Site icon Vistara News

Amit Shah: ಮತದಾನ ಕುಸಿತದಿಂದ ಬಿಜೆಪಿಗೆ ನಷ್ಟ? ಅಮಿತ್ ಶಾ ಹೇಳೋದೇನು?

Amit Shah

Amit Shah claims Arvind Kejriwal's campaign remark clear contempt of Supreme Court

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election) ಮೊದಲನೇ ಹಾಗೂ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಎರಡೂ ಹಂತಗಳಲ್ಲಿ ಕಳೆದ ಬಾರಿಗಿಂತ ಈ ಬಾರಿ ತಲಾ ಶೇ.3ರಷ್ಟು ಮತದಾನ ಪ್ರಮಾಣ ಕುಸಿತವಾಗಿದೆ. ಮತದಾನ ಪ್ರಮಾಣ ಕಡಿಮೆಯಾದ ಕಾರಣ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತದೆ. ನರೇಂದ್ರ ಮೋದಿ (Narendra Modi) ಅವರ ಅಲೆ ಕಡಿಮೆಯಾಗಿದ್ದು, ಮತದಾನ ಪ್ರಮಾಣ ಕುಂಠಿತಗೊಂಡಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಆದರೆ, ಮತದಾನ ಪ್ರಮಾಣ ಕಡಿಮೆಯಾಗಿರುವ ಕಾರಣ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂಬುದನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ತಿರಸ್ಕರಿಸಿದ್ದಾರೆ.

ನ್ಯೂಸ್‌ 18 ಸುದ್ದಿ ಸಂಸ್ಥೆಗೆ ಸಂದರ್ಶನ ನೀಡುವ ವೇಳೆ ಮತದಾನ ಪ್ರಮಾಣ ಕುಸಿತ, ಅದರಿಂದ ಬಿಜೆಪಿ ಮೇಲೆ ಉಂಟಾಗುವ ಪರಿಣಾಮ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು. “ದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಯಿತು ಎಂಬ ಮಾತ್ರಕ್ಕೆ ಫಲಿತಾಂಶದ ಮೇಲೆ ಅದು ಪರಿಣಾಮ ಬೀರುವುದಿಲ್ಲ. ಬಿಜೆಪಿಯು ಖಂಡಿತವಾಗಿಯೂ ಸರಿಯಾದ ಮಾರ್ಗದಲ್ಲಿದೆ. ನೀವು ಬೇಕಾದರೆ ಗಮನಿಸಿ, ಜೂನ್‌ 4ರಂದು ಫಲಿತಾಂಶ ಪ್ರಕಟವಾಗುವ ದಿನ ಮಧ್ಯಾಹ್ನ 12.30ರ ವೇಳೆಗೆ ಎನ್‌ಡಿಎ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುತ್ತದೆ. ಅಷ್ಟಕ್ಕೂ, ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತ” ಎಂದು ಹೇಳಿದರು.

ಮತದಾನ ಕುಸಿತಕ್ಕೆ 2 ಕಾರಣ ಕೊಟ್ಟ ಶಾ

ಎರಡು ಹಂತಗಳಲ್ಲಿ ಮತದಾನ ಕುಸಿತಗೊಂಡಿರುವುದಕ್ಕೆ ಅಮಿತ್‌ ಶಾ ಅವರು ಎರಡು ಪ್ರಮುಖ ಕಾರಣ ಕೊಟ್ಟಿದ್ದಾರೆ. “12 ವರ್ಷಗಳ ಬಳಿಕ ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಬದಲಾವಣೆಗಳಾಗಿವೆ. ಇನ್ನು, ಬಿಜೆಪಿ ವಿರುದ್ಧ ಪ್ರಬಲ ಸ್ಪರ್ಧಿಗಳು ಇಲ್ಲದ ಕಾರಣ ಮತದಾನ ಕುಸಿತವಾಗಿದೆ. ಆದರೆ, ನಮ್ಮ ಪಕ್ಷ, ಪರಿಣತರು ಸೇರಿ ನಾವೊಂದು ವಿಶ್ಲೇಷಣೆ ಮಾಡಿದ್ದೇವೆ. ಎರಡು ಹಂತಗಳಲ್ಲಿ ಬಿಜೆಪಿಗೆ 100 ಸೀಟು ಸಿಗಲಿವೆ. 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರಲ್ಲಿ ಅನುಮಾನವೇ ಇಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಾರಿ 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಈಗಾಗಲೇ ಎರಡು ಹಂತಗಳ ಮತದಾನ ಮುಕ್ತಾಯವಾಗಿದೆ. ಮೊದಲ ಹಂತದಲ್ಲಿ 66.1%ರಷ್ಟು ಮತದಾನವಾಗಿದ್ದು, 2ನೇ ಹಂತದಲ್ಲಿ 66.7%ರಷ್ಟು ಮತದಾನವಾಗಿದೆ. ಆದರೆ, 2019ರಲ್ಲಿ, ಈ ಹಂತಗಳ ಅಂಕಿಅಂಶಗಳು ಕ್ರಮವಾಗಿ 69.4% ಮತ್ತು 69.6% ಆಗಿದ್ದವು. ಮತದಾನ ಪ್ರಮಾಣ ಕಡಿಮೆಯಾದ ಕಾರಣ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ, ಇನ್ನೂ ಐದು ಹಂತಗಳ ಮತದಾನ ಬಾಕಿ ಇರುವ ಕಾರಣ ಮತದಾನ ಪ್ರಮಾಣದ ಮೇಲೆ ಎಲ್ಲರ ಗಮನ ಇದೆ.

ಇದನ್ನೂ ಓದಿ: Amit Shah: ಅಮಿತ್‌ ಶಾ ತಿರುಚಿದ ವಿಡಿಯೋ ಪ್ರಕರಣ: ಆಪ್‌, ಕಾಂಗ್ರೆಸ್‌ ಪಕ್ಷದ ಮೂವರ ಬಂಧನ

Exit mobile version