Site icon Vistara News

Heeraben Modi | ಅಮ್ಮ ಎಷ್ಟು ಅಸಾಧಾರಣಳೋ, ಅಷ್ಟೇ ಸರಳ… ಶತಾಯುಷಿ ತಾಯಿ ಬಗ್ಗೆ ಮೋದಿ ಬರೆದಿದ್ದ ಹೃದಯಸ್ಪರ್ಶಿ ಲೇಖನ

heeraben

ಗಾಂಧಿ ನಗರ: ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ನಗರದಲ್ಲಿ ಅಗಲಿದ ತಾಯಿ ಹೀರಾಬೆನ್ ಅವರ ಅಂತ್ಯಕ್ರಿಯೆಯಲ್ಲಿ ಶುಕ್ರವಾರ ಭಾಗವಹಿಸಿದ್ದಾರೆ. ಮೊದಲಿನಿಂದಲೂ ನರೇಂದ್ರ ಮೋದಿ ಅವರಿಗೆ ಅಮ್ಮ ಎಂದರೆ ಪ್ರೀತಿ ಮತ್ತು ಹೆಮ್ಮೆ. ಪ್ರತಿ ವರ್ಷ ತಾಯಿಯ ಜನ್ಮ ದಿನದಂದು ಎಲ್ಲಿದ್ದರೂ, ತಪ್ಪದೆ ಮನೆಗೆ ಬಂದು ಭೇಟಿಯಾಗಿ ಆಶೀರ್ವಾದವನ್ನು ಪಡೆಯುತ್ತಿದ್ದರು. ತಾಯಿಯ ತ್ಯಾಗ, ಸರಳ ಜೀವನ, ಆದರ್ಶಗಳ ಬಗ್ಗೆ ಮೋದಿಯವರು ಹಲವಾರು ಬಾರಿ ಸ್ಮರಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಹೀರಾಬೆನ್‌ ಅವರಿಗೆ ನೂರು ವರ್ಷ ತುಂಬಿದಾಗ ಹೃದಯಸ್ಪರ್ಶಿಯಾಗಿ ಸುದೀರ್ಘ ಲೇಖನವನ್ನು ತಮ್ಮ ಬ್ಲಾಗ್‌ನಲ್ಲಿ (Heeraben Modi )ಬರೆದಿದ್ದರು.

ಇಡೀ ದೇಶದ ಸಮಸ್ತ ತಾಯಂದಿರ ಹೃದಯ ವೈಶಾಲ್ಯತೆಯನ್ನು ಆಗ ಮೋದಿಯವರು ಸಮೀಕರಿಸಿದ್ದರು. ನಿಮ್ಮ ತಾಯಿ ಕೂಡ ನನ್ನ ತಾಯಿಯ ಹಾಗೆ ಎಂಬುದು ನನಗೆ ಖಾತರಿ ಇದೆ ಎನ್ನುವ ಮೂಲಕ ಎಲ್ಲ ತಾಯಂದರಿಗೂ ಪ್ರಧಾನಿ ಮೋದಿ ಗೌರವ ಸಲ್ಲಿಸಿದ್ದರು. ಈ ಮೂಲಕ “ಮಾತೃ ದೇವೊಭವʼದ ಆದರ್ಶವನ್ನು ಸಾರಿದ್ದರು. ದೇಶಕ್ಕೆ ಪ್ರಧಾನಿಯಾದರೂ, ತಾಯಿಗೆ ಮಗನಲ್ಲವೇ. ಭಾರತೀಯರು ತಾಯಿಗೆ “ಮಾತೃ ದೇವೋಭವʼ ಎಂದು ಎಲ್ಲರಿಗಿಂತ ಮಿಗಿಲಾದ ಉನ್ನತ ಹಾಗೂ ಪೂಜ್ಯ ಸ್ಥಾನಮಾನವನ್ನು ಮತ್ತು ಶ್ರೇಷ್ಠ ಮೌಲ್ಯವನ್ನು ಪ್ರಾಚೀನ ಕಾಲದಿಂದಲೇ ನೀಡಿದ್ದಾರೆ. ತಾಯಿಯಲ್ಲಿ ದೇವರನ್ನು ಕಾಣುವುದು ಭಾರತದ ಸಂಸ್ಕೃತಿಯೂ ಹೌದು.

ತಾಯಿ ಹೀರಾಬೆನ್‌ ಶತಾಯುಷಿಯಾದಾಗ ಪ್ರಧಾನಿ ಮೋದಿ ಬರೆದ ಲೇಖನದ ಸಾರಾಂಶ:

ನನ್ನಲ್ಲಿರುವ ಒಳ್ಳೆಯತನಕ್ಕೆ ಹೆತ್ತವರೇ ಕಾರಣ

ನನ್ನ ಅಮ್ಮ ಶ್ರೀಮತಿ ಹೀರಾಬಾ ನೂರನೇ ವರ್ಷಕ್ಕೆ ಕಾಲಿಡುತ್ತಿರುವುದನ್ನು ಹಂಚಿಕೊಳ್ಳಲು ನನಗೆ ಅತ್ಯಂತ ಸಂತೋಷವಾಗುತ್ತಿದೆ. ಇದು ಅವರ ಜನ್ಮ ಶತಮಾನೋತ್ಸವ ವರ್ಷ. ನನ್ನ ತಂದೆ ಬದುಕಿದ್ದರೆ ಅವರೂ ಕಳೆದ ವಾರ ನೂರನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ತಾಯಿಯ ಶತಮಾನೋತ್ಸವ ವರ್ಷ ಆರಂಭವಾಗುತ್ತಿರುವುದರಿಂದ ಮತ್ತು ನನ್ನ ತಂದೆಯವರು ಶತಮಾನೋತ್ಸವವನ್ನು ಪೂರ್ಣಗೊಳಿಸುತ್ತಿದ್ದರಿಂದ 2022 ಒಂದು ವಿಶೇಷ ವರ್ಷ.

