Site icon Vistara News

Amit Shah: ಶೀಘ್ರದಲ್ಲೇ ಭಾರತ ನಕ್ಸಲ್‌ ಮುಕ್ತವಾಗಲಿದೆ; ಅಮಿತ್ ಶಾ

Amith Shah lok sabha election 2024

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ 29 ಮಾವೋವಾದಿಗಳು ಭದ್ರತಾ ಪಡೆಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ನಕ್ಸಲರನ್ನು ಹತ್ಯೆಗೈದ ಭದ್ರತಾ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. ಸದ್ಯದಲ್ಲೇ ಛತ್ತೀಗಢ ಮತ್ತು ಭಾರತ ನಕ್ಸಲ್‌ ಮುಕ್ತವಾಗಲಿದೆ ಎಂದು ಹೇಳಿದ್ದಾರೆ.

“ಇಂದು ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯ ನಕ್ಸಲರು ಸಾವನ್ನಪ್ಪಿದ್ದಾರೆ. ತಮ್ಮ ಶೌರ್ಯದಿಂದ ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ ಎಲ್ಲ ಭದ್ರತಾ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ ಮತ್ತು ಗಾಯಗೊಂಡ ಧೈರ್ಯಶಾಲಿ ಪೊಲೀಸರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ” ಎಂದು ಅಮಿತ್‌ ಶಾ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ʼʼಸರ್ಕಾರದ ಸೂಕ್ತ ಕ್ರಮ ಮತ್ತು ಭದ್ರತಾ ಪಡೆಗಳ ಪ್ರಯತ್ನಗಳಿಂದಾಗಿ ಈಗ ನಕ್ಸಲಿಸಂ ಒಂದು ಸಣ್ಣ ಪ್ರದೇಶಕ್ಕೆ ಸೀಮಿತವಾಗಿದೆʼʼ ಎಂದು ಶಾ ಹೇಳಿದ್ದಾರೆ. ಶೀಘ್ರದಲ್ಲೇ ಛತ್ತೀಸ್‌ಗಢ ಮತ್ತು ಇಡೀ ಭಾರತ ನಕ್ಸಲ್ ಮುಕ್ತವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವನ್ನು ನಕ್ಸಲಿಸಂನ ಪಿಡುಗಿನಿಂದ ಮುಕ್ತಗೊಳಿಸಲು ನಾವು ನಿರ್ಧರಿಸಿದ್ದೇವೆ” ಎಂದು ಶಾ ತಿಳಿಸಿದ್ದಾರೆ.

ಬಿನಗುಂದ ಮತ್ತು ಕೊರೊನಾರ್ ಗ್ರಾಮಗಳ ನಡುವಿನ ಹಪಟೋಲಾ ಅರಣ್ಯದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ರಾಜ್ಯದ ಜಿಲ್ಲಾ ಮೀಸಲು ಪಡೆ ಜಂಟಿ ತಂಡ ಮಾವೋವಾದಿ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಗುಂಡಿನ ಚಕಮಕಿ ನಡೆದಿದೆ.

ಶಸ್ತ್ರಾಸ್ತ್ರ ವಶ

ಎನ್‌ಕೌಂಟರ್‌ ನಡೆದ ಸ್ಥಳದಿಂದ 18 ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ಎಫ್ ತಿಳಿಸಿದೆ. ಕಾರ್ಯಾಚರಣೆಯ ಸ್ಥಳದಿಂದ ಏಳು ಎಕೆ ಸರಣಿ ರೈಫಲ್‌ಗಳು ಮತ್ತು ಮೂರು ಲೈಟ್ ಮೆಷಿನ್ ಗನ್‌ಗಳನ್ನೂ (LMGs) ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಗುಂಡಿನ ಚಕಮಕಿ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಕಂಕರ್ ಪೊಲೀಸ್ ವರಿಷ್ಠಾಧಿಕಾರಿ ಕಲ್ಯಾಣ್ ಎಲೆಸೆಲಾ ಮಾಹಿತಿ ನೀಡಿದ್ದಾರೆ. ಗಾಯಗೊಂಡ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಹತರಾದ ಮಾವೋವಾದಿಗಳ ಪೈಕಿ ಉನ್ನತ ನಕ್ಸಲ್ ನಾಯಕ ಶಂಕರ್ ರಾವ್ ಕೂಡ ಸೇರಿದ್ದಾನೆ. ಪೊಲೀಸ್ ಅಧಿಕಾರಿಗಳ ಪ್ರಕಾರ ಶಂಕರ್‌ ತಲೆಗೆ 25 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

ಕಂಕೇರ್ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಪ್ರತ್ಯೇಕ ಎನ್ಕೌಂಟರ್‌ಗಳಲ್ಲಿ 2023ರ ಡಿಸೆಂಬರ್‌ನಿಂದ ಇಲ್ಲಿಯವರೆಗೆ 68 ನಕ್ಸಲರು ಸಾವನ್ನಪ್ಪಿದ್ದಾರೆ. ನಕ್ಸಲ್ ಪೀಡಿತ ಬಸ್ತಾರ್ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 19ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಬಸ್ತಾರ್ ಪ್ರದೇಶದ ಭಾಗವಾಗಿರುವ ಕಂಕೇರ್ ಕ್ಷೇತ್ರದಲ್ಲಿ ಏಪ್ರಿಲ್ 26ರಂದು ಎರಡನೇ ಸುತ್ತಿನಲ್ಲಿ ಮತದಾನ ನಡೆಯಲಿದೆ.

ಇದನ್ನೂ ಓದಿ: Kanker Encounter: ಎನ್‌ಕೌಂಟರ್‌ನಲ್ಲಿ 29 ಮಾವೋವಾದಿಗಳ ಹತ್ಯೆಗೈದ ಭದ್ರತಾ ಪಡೆ

Exit mobile version