ಗುಜರಾತ್: ಚಾಕೊಲೇಟ್ ಪ್ರಿಯರು ನೀವಾಗಿದ್ದರೆ ನಿಮಗೆ ಒಂದು ಬೇಸರದ ಸುದ್ದಿ. ಎಲ್ಲರ ಮೆಚ್ಚಿನ ಅಮೂಲ್ ಚಾಕೊಲೇಟ್ (Amul Chocolates) ದರ ಏರಿಕೆಯಾಗಲಿದ್ದು ಶೀಘ್ರದಲ್ಲೇ ಹೊಸ ದರ ಜಾರಿಯಾಗಲಿದೆ. ಇದಕ್ಕೆ ಮುಖ್ಯ ಕಾರಣ ಚಾಕೊಲೇಟ್ ತಯಾರಿಸಲು ಬಳಕೆಯಾಗುವ ಕೋಕೋ ಬೀನ್ಸ್ (cocoa beans) ಬೆಲೆ ಗಗನಕ್ಕೆ ಏರಿರುವುದು. ಹೀಗಾಗಿಯೇ ಅಮೂಲ್ ಕಂಪೆನಿಯು ತಯಾರಿಸುವ ಚಾಕಲೇಟ್ ಗಳ ದರಗಳನ್ನು ಹೆಚ್ಚಿಸಲು ನಿರ್ಧರಿಸಿದೆ.
ಭಾರತದಲ್ಲಿ (india) ಪ್ರತಿ ಕಿಲೋಗ್ರಾಂ ಕೋಕೋ ಬೀನ್ಸ್ ಬೆಲೆ ಸುಮಾರು 150- 250 ರೂ. ಗಳಿಂದ 800 ರೂ. ಗೆ ಹೆಚ್ಚಳವಾಗಿದೆ. ಕೋಕೋ ಬೆಲೆಯಲ್ಲಿನ ಈ ಏರಿಕೆ ಬಿಸಿ ಪ್ರಪಂಚದಾದ್ಯಂತ ಚಾಕಲೇಟ್ ತಯಾರಕರಿಗೆ ತಟ್ಟಿದೆ. ಹೀಗಾಗಿ ಚಾಕಲೇಟ್ ಬೆಲೆಗಳನ್ನು ಹೆಚ್ಚಿಸುವ ಅಥವಾ ಚಾಕೊಲೇಟ್ ಉತ್ಪನ್ನಗಳ ಗಾತ್ರವನ್ನು ಕಡಿಮೆ ಮಾಡಲು ಹಲವಾರು ಕಂಪೆನಿಗಳು ಯೋಜನೆ ಮಾಡುತ್ತಿದೆ.
ಕೋಕೋ ಬೀನ್ಸ್
ಚಾಕೊಲೇಟ್ ನಲ್ಲಿ ಬಳಕೆಯಾಗುವ ಕೋಕೋ ಬೀನ್ಸ್ ಚಾಕೊಲೇಟ್ ಗೆ ಪರಿಮಳ ಮತ್ತು ಸ್ವಾದವನ್ನು ಕೊಡುತ್ತದೆ. ಚಾಕೊಲೇಟ್ ಗೆ ಇದನ್ನು ಪುಡಿ, ಪೇಸ್ಟ್ ಅಥವಾ ಬೆಣ್ಣೆಯ ರೂಪದಲ್ಲಿ ಮಾಡಿ ಹಾಕಲಾಗುತ್ತದೆ. ಚಾಕೊಲೇಟ್ ಬಾರ್ಗಳನ್ನು ತಯಾರಿಸಲು ವೆನಿಲ್ಲಾದಂತಹ ಇತರ ಪದಾರ್ಥಗಳೊಂದಿಗೆ ಸಕ್ಕರೆ ಮತ್ತು ಕೋಕೋ ಬೆಣ್ಣೆಯನ್ನು ಸೇರಿಸಲಾಗುತ್ತದೆ. ಹೀಗಾಗಿ ಕೋಕೋ ಬೆಲೆ ಚಾಕಲೇಟ್ ಕಂಪೆನಿಗಳಿಗೆ ಭಾರಿ ಹೊಡೆತವನ್ನು ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: Money Guide : ತಿಂಗಳಿಗೆ 12 ಸಾವಿರಕ್ಕೂ ಹೆಚ್ಚು ಪಿಂಚಣಿ; ಎಲ್ಐಸಿ ಪರಿಚಯಿಸಿದೆ ಹೊಸ ಯೋಜನೆ
