ಚಂಡೀಗಢ: ಖಲಿಸ್ತಾನಿಗಳ ನಾಯಕ, ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ ಅಮೃತ್‌ಪಾಲ್ ಸಿಂಗ್ (Amritpal Singh) ಬಂಧನಕ್ಕೆ ಒಂದು ವಾರದಿಂದ ಪಂಜಾಬ್ ಪೊಲೀಸರು ಹರಸಾಹಸಪಡುತ್ತಿದ್ದಾರೆ. ಮಾರ್ಚ್ 18ರಿಂದಲೂ ಪೊಲೀಸರು ಅಮೃತ್‌ಪಾಲ್‌ಗಾಗಿ ಶೋಧ ನಡೆಸುತ್ತಿದ್ದರೂ ಇದುವರೆಗೂ ಆತನನ್ನು ಬಂಧಿಸಲು ಸಾಧ್ಯವಾಗಿಲ್ಲ. ಇದು ಗುಪ್ತಚರ ವೈಫಲ್ಯ ಎಂದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಛೀಮಾರಿ ಹಾಕಿದರೂ ಇದುವರೆಗೆ ಬಂಧಿಸಲು ಆಗಿಲ್ಲ. ಇದರ ಬೆನ್ನಲ್ಲೇ, ಅಮೃತ್‌ಪಾಲ್ ಸಿಂಗ್ ಪಂಜಾಬ್‌ನ ಪಟಿಯಾಲದಲ್ಲಿಯೇ ಓಡಾಡಿಕೊಂಡಿದ್ದ ವಿಡಿಯೊ ಈಗ ಲಭ್ಯವಾಗಿದೆ.
ಪಂಜಾಬ್‌ನ ಪಟಿಯಾಲದಲ್ಲಿ ಅಮೃತ್‌ಪಾಲ್ ಸಿಂಗ್ ಬಿಂದಾಸ್ ಆಗಿ ಓಡಾಡಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಗೆಯೇ, ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಾಕೆಟ್ ಧರಿಸಿ, ಡಾರ್ಕ್ ಸನ್‌ಗ್ಲಾಸ್ ಧರಿಸಿ, ಪಟಿಯಾಲದ ರಸ್ತೆಗಳಲ್ಲಿಯೇ ಅಮೃತ್‌ಪಾಲ್ ಸಿಂಗ್ ಓಡಾಡಿಕೊಂಡಿದ್ದಾನೆ. ಮಾರ್ಚ್ 19ರಿಂದ 22ರವರೆಗಿನ ಸಿಸಿಟಿವಿ ದೃಶ್ಯಾವಳಿ ಇದಾಗಿದ್ದು, ಮಾರ್ಚ್ 19ರಂದು ಆತ ಪಟಿಯಾಲದಲ್ಲೇ ತಿರುಗಾಡುತ್ತಿದ್ದ ಎಂದು ತಿಳಿದುಬಂದಿದೆ.
ಇಲ್ಲಿದೆ ಸಿಸಿಟಿವಿ ದೃಶ್ಯ
ಅಮೃತ್‌ಪಾಲ್ ಸಿಂಗ್‌ನ 100ಕ್ಕೂ ಅಧಿಕ ಆಪ್ತರನ್ನು ಇದುವರೆಗೆ ಬಂಧಿಸಲಾಗಿದೆ. ಅದರಲ್ಲೂ, ಸಿಂಗ್‌ಗೆ ಮನೆಯಲ್ಲಿ ಆಶ್ರಯ ನೀಡಿದ ಬಲ್ಜಿತ್ ಕೌರ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ನಾಕೋಡರ್ ಬಳಿ ತಪ್ಪಿಸಿಕೊಂಡು ಹೋದ ಅಮೃತ್‌ಪಾಲ್ ಸಿಂಗ್ ಮತ್ತು ಆತನ ಇನ್ನೊಬ್ಬ ಸಹಚರ ಪಾಪಲ್ಪ್ರೀತ್ ಸಿಂಗ್‌ಗೆ ಈಕೆ ತನ್ನ ಮನೆಯಲ್ಲಿ ಭಾನುವಾರ ರಾತ್ರಿ ಉಳಿಯಲು ಅವಕಾಶ ಕೊಟ್ಟಿದ್ದಳು ಎಂಬ ಕಾರಣಕ್ಕೆ ಪೊಲೀಸರು ಬಂಧಿಸಿದ್ದಾರೆ. ಬಲ್ಜಿತ್ ಕೌರ್ ಮನೆ ಇರುವುದು ಹರ್ಯಾಣದ ಕುರುಕ್ಷೇತ್ರದ ಶಾಹಾಬಾದ್ನಲ್ಲಿ. ಹರ್ಯಾಣ ಪೊಲೀಸರು ಆಕೆಯನ್ನು ಬಂಧಿಸಿ, ಬಳಿಕ ಪಂಜಾಬ್ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.
