Site icon Vistara News

ಅಮುಲ್ vs ನಂದಿನಿ ಬೆನ್ನಲ್ಲೇ ತಮಿಳುನಾಡಿನಲ್ಲಿ ಆವಿನ್ vs ಅಮುಲ್! ಕೇಂದ್ರಕ್ಕೆ ಸ್ಟಾಲಿನ್ ಪತ್ರ, ಏನಿದು ವಿವಾದ?

Amul v/s Aavin conflict intensify in Tamil Nadu and Stalin write letter to Amit Shah

#image_title

ಚೆನ್ನೈ, ತಮಿಳುನಾಡು: ವಿಧಾನಸಭೆ ಚುನಾವಣೆ ಪೂರ್ವ ಕರ್ನಾಟಕದಲ್ಲಿ ಅಮುಲ್ ವರ್ಸಸ್ ನಂದಿನಿ (Amul v/s Nandini) ಹೋರಾಟ ಜೋರಾಗಿತ್ತು. ಗುಜರಾತ್ ಮೂಲದ ಅಮುಲ್ ಕರ್ನಾಟಕದ ಕೆಎಂಎಫ್‌(ನಂದಿನಿ) ಸ್ವಾಧೀನ ಮಾಡಿಕೊಳ್ಳಲಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು. ವಾಸ್ತವದಲ್ಲಿ, ಇದು ಕೂಡ ಚುನಾವಣೆಯ ವಿಷಯವಾಗಿತ್ತು! ಕರ್ನಾಟಕದಲ್ಲಿ ಅಮುಲ್ ವರ್ಸಸ್ ನಂದಿನಿ ವಿವಾದವು ಸದ್ಯಕ್ಕೆ ಶಾಂತವಾಗಿದೆ. ಆದರೆ, ನೆರೆಯ ತಮಿಳುನಾಡಿನಲ್ಲಿ ಅಮುಲ್ ವರ್ಸಸ್ ಆವಿನ್ (Amul v/s Aavin) ಸಂಘರ್ಷ ಶುರುವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (MK Stalin) ಅವರು ಕೇಂದ್ರ ಗೃಹ ಸಚಿವರೂ ಆಗಿರುವ ಸಹಕಾರ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಅವಿನ್ ಹಾಲು ಉತ್ಪಾದನಾ ಪ್ರದೇಶದಿಂದ ಅಮುಲ್ ಹಾಲು ಸಂಗ್ರಹಣೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಲು ಅಮಿತ್ ಶಾ ಅವರಿಗೆ ಸ್ಟಾಲಿನ್ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ತಮಿಳುನಾಡು ಸಿಎಂ ಸ್ಟಾಲಿನ್ ಅವರು ಗೃಹ ಸಚಿವ ಶಾ ಅವರಿಗೆ ಪತ್ರ ಬರೆದಿದ್ದಾರೆ

ಇತ್ತೀಚೆಗೆ ಕೈರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಅಮುಲ್) ಕೃಷ್ಣಗಿರಿ ಜಿಲ್ಲೆಯಲ್ಲಿ ಶೀತಲೀಕರಣ ಕೇಂದ್ರಗಳು ಮತ್ತು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ತಮ್ಮ ಬಹು-ರಾಜ್ಯ ಸಹಕಾರಿ ಪರವಾನಗಿಯನ್ನು ಬಳಸಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ರಾಜ್ಯದ ಕೃಷ್ಣಗಿರಿ, ಧರ್ಮಪುರಿ, ವೆಲ್ಲೂರು, ರಾಣಿಪೇಟೆ, ತಿರುಪತ್ತೂರ್, ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಎಫ್‌ಪಿಒಎಸ್ ಮತ್ತು ಎಸ್‌ಎಚ್‌ಜಿಎಸ್ ಮೂಲಕ ಹಾಲನ್ನು ಸಂಗ್ರಹಿಸಲು ಯೋಜಿಸಿದೆ ಎಂಬ ಅಂಶವನ್ನು ಪತ್ರದ ಮೂಲಕ ಸ್ಟಾಲಿನ್ ಅವರು ಶಾ ಅವರ ಗಮನಕ್ಕೆ ತಂದಿದ್ದಾರೆ.

ಭಾರತದಲ್ಲಿ ಸಹಕಾರಿ ಸಂಸ್ಥೆಗಳು ಪರಸ್ಪರರ ಹಾಲು ಉತ್ಪಾದನಾ ಪ್ರದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳದೇ ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡುವುದು ರೂಢಿಯಾಗಿದೆ. ಈ ರೀತಿಯ ಅಡ್ಡದಾರಿಯ ಸಂಗ್ರಹಣೆಯು ‘ಆಪರೇಷನ್ ವೈಟ್ ಫ್ಲಡ್’ನ ಮನೋಭಾವಕ್ಕೆ ವಿರುದ್ಧವಾಗಿದೆ. ದೇಶದಲ್ಲಿ ಚಾಲ್ತಿಯಲ್ಲಿರುವ ಹಾಲಿನ ಕೊರತೆಯ ಸನ್ನಿವೇಶದಲ್ಲಿ ಗ್ರಾಹಕರಿಗೆ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ ಎಂದು ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಅಮುಲ್‌ನ ನಡೆಯು ದಶಕಗಳಿಂದ ನಿಜವಾದ ಸಹಕಾರ ಮನೋಭಾವದಿಂದ ಬೆಳೆದಿರುವ ಆವಿನ್ ಹಾಲಿನ ಉತ್ಪಾದನೆಯ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಅಮುಲ್‌ನ ಈ ಕ್ರಮವು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಂಗ್ರಹಿಸುವ ಮತ್ತು ಮಾರಾಟ ಮಾಡುವ ಸಹಕಾರಿ ಸಂಸ್ಥೆಗಳ ನಡುವೆ ಅನಾರೋಗ್ಯಕರ ಸ್ಪರ್ಧೆಯನ್ನು ಸೃಷ್ಟಿಸುತ್ತದೆ ಎಂದು ಎಂದು ಎಂ ಕೆ ಸ್ಟಾಲಿನ್ ಅವರು ಹೇಳಿದ್ದಾರೆ.

ಇದನ್ನೂ ಓದಿ: Nandini vs Amul: ಬೆಂಗಳೂರಲ್ಲಿ ಅಮುಲ್ ಹಾಲು, ಉತ್ಪನ್ನಗಳನ್ನು ಬೀದಿಗೆಸೆದು ಕರವೇ ಪ್ರತಿಭಟನೆ

ಆವಿನ್ ಹಾಲು ಉತ್ಪಾದನಾ ಪ್ರದೇಶದಲ್ಲಿ ಅಮುಲ್ ತಕ್ಷಣದಿಂದಲೇ ಹಾಲು ಸಂಗ್ರಹಣೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿರುವ ತಮಿಳುನಾಡಿನ ಸಿಎಂ ಎಂ ಕೆ ಸ್ಟಾಲಿನ್ ಅವರು, ಈ ಸಂಬಂಧ ಅಮುಲ್‌ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version