ನವ ದೆಹಲಿ: ಕಾಂಗ್ರೆಸ್ ಹಿರಿಯ, ಜಿ23 ಗುಂಪಿನ ನಾಯಕ ಆನಂದ ಶರ್ಮಾ ಅವರು ಜೂ.7ರ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ಅದರ ಬೆನ್ನಲ್ಲೇ ಆನಂದ್ ಶರ್ಮಾ ಬಿಜೆಪಿ ಸೇರ್ಪಡೆಯಾಗುತ್ತಾರಾ ಎಂಬುದೊಂದು ಪ್ರಶ್ನೆ ಎದ್ದಿದೆ. ಆನಂದ್ ಶರ್ಮಾ ಹಿಮಾಚಲ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾದವರು. ಹಿಮಾಚಲ ಪ್ರದೇಶದಲ್ಲಿ ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಆನಂದ್ ಶರ್ಮಾ ಅವರು ಜೆಪಿ ನಡ್ಡಾರನ್ನು ಭೇಟಿಯಾಗಿದ್ದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಮತ್ತೊಬ್ಬ ಕಾಂಗ್ರೆಸ್ ನಾಯಕ ಬಿಜೆಪಿ ಸೇರುವ ಪ್ರಯತ್ನದಲ್ಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಕಾಂಗ್ರೆಸ್‌ನ ಜಿ 23 ಗುಂಪು ಪಕ್ಷದಿಂದ ರೆಬಲ್ ಎನ್ನಿಸಿಕೊಂಡಿದೆ. ಇತ್ತೀಚೆಗಂತೂ ಕಾಂಗ್ರೆಸ್ ಪ್ರಮುಖ ನಾಯಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಅದರ ಮಧ್ಯೆ ಆನಂದ್ ಶರ್ಮಾ ಕೂಡ ಬಿಜೆಪಿ ಸೇರುತ್ತಾರೆ ಎಂಬ ಗುಲ್ಲೆದ್ದಿದೆ.
ಆದರೆ ವದಂತಿಯನ್ನು ನಿರಾಕರಿಸಿರುವ ಆನಂದ್ ಶರ್ಮಾ, ʼ ನನಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿಯಾಗಲು ಎಲ್ಲ ಹಕ್ಕೂ ಇದೆ. ಜೆ.ಪಿ.ನಡ್ಡಾ ನನ್ನ ಪಾಲಿಗೆ ಬರೀ ಬಿಜೆಪಿ ಮುಖ್ಯಸ್ಥರಲ್ಲ. ನಾನು ಅವರು ಒಂದೇ ರಾಜ್ಯದವರು. ಒಟ್ಟಿಗೇ ವಿದ್ಯಾಭ್ಯಾಸ ಮಾಡಿದವರು. ನಾನು ಅವರನ್ನು ಭೇಟಿಯಾಗಿದ್ದು ಯಾವುದೇ ರಾಜಕೀಯ ಉದ್ದೇಶಕ್ಕಲ್ಲʼ ಎಂದು ಸ್ಪಷ್ಟನೆ ನೀಡಿದ್ದಾರೆ.
ʼನನಗೆ ಜೆ.ಪಿ. ನಡ್ಡಾರನ್ನು ಭೇಟಿಯಾಗಬೇಕು ಎನ್ನಿಸಿದರೆ, ಬಹಿರಂಗವಾಗಿಯೇ ಹೋಗಿ ಭೇಟಿ ಮಾಡುತ್ತೇನೆ. ಅದರಲ್ಲೇನು ಮುಚ್ಚುಮರೆಯಿದೆ? ನಾನು ಕಾಂಗ್ರೆಸ್‌ನಲ್ಲಿ ಇದ್ದೇನೆ, ಅವರು ಬಿಜೆಪಿಯಲ್ಲಿದ್ದಾರೆ. ನಮ್ಮ ಪಕ್ಷಗಳ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ವೈಯಕ್ತಿಕವಾಗಿ ನಮ್ಮ ಮಧ್ಯೆ ಯಾವುದೇ ಭಿನ್ನಮತ ಇಲ್ಲ. ಸಾಮಾಜಿಕವಾಗಿ ನಾವು ವೈರಿಗಳಲ್ಲʼ ಎಂದು ಹೇಳಿದ್ದಾರೆ. ಈ ಮೂಲಕ ತಾವು ಬಿಜೆಪಿ ಸೇರುವುದಿಲ್ಲ ಎಂಬುದನ್ನು ತಿಳಿಸಿದ್ದಾರೆ. ಅಷ್ಟಾದರೂ ಆನಂದ್ ಶರ್ಮಾ ಈಗಾಗಲೇ ಹಲವು ಬಾರಿ ತಮ್ಮ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಜೆ.ಪಿ.ನಡ್ಡಾರನ್ನು ಭೇಟಿಯಾಗಿದ್ದು ಬಿಜೆಪಿ ಸೇರ್ಪಡೆಗೊಳ್ಳುವುದರ ಮೊದಲ ಹೆಜ್ಜೆ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ; ಟಾಸ್ಕ್‌ಫೋರ್ಸ್ ರಚಿಸಿದ ಸೋನಿಯಾ ಗಾಂಧಿ