ಅಮೃತ್‌ಪಾಲ್ ಸಿಂಗ್ ಶರಣಾಗಬೇಕು ಎಂದು ಆತನ ಆಪ್ತ ಹರ್‌ಜಿತ್ ಸಿಂಗ್ ಒತ್ತಾಯಿಸಿದ್ದಾನೆ. “ಇಂದಲ್ಲ ನಾಳೆ ಖಂಡಿತವಾಗಿಯೂ ನಮ್ಮನ್ನು ಬಂಧಿಸಲಾಗುತ್ತದೆ. ಹೀಗಿದ್ದಾಗ ತಲೆಮರೆಸಿಕೊಂಡು ತಿರುಗಾಡುವುದು ಸರಿಯಲ್ಲ. ನಾವು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಪೊಲೀಸರಿಗೆ ಶರಣಾಗಬಹುದು. ಇದರಿಂದ ನಮಗೇ ಅನುಕೂಲವಾಗುತ್ತದೆ. ಎಲ್ಲರೂ ಬಾಯಿಮುಚ್ಚಿಕೊಂಡಿರಲು ಸಾಧ್ಯವಾಗುತ್ತದೆ. ನಾವು ಮಾಧ್ಯಮಗಳನ್ನು ಸಂಪರ್ಕಿಸೋಣ. ಬಳಿಕ ಶೂರರಂತೆ ಶರಣಾಗೋಣ. ಎಲ್ಲ ಕಡೆ ಕ್ಯಾಮೆರಾಗಳು ಇರುವುದರಿಂದ ನಾವು ಪ್ರತಿದಿನ ತಪ್ಪಿಸಿಕೊಂಡು ತಿರುಗಾಡಲು ಆಗುವುದಿಲ್ಲ” ಎಂಬುದಾಗಿ ಪಂಜಾಬಿಯಲ್ಲಿ ಆಡಿಯೊ ಮೆಸೇಜ್ ಕಳುಹಿಸಿದ್ದಾನೆ.
ಪಂಜಾಬ್‌ನಲ್ಲಿ ಗಲಭೆಗೆ ಪ್ರಚೋದನೆ, ಲಷ್ಕರೆ ತಯ್ಬಾ ಸೇರಿ ಹಲವು ಉಗ್ರ ಸಂಘಟನೆಗಳ ಜತೆ ನಂಟು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ಸಂಪರ್ಕ ಸೇರಿ ಹಲವು ಪ್ರಕರಣಗಳಲ್ಲಿ ಅಮೃತ್‌ಪಾಲ್ ಸಿಂಗ್ ಮೋಸ್ಟ್ ವಾಂಟೆಡ್ ಎನಿಸಿದ್ದಾನೆ. ಮೊದಲು ಕಾರು, ನಂತರ ಬೈಕ್, ಇದಾದ ಬಳಿಕ ಗೂಡ್ಸ್ ಗಾಡಿಯಲ್ಲಿ ಅಮೃತ್‌ಪಾಲ್ ಸಿಂಗ್ ಪರಾರಿಯಾಗಿದ್ದಾನೆ.
ಇದನ್ನೂ ಓದಿ: Amritpal Singh: ಹೇಡಿಯಂತೆ ಓಡಬೇಡ, ಶೂರನಂತೆ ಶರಣಾಗು; ಅಮೃತ್‌ಪಾಲ್‌ಗೆ ಆಪ್ತನಿಂದಲೇ ಛೀಮಾರಿ