ಕಳೆದ ವಾರವಷ್ಟೇ, ನನ್ನ ಸೋದರ ಸಂಬಂಧಿಯು ಗಾಂಧಿನಗರದಲ್ಲಿರುವ ನನ್ನ ತಾಯಿಯ ಕೆಲವು ವೀಡಿಯೊಗಳನ್ನು ಕಳುಹಿಸಿದ್ದರು. ಕೆಲವು ಯುವಕರು ಮನೆಗೆ ಬಂದಿದ್ದರು, ತಂದೆಯ ಭಾವಚಿತ್ರವನ್ನು ಕುರ್ಚಿಯ ಮೇಲೆ ಇಡಲಾಗಿತ್ತು, ಕೀರ್ತನೆ ನಡೆಯುತ್ತಿತ್ತು ಮತ್ತು ತಾಯಿ ಮಂಜೀರ ನುಡಿಸುತ್ತಾ ಭಜನೆಯಲ್ಲಿ ಮಗ್ನರಾಗಿದ್ದರು. ಅಮ್ಮ ಇನ್ನೂ ಹಾಗೆಯೇ ಇದ್ದಾರೆ – ವಯೋಸಹಜತೆಯಿಂದ ದೈಹಿಕವಾಗಿ ಕ್ಷೀಣಿಸಿರಬಹುದು, ಆದರೆ ಮಾನಸಿಕವಾಗಿ ಆಕೆ ಎಂದಿನಂತೆಯೇ ಚುರುಕಾಗಿದ್ದಾರೆ.

ನಮ್ಮ ಕುಟುಂಬದಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ಪದ್ಧತಿ ಇರಲಿಲ್ಲ. ಆದರೆ, ನನ್ನ ತಂದೆಯ ಜನ್ಮದಿನದಂದು ಅವರ ನೆನಪಿಗಾಗಿ ಯುವ ಪೀಳಿಗೆಯ ಮಕ್ಕಳು 100 ಗಿಡಗಳನ್ನು ನೆಟ್ಟರು.

ನನ್ನ ಜೀವನದಲ್ಲಿ ನಡೆದ ಒಳ್ಳೆಯದಕ್ಕೆ ಮತ್ತು ನನ್ನಲ್ಲಿರುವ ಒಳ್ಳೆಯತನಕ್ಕೆ ನನ್ನ ಹೆತ್ತವರೇ ಕಾರಣ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇಂದು, ದೆಹಲಿಯಲ್ಲಿ ಕುಳಿತಿರುವ ನನಗೆ ಹಿಂದಿನ ನೆನಪುಗಳು ತುಂಬಿ ಬರುತ್ತವೆ.

ನನ್ನ ತಾಯಿ ಎಷ್ಟು ಅಸಾಧಾರಣಳೋ ಅಷ್ಟೇ ಸರಳ, ಎಲ್ಲಾ ತಾಯಂದಿರಂತೆ!. ನಾನು ನನ್ನ ತಾಯಿಯ ಬಗ್ಗೆ ಬರೆಯುವಾಗ, ನಿಮ್ಮಲ್ಲಿ ಅನೇಕರಿಗೆ ನಿಮ್ಮ ತಾಯಂದಿರ ಬಗ್ಗೆ ಹೇಳಿದಂತೆಯೂ ಆಗಬಹುದು ಎಂದು ನನಗೆ ಖಾತ್ರಿಯಿದೆ. ಇದನ್ನು ಓದುವಾಗ, ನೀವು ನಿಮ್ಮ ಸ್ವಂತ ತಾಯಿಯ ಚಿತ್ರವನ್ನೇ ನೋಡಬಹುದು.

ಬಾಲ್ಯದಲ್ಲೇ ಅಮ್ಮನನ್ನು ಕಳೆದುಕೊಂಡಿದ್ದ ಹೀರಾಬೆನ್‌

ನನ್ನ ತಾಯಿ ಗುಜರಾತ್‌ನ ಮೆಹ್ಸಾನಾದ ವಿಸ್ನಗರದಲ್ಲಿ ಜನಿಸಿದರು, ಇದು ನನ್ನ ತವರು ವಡ್ನಾಗರಕ್ಕೆ ಬಹಳ ಹತ್ತಿರದಲ್ಲಿದೆ. ಆಕೆಗೆ ಸ್ವಂತ ತಾಯಿಯ ವಾತ್ಸಲ್ಯ ಸಿಗಲಿಲ್ಲ. ನನ್ನ ತಾಯಿಯು ಎಳೆವಯಸ್ಸಿನಲ್ಲಿಯೇ ನನ್ನ ಅಜ್ಜಿಯನ್ನು ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ರೋಗದಿಂದಾಗಿ ಕಳೆದುಕೊಂಡರು. ಆಕೆಗೆ ನನ್ನ ಅಜ್ಜಿಯ ಮುಖವಾಗಲಿ, ಅವಳ ಮಡಿಲಿನ ನೆಮ್ಮದಿಯಾಗಲಿ ನೆನಪಿಲ್ಲ. ಬಾಲ್ಯವನ್ನು ತನ್ನ ತಾಯಿಯಿಲ್ಲದೆ ಕಳೆದರು. ನಾವೆಲ್ಲರೂ ಮಾಡುವಂತೆ ಅವರು ತನ್ನ ತಾಯಿಯ ಮೇಲೆ ಕೋಪತಾಪ ತೋರಿಸಲು ಸಾಧ್ಯವಾಗಲಿಲ್ಲ. ನಮ್ಮೆಲ್ಲರಂತೆ ಅವರಿಗೆ ತನ್ನ ತಾಯಿಯ ಮಡಿಲಿನಲ್ಲಿ ಮಲಗಲಾಗಲಿಲ್ಲ. ಶಾಲೆಗೆ ಹೋಗಿ ಓದು ಬರಹ ಕಲಿಯಲೂ ಆಗಲಿಲ್ಲ. ಆಕೆಯ ಬಾಲ್ಯವು ಬಡತನ ಮತ್ತು ಕಷ್ಟದಿಂದ ಕೂಡಿತ್ತು.

ಇಂದಿಗೆ ಹೋಲಿಸಿದರೆ ಅಮ್ಮನ ಬಾಲ್ಯ ಅತ್ಯಂತ ಕಷ್ಟಕರವಾಗಿತ್ತು. ಬಹುಶಃ, ದೇವರು ಆಕೆಗೆ ನೀಡಿದ್ದು ಇದನ್ನೇ ಅನ್ನಿಸುತ್ತದೆ. ಇದು ದೇವರ ಇಚ್ಛೆ ಎಂದು ತಾಯಿಯೂ ನಂಬುತ್ತಾರೆ. ಆದರೆ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು, ತಾಯಿಯ ಮುಖವನ್ನೂ ನೋಡಲಾಗಲಿಲ್ಲವಲ್ಲ ಎಂಬ ಕೊರಗು ಆಕೆಗೆ ನೋವು ನೀಡುತ್ತಲೇ ಇದೆ.
ಈ ಹೆಣಗಾಟಗಳಿಂದಾಗಿ ತಾಯಿಯು ಬಾಲ್ಯವನ್ನು ಅನುಭವಿಸಲಾಗಲಿಲ್ಲ, ಆಕೆಯು ತನ್ನ ವಯಸ್ಸಿಗೆ ಮೀರಿ ಬೆಳೆಯುವಂತೆ ಮಾಡಿತು. ಕುಟುಂಬದಲ್ಲಿ ಹಿರಿಯ ಮಗುವಾಗಿದ್ದ ಅವರು ಮದುವೆಯ ನಂತರ ಹಿರಿಯ ಸೊಸೆಯಾದರು. ಆಕೆಯ ಬಾಲ್ಯದಲ್ಲಿ, ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು ಮತ್ತು ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಮದುವೆಯ ನಂತರವೂ ಆಕೆ ಈ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದರು. ದುರ್ಭರವಾದ ಜವಾಬ್ದಾರಿಗಳು ಮತ್ತು ದೈನಂದಿನ ಹೋರಾಟಗಳ ಹೊರತಾಗಿಯೂ, ತಾಯಿ ಇಡೀ ಕುಟುಂಬವನ್ನು ಸಹನೆ ಮತ್ತು ಸ್ಥೈರ್ಯದಿಂದ ಒಟ್ಟಿಗೆ ಹಿಡಿದಿಟ್ಟರು.

ಮಳೆಗೆ ಸೋರುತ್ತಿದ್ದ ಪುಟ್ಟ ಗುಡಿಸಲೇ ಮನೆ

ಅಮ್ಮನ ಬಾಲ್ಯ ಅತ್ಯಂತ ಕಷ್ಟಕರವಾಗಿತ್ತು. ಬಹುಶಃ, ದೇವರು ಆಕೆಗೆ ನೀಡಿದ್ದು ಇದನ್ನೇ ಅನ್ನಿಸುತ್ತದೆ. ಇದು ದೇವರ ಇಚ್ಛೆ ಎಂದು ತಾಯಿಯೂ ನಂಬುತ್ತಾರೆ. ಆದರೆ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು, ತಾಯಿಯ ಮುಖವನ್ನೂ ನೋಡಲಾಗಲಿಲ್ಲವಲ್ಲ ಎಂಬ ಕೊರಗು ಆಕೆಗೆ ನೋವು ನೀಡುತ್ತಲೇ ಇದೆ.
ಈ ಹೆಣಗಾಟಗಳಿಂದಾಗಿ ತಾಯಿಯು ಬಾಲ್ಯವನ್ನು ಅನುಭವಿಸಲಾಗಲಿಲ್ಲ, ಆಕೆಯು ತನ್ನ ವಯಸ್ಸಿಗೆ ಮೀರಿ ಬೆಳೆಯುವಂತೆ ಮಾಡಿತು. ಕುಟುಂಬದಲ್ಲಿ ಹಿರಿಯ ಮಗುವಾಗಿದ್ದ ಅವರು ಮದುವೆಯ ನಂತರ ಹಿರಿಯ ಸೊಸೆಯಾದರು. ಆಕೆಯ ಬಾಲ್ಯದಲ್ಲಿ, ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು ಮತ್ತು ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಮದುವೆಯ ನಂತರವೂ ಆಕೆ ಈ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದರು. ದುರ್ಭರವಾದ ಜವಾಬ್ದಾರಿಗಳು ಮತ್ತು ದೈನಂದಿನ ಹೋರಾಟಗಳ ಹೊರತಾಗಿಯೂ, ತಾಯಿ ಇಡೀ ಕುಟುಂಬವನ್ನು ಸಹನೆ ಮತ್ತು ಸ್ಥೈರ್ಯದಿಂದ ಒಟ್ಟಿಗೆ ಹಿಡಿದಿಟ್ಟರು.

ವಡ್ನಾಗರದಲ್ಲಿ, ನಮ್ಮ ಕುಟುಂಬವು ಶೌಚಾಲಯ ಅಥವಾ ಸ್ನಾನದ ಮನೆಯಂತಹ ಐಷಾರಾಮಗಳಿರಲಿ, ಕಿಟಕಿಯೂ ಇಲ್ಲದ ಪುಟ್ಟ ಮನೆಯಲ್ಲಿ ವಾಸಿಸುತ್ತಿತ್ತು. ಮಣ್ಣಿನ ಗೋಡೆಗಳು ಮತ್ತು ಮಣ್ಣಿನ ಹೆಂಚುಗಳ ಛಾವಣಿಯಿದ್ದ ಒಂದು ಕೋಣೆಯನ್ನೇ ನಾವು ನಮ್ಮ ಮನೆ ಎಂದು ಕರೆಯುತ್ತಿದ್ದೆವು. ನಾವೆಲ್ಲರೂ-ನನ್ನ ಹೆತ್ತವರು, ನನ್ನ ಒಡಹುಟ್ಟಿದವರು ಮತ್ತು ನಾನು ಅದರಲ್ಲಿಯೇ ಇದ್ದೆವು.

ಬೆಳಗ್ಗೆ ನಾಲ್ಕು ಗಂಟೆಗೆ ದಿನಚರಿ ಶುರು

ಗಡಿಯಾರದ ಗಂಟೆ ಬಾರಿಸಿದಂತೆ, ನನ್ನ ತಂದೆ ಬೆಳಗ್ಗೆ ನಾಲ್ಕು ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದರು. ಅವರ ಹೆಜ್ಜೆ ಸಪ್ಪಳವು ಅಕ್ಕಪಕ್ಕದವರಿಗೆ ಈಗ ನಾಲ್ಕು ಗಂಟೆಯಾಗಿದೆ ಮತ್ತು ದಾಮೋದರ್ ಕಾಕಾ ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ಹೇಳುತ್ತಿದ್ದವು. ತನ್ನ ಪುಟ್ಟ ಚಹಾ ಅಂಗಡಿಯನ್ನು ತೆರೆಯುವ ಮೊದಲು ಸ್ಥಳೀಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವುದು ಅವರ ಮತ್ತೊಂದು ದೈನಂದಿನ ಆಚರಣೆಯಾಗಿತ್ತು.

