ನವದೆಹಲಿ: ಆಂಧ್ರಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ವೈಎಸ್ಆರ್ ಕಾಂಗ್ರೆಸ್ ಪಾರ್ಟಿಗೆ ಕೈ ಕೊಟ್ಟು ಪ್ರತಿಪಕ್ಷವಾಗಿರುವ ತೆಲುಗು ದೇಶಂ ಪಾರ್ಟಿ (TDP) ಜತೆ ಭಾರತೀಯ ಜನತಾ ಪಾರ್ಟಿ (BJP) ಜತೆ ಹೆಜ್ಜೆ ಹಾಕುವ ಸಾಧ್ಯತೆಗಳಿವೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್‌ಪಿ ಕಾಂಗ್ರೆಸ್ ಪಾರ್ಟಿ (YSRP Congress Party) ಅನೇಕ ಸಂದರ್ಭದಲ್ಲಿ ಬೆಂಬಲ ನೀಡಿದೆ. ಇತ್ತೀಚೆಗಷ್ಟೇ ನೂತನ ಸಂಸತ್ ಭವನ ಉದ್ಘಾಟನೆ ವೇಳೆಯೂ ಬಿಜೆಪಿ ಬೆಂಬಲಿಸಿತ್ತು. ಆದರೆ, ಈಗ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಬಿಜೆಪಿ ಮತ್ತು ಟಿಡಿಪಿ ಮೈತ್ರಿಯನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಬಿಜೆಪಿಯ ಪ್ರಮುಖ ನಾಯಕರೂ ಆಗಿರುವ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ತೆಲುಗು ದೇಶಂ ಪಾರ್ಟಿಯ ನಾಯಕ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿರುವುದು ಇದಕ್ಕೆ ಪುಷ್ಠಿ ನೀಡುತ್ತಿದೆ.
ಟಿಡಿಪಿ ಮೊದಲಿನಿಂದಲೂ ಬಿಜೆಪಿಯ ಮೈತ್ರಿ ಪಕ್ಷವಾಗಿದೆ. ಆದರೆ, ಈ ನಡುವೆ ಮೈತ್ರಿ ಮುರಿದುಕೊಂಡಿದ್ದ ಟಿಡಿಪಿ, ಕಾಂಗ್ರೆಸ್ ಜತೆಗೂಡಿ ಚುನಾವಣೆ ಎದುರಿಸಿತ್ತು. ಆದರೆ, ಭಾರೀ ಸೋಲು ಕಂಡಿತ್ತು. ಈ ಹಿನ್ನೆಲೆಯಲ್ಲಿ 2024ರ ಲೋಕಸಭೆ ಚುನಾವಣೆಗೆ ಟಿಡಿಪಿ ಮತ್ತು ಬಿಜೆಪಿಗಳು ಜತೆಗೂಡಿ ಚುನಾವಣೆಯನ್ನು ಎದುರಿಸುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಶಾ ಮತ್ತು ನಾಯ್ಡು ಭೇಟಿಯ ಬಗ್ಗೆ ಖಚಿತ ಮಾಹಿತಿ ಹೊಂದಿರುವ ನಾಯಕರೊಬ್ಬರು ಈ ಮಾಹಿತಿ ನೀಡಿದ್ದು, ಉಭಯ ನಾಯಕರು ಗಂಟೆ ಗಟ್ಟಲೇ ಅನೇಕ ವಿಷಯಗಳ ಚರ್ಚೆ ನಡೆಸಿದ್ದಾರೆಂದು ಹೇಳಿದ್ದರು.
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ತೆಲುಗು ದೇಶಂ ಪಾರ್ಟಿಯು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟದಿಂದ (NDA) ಹೊರಗೆ ಬಂದಿತ್ತು. ಎನ್‌ಡಿಎ ತೊರೆದ ಪಕ್ಷಗಳು ಪೈಕಿ ಟಿಡಿಪಿಯೇ ಮೊದಲು. ಈಗ ಅದೇ ಚಂದ್ರಬಾಬು ನಾಯ್ಡು ಅವರು ಮತ್ತೆ ಎನ್‌ಡಿಎ ಸೇರುವ ಉತ್ಸುಕತೆಯನ್ನು ಹೊಂದಿದ್ದಾರೆಂದು ಮೂಲಗಳು ಹೇಳುತ್ತಿವೆ.
ಇದನ್ನೂ ಓದಿ: ಆಂಧ್ರ ಮುಖ್ಯಮಂತ್ರಿ ಜಗನ್ ರೆಡ್ಡಿ ಪೋಸ್ಟರ್ ಹರಿದ ನಾಯಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪ್ರತಿಪಕ್ಷ ಟಿಡಿಪಿ ಕಾರ್ಯಕರ್ತೆ!
ಏಪ್ರಿಲ್ ತಿಂಗಳಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು, ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಗೌರವವನ್ನು ಎತ್ತಿ ಹಿಡಿಯುತ್ತಿರುವ ನಾಯಕರಾಗಿದ್ದಾರೆ. ಇಡೀ ಜಗತ್ತಿಗೆ ಭಾರತ ಸಾಮರ್ಥ್ಯವನ್ನು ಪ್ರದರ್ಶನ ಮಾಡುತ್ತಿದ್ದಾರೆ. ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಮೋದಿ ಅವರೊಂದಿಗೆ ಕೈ ಜೋಡಿಸಲು ಸಿದ್ಧ ಎಂದು ಚಂದ್ರಬಾಬು ನಾಯ್ಡು ಅವರು ಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಪ್ರತ್ಯೇಕ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು, ಹೆಚ್ಚಿನ ಅನುದಾನಕ್ಕೆ ಆಗ್ರಹಿಸಿ ಚಂದ್ರಬಾಬು ನಾಯ್ಡು ಅವರು ಎನ್‌ಡಿಎವನ್ನು 2018ರಲ್ಲಿ ತೊರೆದಿದ್ದರು.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.