ಮುಂಬೈ: ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು ನಟನೆಯಿಂದ ಎಷ್ಟು ಖ್ಯಾತಿಯೋ, ಅವರು ಪ್ರಬುದ್ಧ ವರ್ತನೆ, ಅಪೂರ್ವ ವ್ಯಕ್ತಿತ್ವದಿಂದಲೂ ಖ್ಯಾತಿ ಗಳಿಸಿದ್ದಾರೆ. ಹಾಗಾಗಿಯೇ, ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಅಮಿತಾಭ್ ಬಚ್ಚನ್ ಎಂದರೆ ಎಲ್ಲಿಲ್ಲದ ಪ್ರೀತಿ. ಆದರೆ, ಇಂತಹ ಅಮಿತಾಭ್ ಬಚ್ಚನ್ ಅವರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಆಗಿದ್ದಾರೆ. 2010ರಲ್ಲಿ ಅವರು ಮಾಡಿದ ಒಂದು ಟ್ವೀಟ್ ವಿರುದ್ಧ ಜನ ಈಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಅಮಿತಾಭ್ ಬಚ್ಚನ್ ಅವರು 2010ರಲ್ಲಿ ಒಂದು ಟ್ವೀಟ್ ಮಾಡಿದ್ದರು. “ಬ್ರಾ ಏಕೆ ಏಕವಚನ, ಪ್ಯಾಂಟೀಸ್ ಏಕೆ ಬಹುವಚನ” ಎಂದು ತಮಾಷೆಯಾಗಿ ಅವರು ಟ್ವೀಟ್ ಮಾಡಿದ್ದರು. ಪದಗಳ ಸಂಬೋಧನೆ ಕುರಿತು ಅವರು ಸಿಲ್ಲಿ ಪ್ರಶ್ನೆ ಕೇಳಿದ್ದರು. ಇದು ಈಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥೈಸಿಕೊಂಡು ಅಮಿತಾಭ್ ಬಚ್ಚನ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
“ಕೊನೆಗೂ ಒಬ್ಬರಾದರೂ ತುಂಬ ಪ್ರಮುಖ ಪ್ರಶ್ನೆ ಕೇಳಿದರು” ಎಂದು ವ್ಯಕ್ತಿಯೊಬ್ಬರು ವ್ಯಂಗ್ಯ ಮಾಡಿದ್ದಾರೆ. “ತುಂಬ ಒಳ್ಳೆಯ ಪ್ರಶ್ನೆ. ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಮುಂದಿನ ಸೀಸನ್‌ನಲ್ಲಿ ಈ ಪ್ರಶ್ನೆ ಕೇಳಿ” ಎಂದು ಮತ್ತೊಬ್ಬರು ಕುಟುಕಿದ್ದಾರೆ. ಹಾಗೆಯೇ, “ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ” ಎಂದು ಮತ್ತೊಬ್ಬ ವ್ಯಕ್ತಿಯು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಹಲವು ಜನ ಹಳೆಯ ಟ್ವೀಟ್‌ಗೆ ಈಗ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Kalki 2898 – AD: ʻಪ್ರಾಜೆಕ್ಟ್ ಕೆʼ ಸಿನಿಮಾ ಟೈಟಲ್ ರಿವೀಲ್; ಪ್ರಭಾಸ್, ದೀಪಿಕಾ, ಅಮಿತಾಭ್ ಲುಕ್ ಔಟ್!
ಎರಡು ತಿಂಗಳ ಹಿಂದಷ್ಟೇ, ಅಮಿತಾಭ್ ಬಚ್ಚನ್ ಅವರು ಟ್ರೋಲ್ ಆಗಿದ್ದರು. ಅವರು ತಮ್ಮ ಚಿತ್ರೀಕರಣದ ಸೆಟ್‌ಗೆ ಹೋಗುವಾಗ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಇದಕ್ಕಾಗಿ ಅವರನ್ನು ಟ್ರೋಲ್ ಮಾಡಲಾಗಿತ್ತು. ಹೆಚ್ಚು ಟ್ರಾಫಿಕ್ ಇತ್ತಂತೆ. ಹಾಗಾಗಿ ಅವರು ಅಪರಿಚಿತ ವ್ಯಕ್ತಿಯೊಬ್ಬರ ಬೈಕ್‌ನಲ್ಲಿ ಸೆಟ್‌ಗೆ ಹೋಗಿದ್ದಾಗಿ ಅವರು ಬಳಿಕ ಹೇಳಿಕೊಂಡಿದ್ದರು. ಆದರೂ ಜನ ಅವರನ್ನು ಟೀಕಿಸಿದ್ದರು.