ತಾಯಿಯೂ ಅಷ್ಟೇ ಸಮಯಪಾಲನೆ ಮಾಡುತ್ತಿದ್ದರು. ಅವರು ಕೂಡ ನನ್ನ ತಂದೆಯೊಂದಿಗೆ ಏಳುತ್ತಿದ್ದರು ಮತ್ತು ಬೆಳಗ್ಗೆಯೇ ಅನೇಕ ಕೆಲಸಗಳನ್ನು ಮುಗಿಸುತ್ತಿದ್ದರು. ಕಾಳುಗಳನ್ನು ಅರೆಯುವುದರಿಂದ ಹಿಡಿದು ಅಕ್ಕಿ ಮತ್ತು ಬೇಳೆಯನ್ನು ಜರಡಿ ಹಿಡಿಯುವವರೆಗೆ ತಾಯಿಗೆ ಯಾರದೇ ನೆರವಿರಲಿಲ್ಲ. ಕೆಲಸ ಮಾಡುವಾಗ ಆಕೆ ತನ್ನ ನೆಚ್ಚಿನ ಭಜನೆ ಮತ್ತು ಸ್ತೋತ್ರಗಳನ್ನು ಗುನುಗುತ್ತಿದ್ದರು. 

ಕೆಲ ಮನೆಗಳಲ್ಲಿ ಪಾತ್ರೆ ತೊಳೆಯುತ್ತಿದ್ದ ಅಮ್ಮ

ಮನೆಯ ಖರ್ಚನ್ನು ನಿಭಾಯಿಸಲು ತಾಯಿ ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರು. ನಮ್ಮ ಅಲ್ಪ ಆದಾಯಕ್ಕೆ ಪೂರಕವಾಗಿ ಚರಖಾದಲ್ಲಿ ನೂಲುತ್ತಿದ್ದರು. ಹತ್ತಿ ಬಿಡಿಸುವುದರಿಂದ ಹಿಡಿದು ನೂಲುವವರೆಗೆ ಎಲ್ಲವನ್ನೂ ಮಾಡುತ್ತಿದ್ದರು. ಇಂತಹ ಕಷ್ಟದ ಕೆಲಸದ ನಡುವೆಯೂ ಹತ್ತಿಗಿಡದ ಮುಳ್ಳು ನಮಗೆ ಚುಚ್ಚದಂತೆ ಕಾಳಜಿ ವಹಿಸುತ್ತಿದ್ದರು.

ಮಳೆಗಾಲದಲ್ಲಿ ಸೋರುತ್ತಿದ್ದ ಛಾವಣಿ

ತಾಯಿ ಇತರರ ಮೇಲೆ ಅವಲಂಬಿತರಾಗುತ್ತಿರಲಿಲ್ಲ ಅಥವಾ ಇತರರನ್ನು ತನ್ನ ಕೆಲಸ ಮಾಡುವಂತೆ ಕೇಳುತ್ತಿರಲಿಲ್ಲ. ಮುಂಗಾರು ಮಳೆಯು ನಮ್ಮ ಮಣ್ಣಿನ ಮನೆಗೆ ಅದರದೇ ಆದ ಸಮಸ್ಯೆಗಳನ್ನು ತರುತ್ತಿತ್ತು. ಆದಾಗ್ಯೂ, ನಮಗೆ ತೊಂದರೆಗಳು ಆದಷ್ಟು ಕಡಿಮೆಯಾಗುವಂತೆ ತಾಯಿ ನೋಡಿಕೊಳ್ಳುತ್ತಿದ್ದರು. ಜೂನ್ ತಿಂಗಳ ಬಿಸಿಲಿನಲ್ಲಿ, ಅವಳು ನಮ್ಮ ಮಣ್ಣಿನ ಮನೆಯ ಛಾವಣಿಯ ಮೇಲೆ ಹತ್ತಿ ಹೆಂಚುಗಳನ್ನು ಸರಿಪಡಿಸುತ್ತಿದ್ದಳು. ಆದರೆ, ಆಕೆಯ ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ, ನಮ್ಮ ಮನೆಯು ಮಳೆಯ ಆರ್ಭಟವನ್ನು ತಡೆದುಕೊಳ್ಳಲಾರದಷ್ಟು ಹಳೆಯದಾಗಿತ್ತು.

ಮನೆಗೆಲಸದಲ್ಲಿ ಒಪ್ಪ ಓರಣ

ತಾಯಿ ಮನೆಯನ್ನು ಒಪ್ಪವಾಗಿಡಲು ಇಷ್ಟಪಡುತ್ತಿದ್ದರು ಮತ್ತು ಅದನ್ನು ಸ್ವಚ್ಛಗೊಳಿಸಲು ಮತ್ತು ಸುಂದರಗೊಳಿಸಲು ಸಾಕಷ್ಟು ಸಮಯವನ್ನು ಕಳೆಯುತ್ತಿದ್ದರು. ಹಸುವಿನ ಸಗಣಿಯಿಂದ ನೆಲವನ್ನು ಸಾರಿಸುತ್ತಿದ್ದರು. ಹಸುವಿನ ಸಗಣಿಯ ಬೆರಣಿಯನ್ನು ಉರಿಸಿದಾಗ ಹೆಚ್ಚಿನ ಹೊಗೆ ಬರುತ್ತಿತ್ತು. ತಾಯಿ ನಮ್ಮ ಕಿಟಕಿಗಳಿಲ್ಲದ ಮನೆಯಲ್ಲಿ ಅದರಲ್ಲಿಯೇ ಅಡುಗೆ ಮಾಡುತ್ತಿದ್ದರು! ಗೋಡೆಗಳು ಮಸಿಯಿಂದ ಕಪ್ಪಾಗುತ್ತಿದ್ದವು ಮತ್ತು ಅವುಗಳಿಗೆ ಹೊಸ ಸುಣ್ಣ ಹೊಡೆಯುವ ಅಗತ್ಯವಿರುತ್ತಿತ್ತು. ಇದನ್ನೂ ತಾಯಿ ಕೆಲವು ತಿಂಗಳಿಗೊಮ್ಮೆ ಸ್ವತಃ ಮಾಡುತ್ತಿದ್ದರು. ಇದು ನಮ್ಮ ಪಾಳುಬಿದ್ದ ಮನೆಗೆ ತಾಜಾತನದ ಪರಿಮಳವನ್ನು ನೀಡುತ್ತಿತ್ತು. ಮನೆಯನ್ನು ಅಲಂಕರಿಸಲು ಸಾಕಷ್ಟು ಚಿಕ್ಕ ಮಣ್ಣಿನ ಬಟ್ಟಲುಗಳನ್ನೂ ಮಾಡುತ್ತಿದ್ದರು ಮತ್ತು ಮನೆಯ ಹಳೆಯ ವಸ್ತುಗಳನ್ನು ಮರುಬಳಕೆ ಮಾಡುವಲ್ಲಿ ಪ್ರಸಿದ್ಧವಾದ ಭಾರತೀಯ ಅಭ್ಯಾಸದಲ್ಲಿ ಅಮ್ಮ ಚಾಂಪಿಯನ್ ಆಗಿದ್ದರು.

ಅಮ್ಮನ ಮತ್ತೊಂದು ವಿಶಿಷ್ಟ ಅಭ್ಯಾಸ ನನಗೆ ನೆನಪಿದೆ. ಆಕೆ ಹಳೆಯ ಕಾಗದವನ್ನು ನೀರಿನಲ್ಲಿ ಅದ್ದಿ ಹುಣಸೆ ಬೀಜಗಳೊಂದಿಗೆ ಅಂಟಿನಂತಹ ಪೇಸ್ಟ್ ಅನ್ನು ತಯಾರಿಸುತ್ತಿದ್ದರು. ಈ ಪೇಸ್ಟ್‌ನಿಂದ ಗೋಡೆಗಳ ಮೇಲೆ ಕನ್ನಡಿಯ ತುಂಡುಗಳನ್ನು ಅಂಟಿಸಿ ಸುಂದರವಾದ ಚಿತ್ರಗಳನ್ನು ಮಾಡುತ್ತಿದ್ದರು. ಬಾಗಿಲಿಗೆ ನೇತು ಹಾಕಲು ಮಾರುಕಟ್ಟೆಯಿಂದ ಸಣ್ಣ ಪುಟ್ಟ ಅಲಂಕಾರಿಕ ವಸ್ತುಗಳನ್ನು ತರುತ್ತಿದ್ದರು.

ಹಾಸಿಗೆ ಸ್ವಚ್ಛವಾಗಿರಬೇಕು, ಸುಕ್ಕು, ಧೂಳು ಇರಕೂಡದು

ಹಾಸಿಗೆ ಸ್ವಚ್ಛವಾಗಿರಬೇಕು ಮತ್ತು ಸರಿಯಾಗಿ ಹಾಸಿರಬೇಕು ಎಂದು ತಾಯಿ ತುಂಬಾ ಗಮನಿಸುತ್ತಿದ್ದರು. ಹಾಸಿಗೆಯ ಮೇಲಿನ ಧೂಳನ್ನು ಸಹ ಅವರು ಸಹಿಸುತ್ತಿರಲಿಲ್ಲ. ಸ್ವಲ್ಪವೇ ಸುಕ್ಕು ಕಂಡರೂ ಅದನ್ನು ಕೊಡವಿ ಮತ್ತೆ ಹಾಸುತ್ತಿದ್ದರು. ಈ ಅಭ್ಯಾಸದ ಬಗ್ಗೆ ನಾವೆಲ್ಲರೂ ಬಹಳ ಎಚ್ಚರದಿಂದ ಇದ್ದೆವು. ಇಂದಿಗೂ, ಈ ವಯಸ್ಸಿನಲ್ಲೂ, ತನ್ನ ಹಾಸಿಗೆಯ ಮೇಲೆ ಒಂದೇ ಒಂದು ಸುಕ್ಕುಇರಬಾರದು ಎಂದು ನಮ್ಮ ತಾಯಿ ಬಯಸುತ್ತಾರೆ.

ಅಮ್ಮನ ಶುಚಿತ್ವದ ಮೇಲಿನ ಉಪಕಥೆಗಳ ಬಗ್ಗೆ ನಾನು ರಿಮ್ಗಟ್ಟಲೆ ಬರೆಯಬಲ್ಲೆ. ಅವರು ಇನ್ನೊಂದು ಗುಣವನ್ನು ಹೊಂದಿದ್ದರು – ಸ್ವಚ್ಛತೆ ಮತ್ತು ನೈರ್ಮಲ್ಯದಲ್ಲಿ ತೊಡಗಿರುವವರಿಗೆ ತುಂಬಾ ಗೌರವ ನೀಡುತ್ತಿದ್ದರು. ನನಗೆ ನೆನಪಿದೆ, ವಡ್ನಾಗರದಲ್ಲಿರುವ ನಮ್ಮ ಮನೆಯ ಪಕ್ಕದ ಚರಂಡಿಯನ್ನು ಸ್ವಚ್ಛಗೊಳಿಸಲು ಯಾರಾದರೂ ಬಂದಾಗ, ತಾಯಿ ಅವರಿಗೆ ಚಹಾ ನೀಡದೆ ಕಳುಹಿಸುತ್ತಿರಲಿಲ್ಲ.

ಪಶು-ಪಕ್ಷಿಗಳ ಬಗ್ಗೆ ವಾತ್ಸಲ್ಯ

ನಾನು ಯಾವಾಗಲೂ ನೆನಪಿಸಿಕೊಳ್ಳುವ ತಾಯಿಯ ಮತ್ತೊಂದು ಅಭ್ಯಾಸವೆಂದರೆ ಇತರ ಜೀವಿಗಳ ಬಗ್ಗೆ ಅವರ ವಿಶೇಷ ವಾತ್ಸಲ್ಯ. ಪ್ರತಿ ಬೇಸಿಗೆಯಲ್ಲಿ, ಅವರು ಪಕ್ಷಿಗಳಿಗೆ ನೀರಿನ ಪಾತ್ರೆಗಳನ್ನು ಇಡುತ್ತಿದ್ದರು. ನಮ್ಮ ಮನೆಯ ಸುತ್ತ ಮುತ್ತಲಿನ ಬೀದಿನಾಯಿಗಳು ಎಂದಿಗೂ ಹಸಿವಿನಿಂದ ಇರದಂತೆ ನೋಡಿಕೊಳ್ಳುತ್ತಿದ್ದರು.
ನನ್ನ ತಂದೆ ಚಹಾ ಅಂಗಡಿಯಿಂದ ತರುತ್ತಿದ್ದ ಹಾಲಿನ ಕೆನೆಯಿಂದ ತಾಯಿ ರುಚಿಕರವಾದ ತುಪ್ಪವನ್ನು ಮಾಡುತ್ತಿದ್ದರು. ಈ ತುಪ್ಪ ಕೇವಲ ನಮ್ಮ ಬಳಕೆಗೆ ಮಾತ್ರವಾಗಿರಲಿಲ್ಲ. ನಮ್ಮ ನೆರೆಹೊರೆಯಲ್ಲಿರುವ ಹಸುಗಳಿಗೂ ಅದರ ಪಾಲು ಸಿಗುತ್ತಿತ್ತು. ತಾಯಿ ಹಸುಗಳಿಗೆ ಪ್ರತಿದಿನ ರೊಟ್ಟಿ ತಿನ್ನಿಸುತ್ತಿದ್ದರು. ಒಣ ರೊಟ್ಟಿಗಳ ಮೇಲೆ ಮನೆಯಲ್ಲಿ ಮಾಡಿದ ತುಪ್ಪ ಮತ್ತು ಪ್ರೀತಿಯನ್ನು ಸುರಿದು ಅವುಗಳಿಗೆ ನೀಡುತ್ತಿದ್ದರು.

ಒಂದು ಅಗುಳೂ ವ್ಯರ್ಥಮಾಡುತ್ತಿರಲಿಲ್ಲ

ಒಂದು ಅಗಳು ಆಹಾರವನ್ನೂ ವ್ಯರ್ಥ ಮಾಡಬಾರದು ಎಂದು ತಾಯಿ ಹೇಳುತ್ತಿದ್ದರು. ನಮ್ಮ ನೆರೆಹೊರೆಯಲ್ಲಿ ಮದುವೆಗಳು ನಡೆದಾಗ ಯಾವುದೇ ಆಹಾರವನ್ನು ವ್ಯರ್ಥ ಮಾಡಬೇಡಿ ಎಂದು ನಮಗೆ ನೆನಪಿಸುತ್ತಿದ್ದರು. ಮನೆಯಲ್ಲಿ – ನೀವು ತಿನ್ನಬಹುದಾದಷ್ಟನ್ನು ಮಾತ್ರ ಹಾಕಿಸಿಕೊಳ್ಳಿ- ಎಂಬ ಸ್ಪಷ್ಟವಾದ ನಿಯಮವಿತ್ತು
ಇಂದಿಗೂ ತಾಯಿ ತಟ್ಟೆಯಲ್ಲಿ ಎಷ್ಟು ತಿನ್ನಲು ಸಾಧ್ಯವೋ ಅಷ್ಟು ಮಾತ್ರ ಹಾಕಿಸಿಕೊಳ್ಳುತ್ತಾರೆ ಮತ್ತು ಒಂದು ತುತ್ತು ಕೂಡ ವ್ಯರ್ಥ ಮಾಡುವುದಿಲ್ಲ. ಸಮಯಕ್ಕೆ ಸರಿಯಾಗಿ ತಿನ್ನುತ್ತಾರೆ ಮತ್ತು ಆಹಾರವು ಸರಿಯಾಗಿ ಜೀರ್ಣವಾಗಲು ಅಗಿದು ತಿನ್ನುತ್ತಾರೆ.

ಎಲ್ಲರೊಡನೆ ಸಂತಸದಿಂದ ಬಾಳಿದವರು

ತಾಯಿ ಇತರರ ಸಂತೋಷದಲ್ಲಿ ತನ್ನ ಸಂತೋಷವನ್ನು ಕಂಡುಕೊಳ್ಳುತ್ತಾರೆ. ನಮ್ಮ ಮನೆ ಚಿಕ್ಕದಾಗಿರಬಹುದು, ಆದರೆ ಅವರು ತುಂಬಾ ವಿಶಾಲ ಹೃದಯದವರು. ನನ್ನ ತಂದೆಯ ಆಪ್ತ ಸ್ನೇಹಿತರೊಬ್ಬರು ಹತ್ತಿರದ ಹಳ್ಳಿಯಲ್ಲಿದ್ದರು. ಅವರ ಅಕಾಲಿಕ ಮರಣದ ನಂತರ, ನನ್ನ ತಂದೆ ತನ್ನ ಸ್ನೇಹಿತನ ಮಗ ಅಬ್ಬಾಸ್ ನನ್ನು ನಮ್ಮ ಮನೆಗೆ ಕರೆತಂದರು. ಅವನು ನಮ್ಮಲ್ಲಿಯೇ ಇದ್ದು ಓದು ಮುಗಿಸಿದ. ತಾಯಿಯು ನಮ್ಮೆಲ್ಲರಂತೆಯೇ ಅಬ್ಬಾಸ್ ಬಗ್ಗೆಯೂ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದರು. ಪ್ರತಿ ವರ್ಷ ಈದ್ನಂದು ಅವನ ನೆಚ್ಚಿನ ಖಾದ್ಯಗಳನ್ನು ತಯಾರಿಸುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ನೆರೆಹೊರೆಯ ಮಕ್ಕಳು ನಮ್ಮ ಮನೆಗೆ ಬಂದು ಅಮ್ಮನ ವಿಶೇಷ ಅಡುಗೆಯನ್ನು ಸವಿಯುವುದು ಮಾಮೂಲಿಯಾಗಿತ್ತು.

ತಪ್ಪದೆ ಮತ ಚಲಾಯಿಸುತ್ತಾರೆ

ತಾಯಿಯು ಯಾವಾಗಲೂ ನಾಗರಿಕಳಾಗಿ ತನ್ನ ಕರ್ತವ್ಯಗಳ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ. ಚುನಾವಣೆಗಳು ಪ್ರಾರಂಭವಾದಾಗಿನಿಂದ, ಅವರು ಪಂಚಾಯತಿಯಿಂದ ಸಂಸತ್ತಿನವರೆಗೆ ಪ್ರತಿ ಚುನಾವಣೆಯಲ್ಲೂ ಮತ ಚಲಾಯಿಸಿದ್ದಾರೆ. ಕೆಲ ದಿನಗಳ ಹಿಂದೆ ಗಾಂಧಿನಗರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಮತ ಚಲಾಯಿಸಿದರು.

