ನವದೆಹಲಿ: ಇಂದು (ಜುಲೈ 1) ಜಾರಿಗೆ ಬಂದ ಮೂರು ಹೊಸ ಕ್ರಿಮಿನಲ್ ಕಾನೂನು (New Criminal Laws)ಗಳು ಶಿಕ್ಷೆಯ ಬದಲಿಗೆ ನ್ಯಾಯವನ್ನು ಖಚಿತಪಡಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಸ್ವಾತಂತ್ರ್ಯ ಪಡೆದು 77 ವರ್ಷಗಳ ಬಳಿಕ ದೇಶವು ಸಂಪೂರ್ಣವಾಗಿ ‘ಸ್ವದೇಶಿ’ ಕಾನೂನು ವ್ಯವಸ್ಥೆಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಸಾಹತುಶಾಹಿ ಯುಗದ ಅಪರಾಧ ಸಂಹಿತೆಯ ಕೂಲಂಕಷ ಪರಿಶೀಲನೆ ನಡೆಸಿ ನ್ಯಾಯ ವ್ಯವಸ್ಥೆಗೆ ʼಭಾರತೀಯ ಆತ್ಮʼವನ್ನು ಸೇರಿಸಲಾಗಿದೆ ಎಂದು ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆ (IPC-1860), ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC-1973) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು (Indian Evidence Act-1872) ತಿದ್ದುಪಡಿಗೆ ಒಳಪಡಿಸಲಾಗಿದೆ. ಇವುಗಳ ಬದಲಾಗಿ ಮೂರು ಹೊಸ ಕಾನೂನುಗಳು (New Laws) ಇಂದಿನಿಂದಲೇ (ಜುಲೈ 1) ದೇಶಾದ್ಯಂತ ಜಾರಿಗೆ ಬಂದಿವೆ.
Addressing the media on the new criminal laws. #AzaadBharatKeKanoon https://t.co/pz11zXUuUL
— Amit Shah (@AmitShah) July 1, 2024
ಅಮಿತ್ ಶಾ ಹೇಳಿದ್ದೇನು?
ಮಹಿಳೆಯರ ವಿರುದ್ಧದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ʼʼಹೊಸ ಕಾನೂನು ಸಂತ್ರಸ್ತೆಯ ಹೇಳಿಕೆಯನ್ನು ಅವರ ಮನೆಯಲ್ಲಿ ದಾಖಲಿಸಲು ಅವಕಾಶ ನೀಡುತ್ತದೆ ಮತ್ತು ಸಾಮಾಜಿಕ ಕಳಂಕದಿಂದ ಆಕೆಯನ್ನು ರಕ್ಷಿಸುವ ಉದ್ದೇಶದಿಂದ ಆನ್‌ಲೈನ್ ಎಫ್ಐಆರ್ ಸೌಲಭ್ಯವನ್ನೂ ಜಾರಿಗೆ ತರಲಾಗಿದೆ” ಎಂದು ತಿಳಿಸಿದ್ದಾರೆ.
“ಸಾಮಾಹಿಕ ಹತ್ಯೆ ಪ್ರಕರಣದ ಬಗ್ಗೆ ಈ ಹಿಂದೆ ಯಾವುದೇ ಪ್ರತ್ಯೇಕ ಕಾನೂನಿನ ಪ್ರಸ್ತಾವ ಇರಲಿಲ್ಲ. ಈಗ ಅದಕ್ಕೂ ಅವಕಾಶ ಕಲ್ಪಿಸಲಾಗಿದೆ. ಇದು ಬಹುದಿನಗಳ ಬೇಡಿಕೆಯಾಗಿತ್ತು. ಅಲ್ಲದೆ ನಾವು ದೇಶದ್ರೋಹದ ವಿಭಾಗವನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದೇವೆ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗಾಗಿ ಹೊಸ ವಿಭಾಗವನ್ನು ತಂದಿದ್ದೇವೆ. ಈ ಹಿಂದೆ ಸರ್ಕಾರದ ವಿರುದ್ಧ ಹೇಳಿಕೆ ನೀಡುವುದು ಅಪರಾಧವಾಗಿತ್ತು. ಈಗ ಭಾರತದ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಹಾನಿ ಮಾಡುವ ಪ್ರಯತ್ನಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಅವಕಾಶ ನೀಡುತ್ತದೆ” ಎಂದು ಅಮಿತ್ ಶಾ ವಿವರಿಸಿದ್ದಾರೆ.
ಹೊಸ ಕ್ರಿಮಿನಲ್ ಕಾನೂನುಗಳು ಆಧುನಿಕ ಕಾನೂನು ವ್ಯವಸ್ಥೆಯನ್ನು ವ್ಯಾಖ್ಯಾನಿಸುತ್ತವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. “ನಾವು ಕೇವಲ ತಂತ್ರಜ್ಞಾನವನ್ನು ಅಳವಡಿಸಿಕೊಂಡಿಲ್ಲ, ಮುಂದಿನ 50 ವರ್ಷಗಳಲ್ಲಿ ಸಂಭವಿಸಬಹುದಾದ ತಾಂತ್ರಿಕ ಬದಲಾವಣೆಗಳನ್ನು ಊಹಿಸಿ ಅದಕ್ಕೆ ತಕ್ಕಂತೆ ಬದಲಾವಣೆ ತಂದಿದ್ದೇವೆ. ಇದು ವಿಶ್ವದ ಅತ್ಯಂತ ಆಧುನಿಕ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಾಗಲಿದೆ ಎನ್ನುವ ವಿಶ್ವಾಸವಿದೆʼʼ ಎಂದಿದ್ದಾರೆ.
