ನವದೆಹಲಿ: ಶೀಘ್ರದಲ್ಲಿಯೇ ದೇಶದಲ್ಲಿ ಇನ್ನೂ 50 ಅಮೃತ್ ಭಾರತ್ ರೈಲು (Amrit Bharat Trains) ಸಂಚರಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಭಾರತೀಯ ರೈಲ್ವೆ ಆರಂಭಿಸಿದ ದರ್ಭಂಗಾ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ಮಾಲ್ಡಾ ಟೌನ್-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್ ಎಕ್ಸ್‌ಪ್ರೆಸ್‌ಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಇದೇ ಮಾದರಿಯ ಹೆಚ್ಚುವರಿ ರೈಲನ್ನು ಘೋಷಿಸಲಾಗಿದೆ.
ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ತಮ್ಮ ಸೂಪರ್ ಫಾಸ್ಟ್ ಸೇವೆ ಮತ್ತು ಅತ್ಯುತ್ತಮ ಸೌಲಭ್ಯಗಳಿಂದ ಪ್ರಯಾಣಿಕರ ಗಮನ ಸೆಳೆದಿದೆ. ಹೀಗಾಗಿ ಪ್ರಾರಂಭದಿಂದಲೂ ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. 2023ರ ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಈ ರೈಲು ಸೇವೆಗೆ ಚಾಲನೆ ನೀಡಿದ್ದರು.
अमृत भारत ट्रेन की बड़ी सफलता के बाद, 50 अमृत भारत ट्रेनों को मंजूरी दी गई है। pic.twitter.com/nfEqHL3bC4
— Ashwini Vaishnaw (@AshwiniVaishnaw) February 19, 2024
ಏನಿದು ಅಮೃತ್ ಭಾರತ್ ಎಕ್ಸ್‌ಪ್ರೆಸ್?
ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಹವಾನಿಯಂತ್ರಿತವಲ್ಲದ ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ ಪುಷ್-ಪುಲ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಈ ತಂತ್ರಜ್ಞಾನದಿಂದಾಗಿ ರೈಲಿಗೆ ತ್ವರಿತವಾಗಿ ವೇಗವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸುಧಾರಿತ ಕಪ್ಲರ್ ತಂತ್ರಜ್ಞಾನಕ್ಕೆ ಪೂರಕವಾಗಿ ರೈಲು ಮುಂಭಾಗ ಮತ್ತು ಹಿಂಭಾಗದಲ್ಲಿ ಎಂಜಿನ್‌ಗಳನ್ನು ಹೊಂದಿದೆ. ಮುಂಭಾಗದ ಎಂಜಿನ್ ರೈಲನ್ನು ಎಳೆದರೆ ಹಿಂಭಾಗದ ಎಂಜಿನ್ ಅದನ್ನು ಮುಂದಕ್ಕೆ ತಳ್ಳಲು ಸಹಾಯ ಮಾಡುತ್ತದೆ.
ಈ ರೈಲುಗಳು ʼಕವಚ್ʼ ಎಂಬ ಸ್ಥಳೀಯ ತಂತ್ರಜ್ಞಾನವನ್ನು ಹೊಂದಿದ್ದು, ಸಿಗ್ನಲ್ ಪಾಸಿಂಗ್ ಅಟ್ ಡೇಂಜರ್ (Signal Passing At Danger) ಸಂದರ್ಭಗಳನ್ನು ಎದುರಿಸಲು ಮತ್ತು ಸವಾಲಿನ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಯಾಚರಣೆಗಳನ್ನು ನಿರ್ವಹಿಸಲು ಸುಲಭವಾಗುವಂತೆ ಅಭಿವೃದ್ಧಿ ಪಡಿಸಲಾಗಿದೆ. ರೈಲು ಚಲಿಸಲು ಪ್ರಾರಂಭವಾದಾಗ ಅಥವಾ ನಿಂತ ತಕ್ಷಣ ಜಗ್ಗಿದ ಅನುಭವವಾಗುವುದಿಲ್ಲ. ಇಂತಹ ಆಘಾತಗಳನ್ನು ತಪ್ಪಿಸಲು, ರೈಲಿನಲ್ಲಿ ಅರೆ-ಪರ್ಮನೆಂಟ್ ಕಪ್ಲರ್‌ಗಳನ್ನು ಅಳವಡಿಸಲಾಗಿದೆ.