ಇಂದಿಗೂ ತಾಯಿ ಹೆಸರಿನಲ್ಲಿ ಆಸ್ತಿ ಇಲ್ಲ

ಜೀವನದಲ್ಲಿ ಅಮ್ಮ ಯಾವುದರ ಬಗ್ಗೆಯೂ ದೂರುವುದನ್ನು ನಾನು ಕೇಳಿಲ್ಲ. ಅವರು ಯಾರ ಬಗ್ಗೆಯೂ ದೂರುವುದಿಲ್ಲ ಅಥವಾ ಯಾರಿಂದಲೂ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದಿಲ್ಲ.

ಇಂದಿಗೂ ತಾಯಿಯ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲ. ಆಕೆ ಚಿನ್ನದ ಆಭರಣಗಳನ್ನು ಧರಿಸಿರುವುದನ್ನು ನಾನು ನೋಡಿಲ್ಲ ಮತ್ತು ಅವರಿಗೆ ಅದರಲ್ಲಿ ಆಸಕ್ತಿಯೂ ಇಲ್ಲ. ಮೊದಲಿನಂತೆಯೇ, ಅವರು ತನ್ನ ಸಣ್ಣ ಕೋಣೆಯಲ್ಲಿ ಅತ್ಯಂತ ಸರಳವಾದ ಜೀವನವನ್ನು ಮುಂದುವರಿಸಿದ್ದಾರೆ.

ತಾಯಿಗೆ ದೇವರಲ್ಲಿ ಅಪಾರವಾದ ನಂಬಿಕೆ ಇದೆ, ಆದರೆ ಅದೇ ಸಮಯದಲ್ಲಿ, ಅವರು ಮೂಢನಂಬಿಕೆಗಳಿಂದ ದೂರವಿದ್ದಾರೆ ಮತ್ತು ಅದೇ ಗುಣಗಳನ್ನು ನಮ್ಮಲ್ಲಿ ತುಂಬಿದ್ದಾರೆ. ಅವರು ಸಾಂಪ್ರದಾಯಿಕವಾಗಿ ಕಬೀರಪಂಥಿಯಾಗಿದ್ದಾರೆ ಮತ್ತು ಅವರ ದೈನಂದಿನ ಪ್ರಾರ್ಥನೆಗಳಲ್ಲಿ ಆ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಅವರು ತಮ್ಮ ಮಣಿಮಾಲೆಯೊಂದಿಗೆ ಜಪ ಮಾಡುತ್ತಾ ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ವಯಸ್ಸಾಗಿದ್ದರೂ, ತಾಯಿಗೆ ಉತ್ತಮ ಜ್ಞಾಪಕ ಶಕ್ತಿ ಇದೆ. ಅವರು ದಶಕಗಳ ಹಿಂದಿನ ಘಟನೆಗಳನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ. ಕೆಲವು ಸಂಬಂಧಿಕರು ಅವರನ್ನು ಭೇಟಿ ಮಾಡಿದಾಗ, ಅವರು ತಕ್ಷಣವೇ ಅವರ ಅಜ್ಜಿಯರ ಹೆಸರನ್ನು ನೆನಪಿಸಿಕೊಳ್ಳುತ್ತಾರೆ.

ಮೋದಿ ಮನೆ ಬಿಟ್ಟಾಗ ಮೊಸರು, ಬೆಲ್ಲ ನೀಡಿದ್ದ ಅಮ್ಮ

ನಾನು ಮನೆ ಬಿಟ್ಟು ಹೊರಡಲು ನಿರ್ಧರಿಸಿದಾಗ, ನಾನು ಅವರಿಗೆ ಹೇಳುವ ಮೊದಲೇ ನನ್ನ ನಿರ್ಧಾರವನ್ನು ತಾಯಿ ಗ್ರಹಿಸಿದ್ದರು. ನಾನು ಹೊರಗೆ ಹೋಗಿ ಜಗತ್ತನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇನೆ ಎಂದು ನಾನು ಆಗಾಗ್ಗೆ ನನ್ನ ಹೆತ್ತವರಿಗೆ ಹೇಳುತ್ತಿದ್ದೆ. ನಾನು ಅವರಿಗೆ ಸ್ವಾಮಿ ವಿವೇಕಾನಂದರ ಬಗ್ಗೆ ಹೇಳುತ್ತಿದ್ದೆ ಮತ್ತು ನಾನು ರಾಮಕೃಷ್ಣ ಮಿಷನ್ ಮಠಕ್ಕೆ ಭೇಟಿ ನೀಡಬೇಕು ಎಂದು ಹೇಳುತ್ತಿದ್ದೆ. ಇದು ಹಲವು ದಿನಗಳ ಕಾಲ ನಡೆದಿತ್ತು.

ಅಂತಿಮವಾಗಿ, ನಾನು ಮನೆ ಬಿಟ್ಟು ಹೊರಡುವ ನನ್ನ ಆಸೆಯನ್ನು ಬಿಚ್ಚಿಟ್ಟೆ ಮತ್ತು ಅವರ ಆಶೀರ್ವಾದವನ್ನು ಕೇಳಿದೆ. ನನ್ನ ತಂದೆ ತುಂಬಾ ನಿರಾಶೆಗೊಂಡರು ಮತ್ತು ಕಿರಿಕಿರಿಯಿಂದ “ನಿನ್ನಿಷ್ಟ” ಎಂದರು. ಅವರ ಆಶೀರ್ವಾದವಿಲ್ಲದೆ ನಾನು ಮನೆ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದೆ. ಆದರೆ, ಅಮ್ಮ ನನ್ನ ಆಸೆಗಳನ್ನು ಅರ್ಥಮಾಡಿಕೊಂಡು, “ನಿನ್ನ ಮನಸ್ಸು ಹೇಳಿದಂತೆ ಮಾಡು”ಎಂದು ಆಶೀರ್ವದಿಸಿದರು, ನನ್ನ ತಂದೆಯನ್ನು ಸಮಾಧಾನಪಡಿಸಲು, ಅವರು ನನ್ನ ಜಾತಕವನ್ನು ಜ್ಯೋತಿಷಿಗೆ ತೋರಿಸಲು ಕೇಳಿದರು. ನನ್ನ ತಂದೆ ಜ್ಯೋತಿಷ್ಯ ತಿಳಿದ ಸಂಬಂಧಿಕರ ಬಳಿ ಹೋದರು. ನನ್ನ ಜಾತಕವನ್ನು ಅಧ್ಯಯನ ಮಾಡಿದ ನಂತರ, “ಅವನ ಹಾದಿ ವಿಭಿನ್ನವಾಗಿದೆ. ದೇವರು ಅವನಿಗಾಗಿ ಆರಿಸಿರುವ ಮಾರ್ಗದಲ್ಲಿ ಮಾತ್ರ ಅವನು ಹೋಗುತ್ತಾನೆ.” ಎಂದು ಅವರು ಹೇಳಿದರು.

