Site icon Vistara News

Amit Shah: ಪ್ರಚಾರದ ವೇಳೆ ಕೇಜ್ರಿವಾಲ್‌ ನೀಡಿದ ಹೇಳಿಕೆಯಿಂದ ನ್ಯಾಯಾಂಗ ನಿಂದನೆ; ಅಮಿತ್‌ ಶಾ ವಾಗ್ದಾಳಿ

Amit Shah

Amit Shah claims Arvind Kejriwal's campaign remark clear contempt of Supreme Court

ನವದೆಹಲಿ: ಅಬಕಾರಿ ನೀತಿ ಜಾರಿ ಹಗರಣದಲ್ಲಿ (Delhi Excise Policy Case) ತಿಹಾರ ಜೈಲು ಸೇರಿ, ಮಧ್ಯಂತರ ಜಾಮೀನಿನ ಬಿಡುಗಡೆಯಾಗಿರುವ, ಬಿಡುಗಡೆಯಾಗಿ ಬರುತ್ತಲೇ ಅಬ್ಬರದ ಚುನಾವಣೆ ಪ್ರಚಾರದ ಜತೆಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ. “ಚುನಾವಣೆ ಪ್ರಚಾರದ ವೇಳೆ ಅರವಿಂದ್‌ ಕೇಜ್ರಿವಾಲ್‌ ನೀಡಿದ ಹೇಳಿಕೆಯು ನ್ಯಾಯಾಂಗ ನಿಂದನೆಯ ಪ್ರಕರಣವಾಗಿದೆ” ಎಂದಿದ್ದಾರೆ.

ಎಎನ್‌ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅಮಿತ್‌ ಶಾ, ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಹರಿಹಾಯ್ದರು. “ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಬ್ಯಾಡ್‌ ನ್ಯೂಸ್‌ ಇದೆ. 2029ರವರೆಗೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಆಡಳಿತ ನಡೆಸಲಿದ್ದಾರೆ. ಇನ್ನು, ಯಾರಾದರೂ ಬಿಜೆಪಿಗೆ ಮತ ನೀಡಿದರೆ, ಕಮಲದ ಗುರುತಿಗೆ ಮತ ಹಾಕಿದರೆ, ಮತ್ತೆ ನನ್ನನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂಬುದಾಗಿ ಕೇಜ್ರಿವಾಲ್‌ ಹೇಳಿರುವುದು ಸಂಪೂರ್ಣವಾಗಿ ನ್ಯಾಯಾಂಗ ನಿಂದನೆಯ ಕೇಸ್‌ ಆಗಿದೆ. ಇದು ಸುಪ್ರೀಂ ಕೋರ್ಟ್‌ ತೀರ್ಪಿಗೆ ಮಾಡಿದ ಅಗೌರವ” ಎಂದು ಹೇಳಿದರು.

ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಾಮೀನು ನೀಡಿದ ಕೋರ್ಟ್‌ ತೀರ್ಮಾನದ ಕುರಿತೂ ಅಮಿತ್‌ ಶಾ ವಿಶ್ಲೇಷಣೆ ಮಾಡಿದರು. “ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಎಲ್ಲ ಸಾಮಾನ್ಯ ಪ್ರಕರಣದಂತೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಜಾಮೀನು ಮಂಜೂರು ಮಾಡಿಲ್ಲ. ಕೇಜ್ರಿವಾಲ್‌ ಅವರಿಗೆ ವಿಶೇಷ ಕೇಸ್‌ ಎಂದು ಪರಿಗಣಿಸಿ ಜಾಮೀನು ನೀಡಲಾಗಿದೆ. ಅಷ್ಟಕ್ಕೂ, ಅರವಿಂದ್‌ ಕೇಜ್ರಿವಾಲ್‌ ಅಪರಾಧಿ ಎಂದು ಸಾಬೀತಾದರೂ ಕೋರ್ಟ್‌ ಅವರನ್ನು ಜೈಲಿಗೆ ಕಳುಹಿಸುವುದಿಲ್ಲ. ತಮ್ಮ ತೀರ್ಪು ಸದ್ಬಳಕೆಯಾಗಿದೆಯೋ, ದುರ್ಬಳಕೆ ಮಾಡಿಕೊಳ್ಳಲಾಗಿದೆಯೋ ಎಂಬುದನ್ನು ತಿಳಿಯಲು ಕೋರ್ಟ್‌ ಜಾಮೀನು ನೀಡಿದೆ” ಎಂದರು.

ಫಾರೂಕ್‌ ಅಬ್ದುಲ್ಲಾಗೆ ಚಾಟಿ

ಪಾಕಿಸ್ತಾನವನ್ನು ಗೌರವಿಸಬೇಕು ಎಂದು ಹೇಳಿದ ಫಾರೂಕ್‌ ಅಬ್ದುಲ್ಲಾ ಅವರಿಗೆ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ. “ಪಾಕಿಸ್ತಾನ ಅಣುಬಾಂಬ್‌ ಹೊಂದಿದೆ. ಅದಕ್ಕೆ ಭಾರತ ಗೌರವ ನೀಡಬೇಕು ಎಂಬುದಾಗಿ ಫಾರೂಕ್‌ ಅಬ್ದುಲ್ಲಾ ಹಾಗೂ ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಅದರೆ, ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವ, 130 ಕೋಟಿ ಜನಸಂಖ್ಯೆಯ ಭಾರತವು ತನ್ನ ಹಕ್ಕನ್ನು ಪ್ರತಿಪಾದಿಸಲು ಪಾಕಿಸ್ತಾನಕ್ಕೆ ಹೆದರಬೇಕೇ? ರಾಹುಲ್‌ ಗಾಂಧಿ ಅವರು ಇದಕ್ಕೆ ಉತ್ತರ ನೀಡಬೇಕು. ಪಾಕಿಸ್ತಾನವನ್ನು ಗೌರವಿಸಬೇಕಾ? ಪಾಕ್‌ ಆಕ್ರಮಿತ ಕಾಶ್ಮೀರವನ್ನು ಬಿಟ್ಟುಕೊಡಬೇಕಾ ಎಂಬುದರ ಕುರಿತು ರಾಹುಲ್‌ ಗಾಂಧಿ ಉತ್ತರಿಸಲಿ” ಎಂದರು.

ಇದನ್ನೂ ಓದಿ: Narendra Modi: 75 ವರ್ಷ ದಾಟಿದರೂ ಮೋದಿ ಪ್ರಧಾನಿ ಸ್ಥಾನದಲ್ಲಿರುತ್ತಾರಾ? ಅಮಿತ್‌ ಶಾ ಹೇಳಿದ್ದಿಷ್ಟು

Exit mobile version