ಜತೆಗೆ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಕಷ್ಟು ಐಷಾರಾಮಿ ಸೌಲಭ್ಯಗಳಿವೆ. ಎಲ್‌ಇಡಿ ಲೈಟ್, ಮೊಬೈಲ್ ಚಾರ್ಜರ್ ಪಾಯಿಂಟ್, ಅತ್ಯುತ್ತಮ ಸೀಟ್‌ಗಳಿವೆ. ಸಿಸಿಟಿವಿ ಕ್ಯಾಮೆರಾ, ಅತ್ಯಾಧುನಿಕ ಶೌಚಾಲಯ, ಬೋಗಿಗಳಲ್ಲಿ ಸೆನ್ಸಾರ್ ವಾಟರ್ ಟ್ಯಾಪ್‌ಗಳನ್ನು ಅಳವಡಿಸಲಾಗಿದೆ. ಮಾತ್ರವಲ್ಲ ಮೆಟ್ರೋದಂತಹ ಘೋಷಣೆ ವ್ಯವಸ್ಥೆಗಳೂ ಇವೆ. ಅತ್ಯಾಧುನಿಕ ಶೌಚಾಲಯಗಳ ವಿನ್ಯಾಸದಲ್ಲೂ ಹಲವು ಬದಲಾವಣೆಗಳಾಗಿವೆ. ಕನಿಷ್ಠ ನೀರಿನ ಬಳಕೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಂಗವಿಕಲರ ಶೌಚಾಲಯದ ಜಾಗವನ್ನು ವಿಶಾಲಗೊಳಿಸಲಾಗಿದೆ.
ಇದನ್ನೂ ಓದಿ: PM Narendra Modi: ಪ್ರಧಾನಿಯಿಂದ ಭವ್ಯ ಅಯೋಧ್ಯಾ ಧಾಮ್ ರೈಲು ನಿಲ್ದಾಣ ಉದ್ಘಾಟನೆ, ಅಮೃತ್ ಭಾರತ್ ರೈಲಿಗೆ ಚಾಲನೆ
ವಂದೇ ಭಾರತ್ ರೈಲಿಗೆ ಪರ್ಯಾಯ
ದೇಶದಲ್ಲಿ ಈಗಾಗಲೇ ವಂದೇ ಭಾರತ್ ರೈಲು ಕ್ರಾಂತಿಯನ್ನೇ ಎಬ್ಬಿಸಿದೆ. ಈ ಐಷಾರಾಮಿ ರೈಲು ಪ್ರಯಾಣದ ಅನುಭವ ಪ್ರಯಾಣಿಕರನ್ನ ಆಕರ್ಷಿಸುತ್ತಿದೆ. ಆದರೆ ಮಾಮೂಲಿ ರೈಲಿಗೆ ಹೋಲಿಸಿದರೆ ಇದರ ಟಿಕೆಟ್ ದರ ದುಬಾರಿ. ಹೀಗಾಗಿ ಇದೇ ರೀತಿಯ ಪ್ರಯಾಣದ ಅನುಭವವನ್ನು ಬಡವರಿಗೆ ಒದಗಿಸಲು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪ್ರಾಂಭಿಸಲಾಗಿದೆ. ಇದು ಸಂಪರ್ಕ ಕ್ರಾಂತಿಯನ್ನೇ ಸೃಷ್ಟಿಸುವ ಸಾಧ್ಯತೆ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