ಕೆಲವು ಗಂಟೆಗಳ ನಂತರ, ನಾನು ಮನೆಯಿಂದ ಹೊರಟೆ. ಅಷ್ಟೊತ್ತಿಗಾಗಲೇ ನನ್ನ ತಂದೆ ಕೂಡ ನನ್ನ ನಿರ್ಧಾರವನ್ನು ಒಪ್ಪಿ ಆಶೀರ್ವಾದ ಮಾಡಿದ್ದರು. ಹೊರಡುವ ಮೊದಲು, ಅಮ್ಮ ನನಗೆ ಮೊಸರು ಮತ್ತು ಬೆಲ್ಲವನ್ನು ಉಣಿಸಿದರು, ಒಂದು ಮಂಗಳಕರ ಹೊಸ ಆರಂಭಕ್ಕಾಗಿ. ಇನ್ನು ಮುಂದೆ ನನ್ನ ಜೀವನವು ತುಂಬಾ ವಿಭಿನ್ನವಾಗಿರುತ್ತದೆ ಎಂದು ಅವರು ತಿಳಿದಿದ್ದರು. ತಾಯಂದಿರು ತಮ್ಮ ಭಾವನೆಗಳನ್ನು ನಿಯಂತ್ರಿಸುವಲ್ಲಿ ಅತ್ಯಂತ ಪ್ರವೀಣರಾಗಿರುತ್ತಾರೆ. ಆದರೆ ಅವರ ಮಗು ಮನೆ ಬಿಟ್ಟು ಹೊರಟಾಗ ಅವರಿಗೆ ಕಷ್ಟವಾಗುತ್ತದೆ. ತಾಯಿ ಕಣ್ಣೀರು ಹಾಕಿದರು. ಆದರೆ ನನ್ನ ಭವಿಷ್ಯಕ್ಕಾಗಿ ಅವರ ಅಪಾರ ಆಶೀರ್ವಾದವಿತ್ತು.

ಸಿಎಂ ಆದಾಗ ಲಂಚ ತೆಗೆದುಕೊಳ್ಳಬಾರದು ಎಂದಿದ್ದ ತಾಯಿ

ಗುಜರಾತಿನ ಮುಖ್ಯಮಂತ್ರಿ ನಾನೇ ಎಂದು ನಿರ್ಧರಿಸಿದಾಗ ನಾನು ರಾಜ್ಯದಲ್ಲಿ ಇರಲಿಲ್ಲ ಎಂದು ನನಗೆ ನೆನಪಿದೆ. ನಾನು ಗುಜರಾತಿಗೆ ಹೋದ ಕೂಡಲೇ, ನಾನು ನೇರವಾಗಿ ತಾಯಿಯನ್ನು ಭೇಟಿ ಮಾಡಲು ಹೋದೆ. ಅವರು ಅತ್ಯಂತ ಭಾವಪರವಶಳಾಗಿದ್ದರು ಮತ್ತು ನಾನು ಮತ್ತೆ ಅವಳೊಂದಿಗೆ ಇರುತ್ತೇನೆಯೇ ಎಂದು ವಿಚಾರಿಸಿದರು. ಆದರೆ ಅವರಿಗೆ ನನ್ನ ಉತ್ತರ ಗೊತ್ತಿತ್ತು! “ಸರ್ಕಾರದಲ್ಲಿ ನಿಮ್ಮ ಕೆಲಸ ಏನೆಂದು ನನಗೆ ಅರ್ಥವಾಗುವುದಿಲ್ಲ, ಆದರೆ ನೀವು ಎಂದಿಗೂ ಲಂಚ ತೆಗೆದುಕೊಳ್ಳಬಾರದು ಎಂಬುದು ನನ್ನ ಬಯಕೆ.” ಎಂದು ತಾಯಿ ಹೇಳಿದ್ದರು.
ದೆಹಲಿಗೆ ತೆರಳಿದ ನಂತರ, ಅವರೊಂದಿಗಿನ ನನ್ನ ಭೇಟಿಗಳು ಮೊದಲಿಗಿಂತ ಕಡಿಮೆಯಾಗಿವೆ. ಕೆಲವೊಮ್ಮೆ ನಾನು ಗಾಂಧಿನಗರಕ್ಕೆ ಭೇಟಿ ನೀಡಿದಾಗ, ನಾನು ಸ್ವಲ್ಪ ಕಾಲ ತಾಯಿಯನ್ನು ಭೇಟಿ ಮಾಡುತ್ತೇನೆ. ನಾನು ಮೊದಲಿನಂತೆ ಅವರನ್ನು ಭೇಟಿಯಾಗಲು ಆಗುವುದಿಲ್ಲ. ಆದಾಗ್ಯೂ, ನನ್ನ ಅನುಪಸ್ಥಿತಿಯ ಬಗ್ಗೆ ನಾನು ತಾಯಿಯಿಂದ ಯಾವುದೇ ಅಸಮಾಧಾನವನ್ನು ಕೇಳಿಲ್ಲ. ಅವರ ಪ್ರೀತಿ ಮತ್ತು ವಾತ್ಸಲ್ಯ ಹಾಗೆಯೇ ಇದೆ; ಅವರ ಆಶೀರ್ವಾದ ಹಾಗೆಯೇ ಇರುತ್ತದೆ.

ಹೀರಾಬೆನ್‌ ಅವರಿಗೂ ಮೋದಿ ಎಂದರೆ ಬಲು ಮಮತೆ. “ದೇಶಕ್ಕೆ ಏನು ಬೇಕೋ, ಅದನ್ನು ನನ್ನ ಮಗ ಮಾಡುತ್ತಾನೆʼʼ ಎಂದಿದ್ದರು ಆ ತಾಯಿ.

Exit mobile version