳೆದ ಶುಕ್ರವಾರ (July 7) ಕೇವಲ 20 ರೂ.ಗೆ ಒಂದು ಕೆ.ಜಿ ಟೊಮ್ಯಾಟೊ ಮಾರಾಟ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ರಾಜೇಶ್ ಅವರು ತರಕಾರಿ ಅಂಗಡಿ ಆರಂಭಿಸಿ ಜುಲೈ 7ಕ್ಕೆ ನಾಲ್ಕು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರು ಇಂತಹ ಆಫರ್ ಘೋಷಿಸಿದ್ದಾರೆ. ಇವರು ಆಫರ್ ನೀಡುತ್ತಲೇ ಇಡೀ ದಿನ ಗ್ರಾಹಕರು ಬಂದು ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೊ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.
“ನಾನು ಅಂಗಡಿ ಆರಂಭಿಸಿ ನಾಲ್ಕು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ಟೊಮ್ಯಾಟೊ ಮಾರಿದೆ. ಗ್ರಾಹಕರಿಗೆ ಹೊರೆಯಾಗುತ್ತಿರುವ ದಿನಗಳಲ್ಲಿ ನನ್ನಿಂದ ಒಂದಷ್ಟು ನೆರವಾಗಲಿ ಎಂದು 60 ರೂ.ಗೆ ಒಂದು ಕೆ.ಜಿಯಂತೆ ಟೊಮ್ಯಾಟೊ ಖರೀದಿಸಿ 20 ರೂ.ಗೆ ಮಾರಾಟ ಮಾಡಿದ್ದೇನೆ. ಕೆಲವೇ ನಿಮಿಷದಲ್ಲಿ ಇಡೀ ಟೊಮ್ಯಾಟೊ ಖಾಲಿಯಾಯಿತು” ಎಂದು ರಾಜೇಶ್ ತಿಳಿಸಿದ್ದಾರೆ. ಇವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನ ದಾನ ಶೂರ ಕರ್ಣ ಎಂದೆಲ್ಲ ಹೊಗಳಿದ್ದಾರೆ.
ದೇಶದ ಬಹುತೇಕ ಭಾಗಗಳಿಗೆ ಮುಂಗಾರು ಪ್ರವೇಶವಾದರೂ ಬೇಡಿಕೆಗೆ ತಕ್ಕಂತೆ ತರಕಾರಿ ಪೂರೈಕೆಯಾಗುತ್ತಿಲ್ಲ. ಅದರಲ್ಲೂ, ಉಷ್ಣಮಾರುತದಿಂದ ಟೊಮ್ಯಾಟೊ ಸೇರಿ ವಿವಿಧ ತರಕಾರಿ ಬೆಳೆದ ರೈತರಿಗೆ ನಷ್ಟವಾಗಿದೆ. ಹಾಗಾಗಿ, ಮಾರುಕಟ್ಟೆಗೆ ಹೇರಳವಾಗಿ ತರಕಾರಿಗಳ ಪೂರೈಕೆಯಾಗುತ್ತಿಲ್ಲ. ಹಾಗಾಗಿ, ಇನ್ನೂ 10-12 ದಿನ ತರಕಾರಿಗಳ ಬೆಲೆ ಎಗ್ಗಿಲ್ಲದೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ, ಗ್ರಾಹಕರ ಜೇಬಿಗೆ ತರಕಾರಿ ಬಲು ಭಾರ ಎನಿಸುವುದು ಗ್ಯಾರಂಟಿಯಾಗಿದೆ.
ಇದನ್ನೂ ಓದಿ: Tomato Price Hike: ತರಕಾರಿ ದುಬಾರಿ; ಟೊಮ್ಯಾಟೊ ಕೆ.ಜಿ.ಗೆ 150 ರೂ., ಬದನೆ ಶತಕ, ಇನ್ನೂ 10-12 ದಿನ ಇದೇ ಗತಿ
ಬೆಂಗಳೂರಿನಲ್ಲಿ ಟೊಮ್ಯಾಟೊ ಕೆ.ಜಿ.ಗೆ 150 ರೂ. ದಾಟಿದರೆ, ಹಲವು ತರಕಾರಿಗಳ ಬೆಲೆಯೂ ಹೆಚ್ಚಾಗಿದೆ. ದೆಹಲಿ, ಚಂಡೀಗಢ, ದೆಹಲಿ ಸೇರಿ ಹಲವೆಡೆ ಶುಂಠಿ ಬೆಲೆಯು ಒಂದೇ ವಾರದಲ್ಲಿ 100 ರೂಪಾಯಿಯಿಂದ 250 ರೂ.ಗೆ ಏರಿಕೆಯಾಗಿದೆ. ಬದನೆಕಾಯಿಯು 40 ರೂ.ನಿಂದ 100 ರೂ.ಗೆ ಜಿಗಿದಿದೆ. 10 ದಿನಗಳಲ್ಲಿ ಬಹುತೇಕ ತರಕಾರಿಗಳ ಬೆಲೆಯು ಶೇ.60ರಷ್ಟು ಏರಿಕೆಯಾಗಿದೆ. ಅದರಲ್ಲೂ, ಇನ್ನೂ 10-12 ದಿನ ಇದೇ ಪರಿಸ್ಥಿತಿ ಇರುವುದರಿಂದ ಜನ ಹೆಚ್ಚು ಬೆಲೆ ತೆರಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ.