ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ವಾತಂತ್ರ್ಯ ದಿನಾಚಾರಣೆಯ ಅಮೃತ ಮಹೋತ್ಸವದ ಸಂಭ್ರಮ ರಾಷ್ಟ್ರದೆಲ್ಲೆಡೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ರಾಷ್ಟ್ರಪ್ರೇಮ ಬಿಂಬಿಸುವ ನಾನಾ ಆಕ್ಸೆಸರೀಸ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ಇವುಗಳ ಮಧ್ಯೆ ಪರಿಸರ ಸ್ನೇಹಿ ಪೇಪರ್ ಬ್ಯಾಡ್ಜ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಈಗಾಗಲೇ ಸಾಕಷ್ಟು ಐಟಿ ಹಾಗೂ ಬಿಪಿಓ ಕಂಪನಿಗಳು ಇವುಗಳನ್ನು ಖರೀದಿಸಿ ಉದ್ಯೋಗಿಗಳಿಗೆ ಹಂಚಿವೆ. ಇನ್ನು ಸಾಕಷ್ಟು ಸಮಾಜಮುಖಿ ಸಂಘ-ಸಂಸ್ಥೆಗಳು ಪೇಪರ್ ಸೀಡ್ ಬ್ಯಾಡ್ಜ್ ತಯಾರಿಸುವುದರಲ್ಲಿ ಮತ್ತು ಮಾರಾಟ ಮಾಡುವುದರಲ್ಲಿ ತೊಡಗಿಸಿಕೊಂಡಿವೆ.
ಪೇಪರ್ ಸೀಡ್ ಬ್ಯಾಡ್ಜ್ ಬಳಕೆ
ನಾನಾ ಸಸ್ಯದ ಬೀಜಗಳನ್ನು ಸೇರಿಸಿ, ಜೈವಿಕ ವಸ್ತುಗಳಿಂದ ತಯಾರಿಸಲಾಗುವ ಹ್ಯಾಂಡ್‌ಮೇಡ್ ತಿರಂಗಾ ಬ್ಯಾಡ್ಜ್‌ಗೆ ಪೇಪರ್ ಸೀಡ್ ಬ್ಯಾಡ್ಜ್ ಎಂದು ಕರೆಯಲಾಗುತ್ತದೆ. ಮೆಟಲ್ ಹಾಗೂ ಪ್ಲಾಸ್ಟಿಕ್ ಬ್ಯಾಡ್ಜ್ ಬಳಸುವ ಬದಲು ಈ ಹ್ಯಾಂಡ್‌ಮೇಡ್ ಬ್ಯಾಡ್ಜ್‌ಗಳನ್ನು ಬಳಸಬಹುದು. ಈ ಕಾಗದದ ಬ್ಯಾಡ್ಜ್ ಅನ್ನು ಬಳಸಿದ ನಂತರ ಎಸೆಯಕೂಡದು. ಮರು ಬಳಕೆ ಮಾಡಬಹುದು. ಬ್ಯಾಡ್ಜ್ ಬಳಸಿದ ನಂತರ ಎರಡರಿಂದ ಮೂರು ದಿನಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಕುಂಡಕ್ಕೆ ಹಾಕಬಹುದು. ಇಲ್ಲವೇ ಮಣ್ಣಿನಲ್ಲಿ ಹಾಕಬೇಕು. ಪ್ರತಿದಿನ ನೀರು ಹಾಕಿದಲ್ಲಿ, ಕೆಲವು ದಿನಗಳಲ್ಲಿ ಇದರೊಳಗಿನ ಬೀಜವು ಮೊಳಕೆಯೊಡೆದು ಸಸಿಯಾಗುತ್ತದೆ. ತ್ಯಾಜ್ಯವಾಗುವುದಿಲ್ಲ. ಬದಲಿಗೆ ಪರಿಸರಕ್ಕೆ ಚಿಕ್ಕ ಕೊಡುಗೆ ನೀಡಿದಂತಾಗುತ್ತದೆ.
ಪರಿಸರ ಸ್ನೇಹಿಯಾಗಿ
ಪರಿಸರ ಸ್ನೇಹಿಯಾಗಿರುವ ಈ ತಿರಂಗಾ ಪೇಪರ್ ಬ್ಯಾಡ್ಜ್‌ಗಳು ಜನರಲ್ಲಿ ಜಾಗೃತಿ ಮೂಡಿಸುತ್ತವೆ. ಇದರಿಂದ ನಾವು ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ನೀಡಿದಂತಾಗುತ್ತದೆ. ಅಷ್ಟು ಮಾತ್ರವಲ್ಲ, ಈ ಬ್ಯಾಡ್ಜ್‌ಗಳಿಗೆ ಬಳಸಿರುವ ಶಾಯಿ ಕೂಡ ಸಾವಯವ ಇಂಕ್ ಆಗಿದ್ದು ಇದರಿಂದ ಪರಿಸರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಈಗಾಗಲೇ ಸಾಕಷ್ಟು ಕಾರ್ಪೋರೇಟ್ ಸಂಸ್ಥೆಗಳು ಈ ಬಾರಿ ಎಕೋ ಫ್ರೆಂಡ್ಲಿ ಪೇಪರ್ ಸೀಡ್ ಬ್ಯಾಡ್ಜ್‌ಗಳನ್ನು ಖರೀದಿಸಿವೆ. ಹಲವಾರು ಸಂಘ-ಸಂಸ್ಥೆಗಳು ಇವುಗಳನ್ನೇ ಬಳಸಲು ನಿರ್ಧರಿಸಿವೆ ಎನ್ನುವ ಸೀಡ್ ಪೇಪರ್ ಸಂಸ್ಥೆಯ ಸ್ಥಾಪಕ ರೋಷನ್ ರೇ ಅವರು ಈಗಾಗಲೇ ಸೇನೆಯ ಕೆಲವು ವಿಭಾಗಗಳಿಗೆ ಉಚಿತವಾಗಿ ವಿತರಿಸಿದ್ದಾರೆ. ಪರಿಸರ ಸಂರಕ್ಷಣೆ ಸಂದೇಶವನ್ನು ತಲುಪಿಸಿದ್ದಾರೆ.
ಆನ್‌ಲೈನ್‌ನಲ್ಲಿ ಲಭ್ಯ
ನಾನಾ ಬ್ರಾಂಡ್‌ಗಳು ಆನ್ಲೈನ್‌ನಲ್ಲಿ ಎಕೋ ಫ್ರೆಂಡ್ಲಿ ಬ್ಯಾಡ್ಜ್‌ಗಳನ್ನು ಮಾರಾಟ ಮಾಡುತ್ತಿವೆ. ಪ್ರತಿ ಬ್ಯಾಡ್ಜ್‌ನ ಬೆಲೆ ಕನಿಷ್ಠ ೭ ರೂ. ಗಳಿಂದ ೧೫ ರೂ. ಗಳವರೆಗೂ ಇದೆ. ಪರಿಸರ ಪ್ರೇಮಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Amrit Mahotsav | ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕೂ ಆ್ಯಪ್ ವಿಶೇಷ ಅಭಿಯಾನ