ʼʼದಾಳಿ ಮತ್ತು ಶೋಧದ ವೇಳೆ ವಿಡಿಯೊಗ್ರಫಿ ಈಗ ಕಡ್ಡಾಯವಾಗಿದೆ. ಇದರಿಂದ ಯಾರನ್ನೂ ಮೋಸ ಮಾಡಲು ಸಾಧ್ಯವಿಲ್ಲ. ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳದಿಂದ ಬದುಕುಳಿದವರ ಇ-ಸ್ಟೇಟ್‌ಮೆಂಟ್‌ಗೆ ಇನ್ನು ಕಾನೂನು ಮಾನ್ಯತೆ ಇರಲಿದೆʼʼ ಎಂದು ಅವರು ತಿಳಿಸಿದ್ದಾರೆ.
ಪ್ರತಿಪಕ್ಷಗಳ ನಡೆಗೆ ಟೀಕೆ
ಹೊಸ ಕಾನೂನುಗಳ ಬಗ್ಗೆ ಸರಿಯಾಗಿ ಚರ್ಚಿಸಲಾಗಿಲ್ಲ ಮತ್ತು 146 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ ನಂತರ ಸಂಸತ್ತಿನಲ್ಲಿ ಇದನ್ನು ಅಂಗೀಕರಿಸಲಾಗಿದೆ ಎಂದು ವಿರೋಧ ಪಕ್ಷ ಆರೋಪಕ್ಕೂ ಅಮಿತ್ ಶಾ ಉತ್ತರಿಸಿದ್ದಾರೆ. ʼʼಸಂಸದರನ್ನು ಸಾಮೂಹಿಕವಾಗಿ ಅಮಾನತುಗೊಳಿಸಿದ ನಂತರ ಮಸೂದೆಗಳನ್ನು ತರಲಾಗಿದೆ ಎಂಬುದು ಮತ್ತೊಂದು ಸುಳ್ಳು. ಹೊಸ ಕಾನೂನು ಜಾರಿಗೊಳಿಸುವ ಮುನ್ನ ನಮ್ಮ ಸಚಿವಾಲಯವು ಎಲ್ಲ ಸಂಸದರು, ಮುಖ್ಯಮಂತ್ರಿಗಳು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರು ಮತ್ತು ಅಧಿಕಾರಿಗಳಿಂದ ಸಲಹೆ ಪಡೆದುಕೊಂಡಿದೆ. ಈ ಎಲ್ಲ ಸಲಹೆಗಳನ್ನು ಅಧ್ಯಯನ ಮಾಡಲಾಗಿದೆ. ಈ ವಿಷಯದ ಬಗ್ಗೆ ಚರ್ಚಿಸಲು ನಾನು 158 ಸಭೆಗಳ ಅಧ್ಯಕ್ಷತೆ ವಹಿಸಿದ್ದೇನೆ. ಮಸೂದೆಯ ಚರ್ಚೆ ವೇಳೆ ಎಲ್ಲ ಪಕ್ಷಗಳ ಸದಸ್ಯರು ಭಾಗವಹಿಸಿದ್ದರು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: New Criminal Laws : ಹೊಸ ಕ್ರಿಮಿನಲ್ ಕಾನೂನು ಇಂದಿನಿಂದ ಜಾರಿ; ಏನು ಬದಲಾವಣೆ? ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ!
ʼʼನಾಲ್ಕೈದು ರಾಜಕೀಯ ಶೈಲಿಯ ಸಲಹೆಗಳನ್ನು ಹೊರತುಪಡಿಸಿ, ಪ್ರತಿಯೊಂದು ಸಲಹೆಯನ್ನು ಅಳವಡಿಸಿಕೊಳ್ಳಲಾಗಿದೆ. ಜತೆಗೆ 93 ತಿದ್ದುಪಡಿಗಳನ್ನು ಮಾಡಲಾಗಿದೆ. ಮಸೂದೆಯನ್ನು ಮತ್ತೆ ಕ್ಯಾಬಿನೆಟ್ ಅನುಮೋದಿಸಿದ ಬಳಿಕ ಅದನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಶತಮಾನಗಳ ನಂತರ ನಡೆಯುತ್ತಿರುವ ಇಂತಹ ಬದಲಾವಣೆಗೆ ರಾಜಕೀಯ ಬಣ್ಣ ನೀಡುವುದು ಸರಿಯಲ್ಲ. ಏನಾದರೂ ಸಂದೇಹಗಳಿದ್ದರೆ ನೇರ ನನ್ನ ಬಳಿಗೆ ಬಂದರೆ ಚರ್ಚೆ ನಡೆಸಲು ಸಿದ್ಧʼʼ ಎಂದು ತಿಳಿಸಿದ್ದಾರೆ.