Site icon Vistara News

ರಾಮನಗರಿ ಅಯೋಧ್ಯೆಯಲ್ಲಿ ಮನೆ ಕಟ್ಟಿಸಲು ಜಾಗ ಖರೀದಿಸಿದ ಅಮಿತಾಭ್‌ ಬಚ್ಚನ್;‌ ಬೆಲೆ ಎಷ್ಟು?

Amitabh Bachchan

Amitabh Bachchan buys plot for home in Ayodhya

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ (Ram Mandir) ಲೋಕಾರ್ಪಣೆಗೆ ಏಳು ದಿನ ಮಾತ್ರ ಬಾಕಿ ಉಳಿದಿವೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನವರಿ 22ರಂದು ರಾಮಮಂದಿರವನ್ನು ಉದ್ಘಾಟಿಸಲಿದ್ದಾರೆ. ಇನ್ನು ರಾಮಮಂದಿರದ ಹಿನ್ನೆಲೆಯಲ್ಲಿ ಅಯೋಧ್ಯೆಯು ವಿಶ್ವಾದ್ಯಂತ ಖ್ಯಾತಿಯಾಗಿದೆ. ಇದರ ಬೆನ್ನಲ್ಲೇ, ಅಯೋಧ್ಯೆಯಲ್ಲಿ ನಿವೇಶನ ಸೇರಿ ವಿವಿಧ ಬಗೆಯ ಆಸ್ತಿಗಳ ಬೆಲೆಯು ಗಗನಕ್ಕೇರಿದೆ. ಇದರ ಬೆನ್ನಲ್ಲೇ, ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ (Amitabh Bachchan) ಅವರು ಅಯೋಧ್ಯೆಯಲ್ಲಿ ಮನೆ ಕಟ್ಟಿಸಲು ನಿವೇಶನ ಖರೀದಿ ಮಾಡಿದ್ದಾರೆ.

ಹೌದು, ಅಮಿತಾಭ್‌ ಬಚ್ಚನ್‌ ಅವರು ರಾಮನಗರಿ ಅಯೋಧ್ಯೆಯಲ್ಲಿ ಮನೆ ಕಟ್ಟಿಸಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಅವರು ಸರಯೂ ನದಿ ತೀರದಲ್ಲಿ ಮುಂಬೈ ಮೂಲದ ಡೆವಲಪರ್‌ ಕಂಪನಿಯಾದ ದಿ ಹೌಸ್‌ ಆಫ್‌ ಅಭಿನಂದನ್‌ ಲೋಧಾ (HoABL) ನಿವೇಶನವನ್ನು ಅಮಿತಾಭ್‌ ಬಚ್ಚನ್‌ ಖರೀದಿಸಿದ್ದಾರೆ. ಸುಮಾರು 10 ಸಾವಿರ ಚದರ ಅಡಿಯಲ್ಲಿ ಬಾಲಿವುಡ್‌ ನಟ ಮನೆ ನಿರ್ಮಿಸಲಿದ್ದು, ಸುಮಾರು 14.5 ಕೋಟಿ ರೂ. ವ್ಯಯಿಸಿ ನಿವೇಶನ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಅಮಿತಾಭ್‌ ಬಚ್ಚನ್‌ ಅವರನ್ನೂ ಆಹ್ವಾನಿಸಲಿದ್ದು, ಅವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಯೋಧ್ಯೆಯಲ್ಲಿ ಆಸ್ತಿಗೆ ವಜ್ರದ ಬೆಲೆ

ರಾಮಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ನಿವೇಶನಗಳ ಬೆಲೆ ಗಗನಕ್ಕೇರಿದೆ. ವಿಶೇಷ ಎಂದರೆ ರಾಮಮಂದಿರ ಇರುವ ಅಯೋಧ್ಯೆ ಮಾತ್ರವಲ್ಲ ನಗರದ ಹೊರ ವಲಯದಲ್ಲಿಯೂ ಭೂಮಿಗೆ ಬೇಡಿಕೆ ಹೆಚ್ಚಾಗಿದೆ. ಉದಾಹರಣೆಗೆ ಫೈಜಾಬಾದ್‌ ರಸ್ತೆಯ ಭಾಗ. 2019ರಲ್ಲಿ ಇಲ್ಲಿ ಚದರ ಅಡಿಯ ಭೂಮಿಗೆ 400ರಿಂದ 700 ರೂ. ಇತ್ತು. 2023ರ ಅಕ್ಟೋಬರ್ ವೇಳೆಗೆ ಚದರ ಅಡಿಗೆ 1,500 ರೂ.ಗಳಿಂದ 3,000 ರೂ.ಗೆ ಬೆಲೆ ಏರಿಕೆಯಾಗಿದೆ. ಅದೇ ರೀತಿ ಅಯೋಧ್ಯೆ ನಗರದಲ್ಲಿ ಭೂಮಿಯ ಬೆಲೆ 2019ರಲ್ಲಿ ಪ್ರತಿ ಚದರ ಅಡಿಗೆ 1,000-2,000 ರೂ.ಗಳಿಂದ ಪ್ರಸ್ತುತ ಪ್ರತಿ ಚದರ ಅಡಿಗೆ 4,000-6,000 ರೂ.ಗೆ ಹೆಚ್ಚಳವಾಗಿದೆ. ಅಂದರೆ 2019-2023ರ ಅವಧಿಯಲ್ಲಿ ಭೂಮಿಯ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆ ದಾಖಲಿಸಿದೆ.

ಇದನ್ನೂ ಓದಿ: Ayodhya Ram Mandir: ಅಯೋಧ್ಯೆಯಲ್ಲಿ ಸರ್ಪಗಾವಲು; 10,000 ಸಿಸಿ ಟಿವಿ ಕ್ಯಾಮರಾ ಅಳವಡಿಕೆ

ಅಯೋಧ್ಯೆ ನಗರದಲ್ಲಿ ಹಲವು ಟೌನ್ ಶಿಪ್‌ಗಳು ಮತ್ತು ಖಾಸಗಿ ಹೋಟೆಲ್‌ಗಳು ತಲೆ ಎತ್ತುವ ನಿರೀಕ್ಷೆ ಇದೆ. ಇದಕ್ಕಾಗಿ ಸರ್ಕಾರವು ಭೂಮಿಯನ್ನು ಮಂಜೂರು ಮಾಡಿದೆ. ಇದು ಚೌಡಾ ಕೋಸಿ, ರಿಂಗ್ ರಸ್ತೆ ಮತ್ತು ಲಖನೌ-ಗೋರಖ್‌ಪುರ ಹೆದ್ದಾರಿಯ ಸುತ್ತಲೂ ಇದೆ. ಅಯೋಧ್ಯೆ ಡೆವಲಪ್‌ಮೆಂಟ್‌ ಅಥಾರಿಟಿ ಇಲ್ಲಿ ವಸತಿ ಯೋಜನೆ ಆರಂಭಿಸಲಿದೆ. ಸುಮಾರು 80 ಎಕ್ರೆಯಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. 2023ರ ಏಪ್ರಿಲ್ ಮತ್ತು ನವೆಂಬರ್ ನಡುವೆ ಅಯೋಧ್ಯೆಯಲ್ಲಿ 30,000 ಮಾರಾಟ ಪತ್ರಗಳು ನೋಂದಾಯಿಸಲ್ಪಟ್ಟಿವೆ. ಆ ಪೈಕಿ ಶೇ. 80ರಷ್ಟು ಭೂ ವ್ಯವಹಾರಕ್ಕೆ ಸಂಬಂಧಪಟ್ಟಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version