ಐಸ್ ಕ್ರೀಮ್ ಮೇಲೂ ಪರಿಣಾಮ
ಕೇವಲ ಚಾಕೊಲೇಟ್ ತಯಾರಕರು ಮಾತ್ರವಲ್ಲದೆ ಐಸ್ ಕ್ರೀಮ್ ತಯಾರಕರಿಗೂ ಇದರ ಬಿಸಿ ತಟ್ಟಲಿದೆ. ಬಾಸ್ಕಿನ್ ರಾಬಿನ್ಸ್ ಮತ್ತು ಸ್ನ್ಯಾಕಿಂಗ್ ಬ್ರ್ಯಾಂಡ್ ಕೆಲ್ಲನೋಕಾ ಸೇರಿದಂತೆ ಡೈರಿ ಸಂಸ್ಥೆಗಳು ಹೆಚ್ಚಿನ ಕೋಕೋ ಬೆಲೆಗಳಿಂದಾಗಿ ಈಗಾಗಲೇ ಸಂಕಷ್ಟ ಅನುಭವಿಸುತ್ತಿದೆ.
ಗುಜರಾತ್ ನ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (ಜಿಸಿಎಂಎಂಎಫ್) ಒಡೆತನದ ಅಮೂಲ್ , ತನ್ನ ಚಾಕೊಲೇಟ್ಗಳ ಬೆಲೆಯನ್ನು ಶೇ. 10- 20ರಷ್ಟು ಹೆಚ್ಚಿಸುವ ಬಗ್ಗೆ ಯೋಚಿಸುತ್ತಿದೆ ಎನ್ನಲಾಗಿದೆ.
ಸದ್ಯಕ್ಕೆ ಅಮೂಲ್ ಐಸ್ ಕ್ರೀಮ್ ಮತ್ತು ಪಾನೀಯಗಳ ಬೆಲೆಯನ್ನು ಹೆಚ್ಚಿಸದೇ ಇರಲು ನಿರ್ಧರಿಸಿದೆ. ಚಾಕೊಲೇಟ್ ಬೆಲೆ ಹೆಚ್ಚಳ ಅವುಗಳ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವ ನಿರೀಕ್ಷೆ ಇದೆ ಎಂದು ಕಂಪೆನಿ ಹೇಳಿದೆ.
ಯುಎಸ್ ನ ಐಸ್ ಕ್ರೀಂ ಬ್ರ್ಯಾಂಡ್ ಬಾಸ್ಕಿನ್ ರಾಬಿನ್ಸ್ , ಹಾವ್ಮೋರ್ ಸದ್ಯ ತನ್ನ ಬೆಲೆಗಳನ್ನು ಸ್ಥಿರವಾಗಿರಿಸಲು ನಿರ್ಧರಿಸಿದ್ದು, ಆದರೆ ಮುಂದಿನ ದಿನಗಳಲ್ಲಿ ಅವುಗಳೂ ಬೆಲೆ ಹೆಚ್ಚಿಸಲು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಚಾಕಲೇಟ್ ನಿಂದ ಆರೋಗ್ಯಕ್ಕೆ ಹಲವು ಲಾಭ
ಚಾಕಲೇಟ್ ತಿಂದರೆ ತೂಕ ಹೆಚ್ಚುತ್ತದೆ, ಹಲ್ಲು ಹಾಳಾಗುತ್ತದೆ ಎನ್ನುವ ದೂರುಗಳು ಇದ್ದರೂ ಚಾಕೊಲೇಟ್ ಎಲ್ಲರಿಗೂ ಇಷ್ಟವಾಗುತ್ತದೆ. ಇದಕ್ಕೆ ಇನ್ನೊಂದು ಕಾರಣವೂ ಇದೆ ಚಾಕಲೇಟ್ ತಿನ್ನುವುದರಿಂದ ಆರೋಗ್ಯಕ್ಕೂ ಲಾಭವಿದೆ.
