Site icon Vistara News

Adani Row: ಅದಾನಿ ಪ್ರಕರಣದ ಕುರಿತು ಮೌನ ಮುರಿದ ಅಮಿತ್‌ ಶಾ, ತನಿಖೆ ಬಗ್ಗೆ ಹೇಳಿದ್ದೇನು?

Amit Shah Breaks Silence about Adani case, what he said about case?

ಅಮಿತ್‌ ಶಾ

ನವದೆಹಲಿ: ದೇಶಾದ್ಯಂತ ಸುದ್ದಿಯಾಗಿರುವ, ಸಂಸತ್ತಿನಲ್ಲಿ ಭಾರಿ ಗಲಾಟೆಗೆ ಕಾರಣವಾಗಿರುವ, ಷೇರು ಮಾರುಕಟ್ಟೆಯ ಕುಸಿತಕ್ಕೂ ಕಾರಣವಾದ ಗೌತಮ್‌ ಅದಾನಿ-ಹಿಂಡನ್‌ಬರ್ಗ್‌ ವರದಿ (Adani Row) ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರತಿಕ್ರಿಯಿಸಿದ್ದಾರೆ. “ದೇಶದಲ್ಲಿ ಯಾರೇ ತಪ್ಪೆಸಗಿದ್ದರೂ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಿದ ಅವರು, ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. “ದೇಶದಲ್ಲಿ ಯಾರು ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಎಲ್ಲರೂ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಡಬೇಕು. ಕಾನೂನಿನ ಕಣ್ಣಿನಿಂದ ಯಾರೂ ತಪ್ಪಿಸಿಕೊಳ್ಳಲು ಆಗುವುದಿಲ್ಲ” ಎಂದು ತಿಳಿಸಿದರು.

“ಅದಾನಿ ಪ್ರಕರಣದ ಕುರಿತು ಸೆಬಿ ತನಿಖೆ ನಡೆಸುತ್ತಿದೆ. ತನಿಖೆಗೆ ಸುಪ್ರೀಂ ಕೋರ್ಟ್‌ ಇಬ್ಬರು ಸದಸ್ಯರ ಸಮಿತಿ ರಚಿಸಿದ್ದಾರೆ. ಯಾರು ಬೇಕಾದರೂ ಅದಾನಿ ವಿರುದ್ಧ ಸಾಕ್ಷ್ಯಗಳನ್ನು ಕೋರ್ಟ್‌ಗೆ ಒದಗಿಸಬಹುದು. ಪ್ರಕರಣದ ಕುರಿತು ಈಗಾಗಲೇ ತನಿಖೆ ನಡೆಸಲಾಗುತ್ತಿದೆ ಎಂಬುದಾಗಿ ಸೆಬಿಯು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಪ್ರಕರಣದಲ್ಲಿ ಪ್ರತಿಪಕ್ಷಗಳ ಆರೋಪ ಹುರುಳಿಲ್ಲದ್ದು” ಎಂದು ಸ್ಪಷ್ಟಪಡಿಸಿದರು.

ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪದ ಬಗ್ಗೆ ಪ್ರತಿಕ್ರಿಯೆ

ಕೇಂದ್ರ ಸರ್ಕಾರವು ಪ್ರತಿಪಕ್ಷಗಳನ್ನು ಹಣಿಯಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪದ ಕುರಿತು ಕೂಡ ಅಮಿತ್‌ ಶಾ ಪ್ರತಿಕ್ರಿಯಿಸಿದರು. “ಕೇಂದ್ರೀಯ ತನಿಖಾ ಸಂಸ್ಥೆ (CBI) ಹಾಗೂ ಜಾರಿ ನಿರ್ದೇಶನಾಲಯವು (ED) ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿವೆ. ಯಾರ ವಿರುದ್ಧ ಆರೋಪಗಳು ಇವೆಯೋ, ಅವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಇಷ್ಟೆಲ್ಲ ಆರೋಪ ಮಾಡುವ ಪ್ರತಿಪಕ್ಷಗಳು ಈ ಕುರಿತು ಕೋರ್ಟ್‌ಗೆ ಅರ್ಜಿಯನ್ನೇಕೆ ಸಲ್ಲಿಸುತ್ತಿಲ್ಲ? ಪ್ರತಿಪಕ್ಷಗಳು ಕೂಡ ಉತ್ತಮ ವಕೀಲರನ್ನೇ ಹೊಂದಿವೆಯಲ್ಲ” ಎಂದು ಕುಟುಕಿದರು.

ಮೋದಿ ಹ್ಯಾಟ್ರಿಕ್‌ ಖಚಿತ ಎಂದ ಶಾ

ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತ ಎಂದು ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದರು. “ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಮ್ಮು-ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರವನ್ನು ನಿಗ್ರಹಿಸಲಾಗಿದೆ. ನಕ್ಸಲರನ್ನು ಮಟ್ಟಹಾಕಲಾಗುತ್ತಿದೆ. ಕೆಣಕಿದ ಪಾಕಿಸ್ತಾನಕ್ಕೆ ಸರ್ಜಿಕಲ್‌ ಸ್ಟ್ರೈಕ್‌, ಬಾಲಾಕೋಟ್‌ ದಾಳಿ ಮೂಲಕ ತಿರುಗೇಟು ನೀಡಲಾಗಿದೆ. ಹಾಗಾಗಿ, ಈಗಲೂ ಜನ ಮೋದಿ ಅವರ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದಾರೆ. ನಾನು ದೇಶದ ಪ್ರತಿಯೊಂದು ಭಾಗಕ್ಕೂ ತೆರಳಿದ್ದೇನೆ. ಅಲ್ಲೆಲ್ಲ, ಜನ ಮೋದಿ ಅವರನ್ನೇ ಬೆಂಬಲಿಸುತ್ತಿದ್ದಾರೆ. ಹಾಗಾಗಿ, ಮುಂದಿನ ಚುನಾವಣೆಯಲ್ಲೂ ಎನ್‌ಡಿಎ ಗೆಲುವು ನಿಶ್ಚಿತ” ಎಂದು ಹೇಳಿದರು.

ಇದನ್ನೂ ಓದಿ: Parliament Budget session: ರಾಹುಲ್, ಅದಾನಿ ಗಲಾಟೆ, ಸಂಸತ್ ಕಲಾಪ ಮತ್ತೆ ಮುಂದೂಡಿಕೆ

Exit mobile version