ನವ ದೆಹಲಿ: ಇಂದು ರಾಷ್ಟ್ರಾದ್ಯಂತ 13ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಿಎಫ್ಐ ಸಂಘಟನೆ ಮುಖಂಡರ ಕಚೇರಿ, ಮನೆಗಳ ಮೇಲೆ ಎನ್ಐಎ ದಾಳಿ ನಡೆಸಿದ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಅವರು ಭದ್ರತಾ ಏಜೆನ್ಸಿಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ, ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಪ್ರಧಾನ ನಿರ್ದೇಶಕ ದಿನಕರ್ ಗುಪ್ತಾ ಸೇರಿ ಇನ್ನೂ ಹಲವು ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಪಿಎಫ್ಐ ಸಂಘಟನೆ ವಿರುದ್ಧ ನಡೆದ ದಾಳಿ, ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಅವರು ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಪಿಎಫ್ಐ ಸಂಘಟನೆ ಉಗ್ರ ಕೃತ್ಯಗಳಿಗೆ ನೆರವು ನೀಡುತ್ತಿದೆ, ಭಯೋತ್ಪಾದಕ ತರಬೇತಿಗಳಿಗೆ ಸಹಕಾರ ನೀಡುತ್ತಿದೆ ಎಂಬಿತ್ಯಾದಿ ಆರೋಪದಡಿ ಎಂದು ಎನ್ಐಎ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಪಿಎಫ್ಐ ಮತ್ತು ಅದರ ರಾಜಕೀಯ ವಿಭಾಗವಾದ ಎಸ್ಡಿಪಿಯಗಳ ಕಾರ್ಯಚಟುವಟಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಗುಪ್ತಚರ ಇಲಾಖೆಗಳು ನೀಡಿದ ಖಚಿತ ಮಾಹಿತಿಯನ್ನಾಧರಿಸಿಯೇ ಇಂದು ಎನ್ಐಎ ಮತ್ತು ಇ.ಡಿ. ಜಂಟಿಯಾಗಿ ರೇಡ್ ಮಾಡಿವೆ. 13 ರಾಜ್ಯಗಳಲ್ಲಿ ನಡೆದ ಶೋಧ ಕಾರ್ಯದಲ್ಲಿ ಆಯಾ ರಾಜ್ಯಗಳ ಪೊಲೀಸರೂ ಪಾಲ್ಗೊಂಡಿದ್ದರು.
ಸಾಮಾಜಿಕ ಸಮಾನತೆಗಾಗಿ ಹುಟ್ಟಿಕೊಂಡ ಪಿಎಫ್ಐ ಸಂಘಟನೆಯ ಹೆಸರು ಬರುಬರುತ್ತ ದೇಶ ವಿರೋಧಿ ಚಟುವಟಿಕೆಗಳಲ್ಲಿ ಕೇಳಿಬರುತ್ತಿದೆ. ಇತ್ತೀಚೆಗಂತೂ ಯಾವುದೇ ಕೋಮು ಗಲಭೆಯಾಗಲಿ, ಹತ್ಯೆ-ಹಿಂಸಾಚಾರಗಳಾಗಲಿ ಆ ಆರೋಪಿಗಳಿಗೆ ಪಿಎಫ್ಐ ಜತೆ ನಂಟಿದೆ ಎಂಬ ವರದಿಯೇ ತನಿಖೆಗಳಲ್ಲಿ ಹೊರಬೀಳುತ್ತಿದೆ. ಹೀಗಾಗಿ ಗೃಹ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ತೀಕ್ಷ್ಣಗೊಳಿಸಲು ಸೂಚನೆ ನೀಡಿದೆ.
ಜುಲೈನಲ್ಲಿ ಪ್ರಧಾನಿ ಮೋದಿ ಬಿಹಾರಕ್ಕೆ ಭೇಟಿ ನೀಡಿದ್ದಾಗ ಅವರನ್ನು ಹತ್ಯೆಗೈಯ್ಯುವ ಸಂಚು, ನೂಪುರ್ ಶರ್ಮಾ ಪರ ಪೋಸ್ಟ್ ಹಾಕಿದ್ದಕ್ಕೆ ಉದಯ್ಪುರದಲ್ಲಿ ಟೇಲರ್ನನ್ನು ಕೊಂದ ಪ್ರಕರಣ ಸೇರಿ ಇನ್ನೂ ಇಂಥ ಹಲವು ಕೇಸ್ನಲ್ಲೆಲ್ಲ ಪಿಎಫ್ಐ ಸಂಘಟನೆ ಹೆಸರು ಮುನ್ನೆಲೆಗೆ ಬಂದಿದೆ. ಒಟ್ಟಾರೆ ಎಲ್ಲ ಕೇಸ್ಗೆ ಸಂಬಂಧಪಟ್ಟಂತೆ ಇಂದು ಎನ್ಐಎ ದಾಳಿ ನಡೆಸಿ ಕೇರಳದಲ್ಲಿ 22, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ತಲಾ 20, ಆಂಧ್ರಪ್ರದೇಶದಲ್ಲಿ 5, ಅಸ್ಸಾಂನಲ್ಲಿ 9, ದೆಹಲಿ-3, ಮಧ್ಯಪ್ರದೇಶದಲ್ಲಿ 4, ಪುದುಚೇರಿಯಲ್ಲಿ 3, ತಮಿಳುನಾಡಿನಲ್ಲಿ 10, ಉತ್ತರ ಪ್ರದೇಶದಲ್ಲಿ ಎಂಟು ಮತ್ತು ರಾಜಸ್ಥಾನದಲ್ಲಿ ಇಬ್ಬರನ್ನು ಬಂಧಿಸಿದೆ.
ಇದನ್ನೂ ಓದಿ: NIA Raid | ಮುಸ್ಲಿಮರನ್ನು ಗುರಿಯಾಗಿಸಿ ದಾಳಿ: ರಾಮನಗರ, ಕೊಪ್ಪಳದಲ್ಲಿ ರಸ್ತೆಗಿಳಿದು ಪ್ರತಿಭಟನೆ