ಇದಕ್ಕೆ ಕಾರಣ ಚಾಕಲೇಟ್ ನಲ್ಲಿರುವ ಕೋಕೋ. ಇದು ಪಾಲಿಫೆನೋಲ್ಗಳು ಮತ್ತು ಫ್ಲೆವನಾಯ್ಡ್ಗಳು ಉರಿಯೂತ ತಗ್ಗಿಸುತ್ತವೆ.
ಹೃದಯದ ಆರೋಗ್ಯಕ್ಕೂ ಡಾರ್ಕ್ ಚಾಕಲೇಟ್ಗಳು ಪೂರಕವಾಗಿದೆ. ಕೋಕೋದಲ್ಲಿರುವ ಫ್ಲೆವನಾಯ್ಡ್ಗಳು ಹೃದಯದ ಕ್ಷಮತೆಯನ್ನು ಹೆಚ್ಚಿಸಬಲ್ಲವು. ದೇಹದಲ್ಲಿ ಜಮೆಯಾಗಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ. ರಕ್ತದೊತ್ತಡ ಹೆಚ್ಚದಂತೆ ಕಾಪಾಡಿ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
ಸೆರೊಟೋನಿನ್ ಮತ್ತು ಎಂಡಾರ್ಫಿನ್ ಚೋದಕಗಳ ಉತ್ಪಾದನೆಯನ್ನು ದೇಹದಲ್ಲಿ ಪ್ರಚೋದಿಸುವಂಥ ಸಾಮರ್ಥ್ಯ ಕೋಕೋ ದಲ್ಲಿದೆ. ಉತ್ತಮ ಗುಣಮಟ್ಟದ ಕೋಕೋ ಹೊಂದಿರುವ ಡಾರ್ಕ್ ಚಾಕಲೇಟ್ಗಳು ಮೂಡ್ ಸುಧಾರಿಸಿ, ಸಂತೋಷದ ಭಾವಗಳನ್ನು ಹೆಚ್ಚಿಸುತ್ತವೆ. ಹಲವು ರೀತಿಯ ಖನಿಜಗಳು ಕೋಕೋದಲ್ಲಿದೆ. ಅದರಲ್ಲೂ ಮೆಗ್ನೀಶಿಯಂ, ಕಬ್ಬಿಣ ಮತ್ತು ಪೊಟಾಶಿಯಂ ಸತ್ವಗಳು ಅತ್ಯಧಿಕವಾಗಿದೆ. ಇದು ನರ ಮತ್ತು ಸ್ನಾಯುಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ.
ಅಲ್ಲದೇ ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಿ ರಕ್ತದೊತ್ತಡ ನಿಯಂತ್ರಿಸುವಲ್ಲಿ ಸಹಾಯ ಮಾಡುವುದು.
ಚಾಕಲೇಟ್ ನಲ್ಲಿರುವ ಫ್ಲೆವನಾಯ್ಡ್ಗಳು ಮೆದುಳಿನ ಚುರುಕುತನ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನೆನಪು ಹೆಚ್ಚಿಸುವಲ್ಲಿ ಮತ್ತು ಕಲಿಯುವಿಕೆಯನ್ನು ಉತ್ತೇಜಿಸುವಲ್ಲಿ ಇವು ನೆರವಾಗುತ್ತವೆ.