ಚಂಡೀಗಢ: ಖಲಿಸ್ತಾನಿಗಳ ನಾಯಕ, ಪಂಜಾಬ್‌ನಲ್ಲಿ ಗಲಭೆಗೆ ಕಾರಣವಾಗಿರುವ ಅಮೃತ್‌ಪಾಲ್ ಸಿಂಗ್ (Amritpal Singh) ಮಾರ್ಚ್ 18ರಿಂದ ನಾಪತ್ತೆಯಾಗಿದ್ದಾನೆ. ಈತನ ಬಂಧನಕ್ಕೆ ರಾಜ್ಯದ ಪೊಲೀಸರು ಸತತ ಕಾರ್ಯಾಚರಣೆ ನಡೆಸಿದರೂ ಇದುವರೆಗೆ ಬಂಧನ ಸಾಧ್ಯವಾಗಿಲ್ಲ. ಇದರ ಬೆನ್ನಲ್ಲೇ, ಅಮೃತ್‌ಪಾಲ್ ಸಿಂಗ್ ವಿಡಿಯೊ ಬಿಡುಗಡೆ ಮಾಡಿದ್ದು, “ನನ್ನ ಬಂಧನಕ್ಕೆ ನಡೆಸುತ್ತಿರುವ ಕಾರ್ಯಾಚರಣೆಯು ಇಡೀ ಸಿಖ್ ಸಮುದಾಯದ ಮೇಲೆ ನಡೆಸುತ್ತಿರುವ ದಾಳಿ” ಎಂದಿದ್ದಾನೆ.
“ನಾನು ಮಾರ್ಚ್ 18ರ ಬಳಿಕ ಇದೇ ಮೊದಲ ಬಾರಿಗೆ ಮಾತನಾಡುತ್ತಿದ್ದೇನೆ. ಪಂಜಾಬ್ ಸರ್ಕಾರವು ನನ್ನನ್ನು ಬಂಧಿಸಬೇಕು ಎಂತಿದ್ದರೆ ನಾನೇ ಶರಣಾಗುತ್ತಿದ್ದೆ. ಆದರೆ, ಸರ್ಕಾರವು ನನ್ನ ಬಂಧನಕ್ಕೆ ಲಕ್ಷಾಂತರ ಪೊಲೀಸರನ್ನು ನಿಯೋಜಿಸಿತು. ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಯಿತು. ನನಗೆ ಯಾವುದೇ ಮಾಹಿತಿ ಲಭ್ಯವಾಗದಂತೆ ನೋಡಿಕೊಳ್ಳಲಾಯಿತು. ಆದರೂ, ನಾನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ” ಎಂದು ಹೇಳಿದ್ದಾನೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಲ್ಲಿದೆ ವಿಡಿಯೊ
ಸಿಖ್ಖರ ಮೇಲೆ ನಡೆಸಿದ ದಾಳಿ
“ನನ್ನನ್ನು ಬಂಧಿಸುವುದಷ್ಟೇ ಪೊಲೀಸರ ಗುರಿಯಾಗಿರಲಿಲ್ಲ. ದಬ್ಬಾಳಿಕೆಯ ಎಲ್ಲ ಇತಿಮಿತಿಗಳನ್ನು ಪಂಜಾಬ್ ಸರ್ಕಾರ ಮೀರಿತು. ಸಿಖ್ ಸಮುದಾಯದ ಯುವಕರನ್ನು ಜೈಲಿಗೆ ಕಳುಹಿಸಿದ್ದಾರೆ. ಅವರು ಮಹಿಳೆಯರು ಹಾಗೂ ಮಕ್ಕಳನ್ನೂ ಬಿಟ್ಟಿಲ್ಲ. ಹಾಗಾಗಿ, ಸಮುದಾಯದವರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಪಂಜಾಬ್ ಸರ್ಕಾರಕ್ಕೆ ನನ್ನ ಬಂಧನ ಮಾತ್ರ ಗುರಿಯಾಗಿಲ್ಲ. ಅವರು ಇಡೀ ಸಿಖ್ ಸಮುದಾಯದ ಮೇಲೆ ದಬ್ಬಾಳಿ ಮಾಡುತ್ತಿದ್ದಾರೆ ಎಂಬುದನ್ನು ಅರಿಯಬೇಕು. ಎಲ್ಲ ಸಿಖ್ಖರು ಇಂತಹ ಷಡ್ಯಂತ್ರಗಳ ವಿರುದ್ಧ ಧ್ವನಿ ಎತ್ತಬೇಕು” ಎಂದಿದ್ದಾನೆ.
ಪಂಜಾಬ್‌ಗೆ ಮೋದಿ ಮೋಸ
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕೂಡ ಅಮೃತ್‌ಪಾಲ್ ಸಿಂಗ್ ಅಸಮಾಧಾನ ಹೊರಹಾಕಿದ್ದಾನೆ. “ಪಂಜಾಬ್ ನಾಗರಿಕರನ್ನು ಬಂಧಿಸುವ ಮೂಲಕ ರಾಜ್ಯಕ್ಕೆ ಪ್ರಧಾನಿಯವರು ದ್ರೋಹ ಮಾಡಿದ್ದಾರೆ. ನನ್ನ ಸಂಬಂಧಿಕರನ್ನು ಅಸ್ಸಾಂಗೆ ಕಳುಹಿಸಲಾಗಿದೆ. ಇದು ಅಕ್ಷಮ್ಯವಾಗಿದ್ದು, ಎಲ್ಲರನ್ನೂ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು” ಎಂದು ವಾರಿಸ್ ಪಂಜಾಬ್ ದೇ ಮುಖ್ಯಸ್ಥನೂ ಆದ ಅಮೃತ್‌ಪಾಲ್ ಸಿಂಗ್ ಹೇಳಿದ್ದಾನೆ.
ಪಾಕಿಸ್ತಾನದ ಲಷ್ಕರೆ ತಯ್ಬಾ, ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ನಂಟು ಹೊಂದಿರುವ ಅಮೃತ್‌ಪಾಲ್ ಸಿಂಗ್ ಮಾರ್ಚ್ 18ರಿಂದಲೂ ತಲೆಮರೆಸಿಕೊಂಡು ತಿರುಗಾಡುತ್ತಿದ್ದಾನೆ. ಈತನ ಬಂಧನಕ್ಕೆ ರಾಜ್ಯಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿದರೂ, ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಿ ಯೋಜನೆ ರೂಪಿಸಿದರೂ ಆತನ ಬಂಧನ ಸಾಧ್ಯವಾಗಿಲ್ಲ. ಆದಾಗ್ಯೂ, ಅಮೃತ್‌ಪಾಲ್ ಸಿಂಗ್ ಶರಣಾಗುತ್ತಾನೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: Amritpal Singh: ತ್ರಿಚಕ್ರ ವಾಹನದಲ್ಲಿ ಬೈಕ್ನೊಂದಿಗೆ ಕುಳಿತ ಅಮೃತ್‌ಪಾಲ್ ಸಿಂಗ್; ಇನ್ನೊಂದು ಫೋಟೋ ವೈರಲ್