ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ ಹಳೇ ಕಾಲದ ಐಕಾನ್. ಈಗ ಮರಾಠಿಗರಿಗೆ ಅಂಬೇಡ್ಕರ್, ನಿತಿನ್ ಗಡ್ಕರಿಯಂಥವರು ಮಾದರಿಯಾಗಬೇಕೆಂಬ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಹೇಳಿಕೆಗೆ ಮಹಾರಾಷ್ಟ್ರದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಸಿಎಂ ಏಕನಾಥ ಶಿಂಧೆ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆಯೇ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ (Amrita Fadnavis) ಅವರು ರಾಜ್ಯಪಾಲರ ಬೆಂಬಲಕ್ಕೆ ನಿಂತಿದ್ದಾರೆ.
ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ವ್ಯಕ್ತಿಗತವಾಗಿ ಬಲ್ಲೆ. ಮಹಾರಾಷ್ಟ್ರಕ್ಕೆ ಬಂದ ಮೇಲೆ ಅವರು ಮರಾಠಿ ಕಲಿತ್ತಿದ್ದಾರೆ. ಅವರು ನಿಜವಾಗಿಯೂ ಮರಾಠಿಗರನ್ನು ಇಷ್ಟಪಡುತ್ತಾರೆ. ಇದು ನನ್ನ ಅನುಭವಕ್ಕೆ ಬಂದಿದೆ. ಆದರೆ, ಬಹಳಷ್ಟು ಸಂದರ್ಭದಲ್ಲಿ ಅವರು ಹೇಳುವುದೇ ಒಂದು, ಅದು ಅರ್ಥವಾಗುವುದು ಇನ್ನೊಂದು. ಅವರ ಹೇಳಿಕೆಗಳನ್ನು ತಿರುಚಲಾಗುತ್ತದೆ. ಆದರೆ, ಅವರು ಹೃದಯದಲ್ಲಿ ಪಕ್ಕಾ ಮರಾಠಿ ಮನುಷ್ಯರಾಗಿದ್ದಾರೆ ಎಂದು ಅಮೃತಾ ಫಡ್ನವಿಸ್ ಹೇಳಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಅವರೂ ಟೀಕಿಸಿದ್ದು, ಅಮೆಜಾನ್ ಮೂಲಕ ಮಹಾರಾಷ್ಟ್ರಗೆ ಪಾರ್ಸೆಲ್ ಮಾಡಲಾಗಿದೆ ಎಂದು ರಾಜ್ಯಪಾಲರ ಕುರಿತು ವ್ಯಂಗ್ಯವಾಡಿದ್ದರು. ಅಲ್ಲದೇ, ಕೇಂದ್ರ ಸರ್ಕಾರವು ಕೂಡಲೇ ಅವರನ್ನು ವಾಪಸ್ ಕರೆಯಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಒಂದೊಮ್ಮೆ ಕೋಶ್ಯಾರಿ ಅವರನ್ನು ಹಿಂತೆಗೆದುಕೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಶಿವಾಜಿ ಮಹಾರಾಜ ಕುರಿತು ರಾಜ್ಯಪಾಲರು ನೀಡುತ್ತಿರುವ ಹೇಳಿಕೆಯು ಪದೇ ಪದೇ ವಿವಾದಕ್ಕೆ ಒಳಗಾಗುತ್ತಿವೆ. ಈ ಹಿಂದೆಯೂ ಅವರು ಶಿವಾಜಿ ಕುರಿತು ಆಡಿದ ಮಾತುಗಳಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈಗ ಮತ್ತೆ ಐಕಾನ್ ಕುರಿತು ಹೇಳಿರುವ ಮಾತುಗಳು ಮಹಾರಾಷ್ಟ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿವೆ. ಇದರ ಮಧ್ಯೆ, ಈಗ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಅವರು ರಾಜ್ಯಪಾಲರ ಬೆನ್ನಿಗೆ ನಿಂತಿದ್ದು, ಪ್ರತಿಪಕ್ಷಗಳಿಗೆ ಅಸ್ತ್ರ ಒದಗಿಸಿದಂತಾಗಿದೆ.