ಗಾಂಧಿನಗರ: ವಿಶ್ವದ ಟಾಪ್ ಶ್ರೀಮಂತರಲ್ಲಿ ಒಬ್ಬರಾದ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಪುತ್ರ ಅನಂತ್ ಅಂಬಾನಿ ಹಾಗೂ ಉದ್ಯಮಿ ವಿರೇನ್ ಮರ್ಚಂಟ್ ಅವರ ಪುತ್ರಿ ರಾಧಿಕಾ ಮರ್ಚಂಟ್ ಅವರ ಮದುವೆಯು (Anant Ambani-Radhika Merchant Marriage) ಜುಲೈ 12ರಂದು ನಡೆಯಲಿದೆ. ಇದಕ್ಕೂ ಮೊದಲು ಅಂದರೆ, ಮಾರ್ಚ್ 1ರಿಂದ ಮೂರು ದಿನಗಳ ಕಾಲ ಗುಜರಾತ್‌ನ ಜಾಮ್‌ನಗರದಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯರು, ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ.
ಯಾರಿಗೆಲ್ಲ ಆಹ್ವಾನ?
ವಿವಾಹಪೂರ್ವ ಕಾರ್ಯಕ್ರಮಗಳಿಗೆ ಉದ್ಯಮಿಗಳಿಂದ ಹಿಡಿದು ಸಿನಿಮಾ ಸ್ಟಾರ್‌ಗಳವರೆಗೆ ನೂರಾರು ಗಣ್ಯರಿಗೆ ಮುಕೇಶ್ ಅಂಬಾನಿ ಕುಟುಂಬಸ್ಥರು ಆಹ್ವಾನಿಸಿದ್ದಾರೆ. ಉದ್ಯಮಿಗಳಾದ ಗೌತಮ್ ಅದಾನಿ, ನಂದನ್ ನಿಲೇಕಣಿ, ಅದರ್ ಪೂನಾವಾಲಾ, ಮಂಗಳಂ ಬಿರ್ಲಾ, ಕ್ರೀಡಾ ತಾರೆಯರಾದ ಸಚಿನ್ ತೆಂಡೂಲ್ಕರ್ ಹಾಗೂ ಅವರ ಕುಟುಂಬ, ಎಂ.ಎಸ್.ಧೋನಿ. ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ ಸೇರಿ ಹಲವರಿಗೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಾಲಿವುಡ್ ನಟ-ನಟಿಯರಿಗೂ ಆಮಂತ್ರಣ
ಬಾಲಿವುಡ್ ನಟ-ನಟಿಯರಿಗೂ ಅಂಬಾನಿ ಕುಟುಂಬವು ಆಮಂತ್ರಣ ನೀಡಿದೆ. ಅಮಿತಾಭ್ ಬಚ್ಚನ್ ಹಾಗೂ ಕುಟುಂಬಸ್ಥರು, ಶಾರುಖ್ ಖಾನ್, ಆಮೀರ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್, ಚಂಕಿ ಪಾಂಡೆ, ರಣವೀರ್ ಸಿಂಗ್-ದೀಪಿಕಾ ಪಡುಕೋಣೆ, ರಣಬೀರ್ ಕಪೂರ್-ಆಲಿಯಾ ಭಟ್, ವಿಕ್ಕಿ ಕೌಶಲ್-ಕತ್ರಿನಾ ಕೈಫ್, ಅನಿಲ್ ಕಪೂರ್, ಶ್ರದ್ಧಾ ಕಪೂರ್ ಸೇರಿ ಹಲವರಿಗೆ ಆಹ್ವಾನಿಸಲಾಗಿದೆ. ಹಾಲಿವುಡ್‌ನ ಖ್ಯಾತ ಪಾಪ್ ಗಾಯಕಿ ರಿಹಾನಾ ಅವರನ್ನೂ ಆಮಂತ್ರಿಸಲಾಗಿದೆ ಎಂದು ತಿಳಿದುಬಂದಿದೆ.
ವಿವಾಹಪೂರ್ವ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ
ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯುವ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಅದ್ಧೂರಿ ತಯಾರಿ ನಡೆಯುತ್ತಿದೆ. ಸ್ವತಃ ನೀತಾ ಅಂಬಾನಿ ಅವರು ಈ ಸಿದ್ಧತೆಯ ಉಸ್ತುವಾರಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅಂಬಾನಿ ಕುಟುಂಬದಿಂದ ಗುಜರಾತ್‌ನ ಜಾಮ್ ನಗರದಲ್ಲಿ ಹದಿನಾಲ್ಕು ಹೊಸ ದೇಗುಲಗಳ ಸಮುಚ್ಚಯವನ್ನೇ ನಿರ್ಮಾಣ ಮಾಡಲಾಗಿದೆ. ಸೊಗಸಾಗಿ ಕೆತ್ತನೆ ಮಾಡಿದ ಸ್ತಂಭಗಳು, ಕಲಾಕೃತಿಗಳು, ದೇವ- ದೇವತೆಗಳ ಚಿತ್ರಗಳು, ಮನಮೋಹಕವಾದ ಶಿಲ್ಪಗಳು, ವಾಸ್ತುಶಿಲ್ಪದಿಂದ ಪ್ರೇರಿತವಾದ ಪಾರಂಪರಿಕ ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ: Radhika Merchant : ಭಾವಿ ಸೊಸೆಗೆ ದುಬಾರಿ ಗಿಫ್ಟ್ ಕೊಟ್ಟ ಅಂಬಾನಿ ಕುಟುಂಬ; ಏನೇನಿವೆ ಅದರಲ್ಲಿ?
ಭಾರತದ ಶ್ರೀಮಂತ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಅಸ್ಮಿತೆಯನ್ನು ಈ ದೇವಾಲಯ ಸಮುಚ್ಚಯದ ಎಲ್ಲ ಕಡೆಗಳಲ್ಲಿ ಕಾಣಬಹುದಾಗಿದೆ. ಪರಿಣತರಾದ ಕುಶಲಕರ್ಮಿಗಳು, ಕಲಾವಿದರು ಇದಕ್ಕಾಗಿ ಶ್ರಮಿಸಿದ್ದಾರೆ, ಶ್ರಮಿಸುತ್ತಿದ್ದಾರೆ. ದೇವಾಲಯದ ಕಲಾತ್ಮಕತೆಯನ್ನು ಇನ್ನಷ್ಟು ಸೊಬಗುಗೊಳಿಸುವ ಉದ್ದೇಶದಿಂದ ಸಾಂಪ್ರದಾಯಿಕ ಹಾಗೂ ಹಳೆಯ ತಂತ್ರಗಳನ್ನು ಬಳಸಲಾಗಿದೆ. ಸ್ಥಳೀಯ ಕಲಾವಿದರ ಅದ್ಭುತ ಕೌಶಲ, ಪ್ರತಿಭೆಯನ್ನು ಈ ದೇವಾಲಯ ಸಮುಚ್ಚಯದಲ್ಲಿನ ಕಲಾ ಶ್ರೀಮಂತಿಕೆ ಪ್ರತಿಬಿಂಬಿಸುತ್ತದೆ. ಅದು ಈಗಾಗಲೇ ಗೊತ್ತಿರುವಂತೆ, ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷೆಯೂ ಆದಂಥ ನೀತಾ ಅಂಬಾನಿ ಅವರ ದೃಷ್ಟಿಕೋನವೇ ಸ್ಥಳೀಯ ಕಲಾವಿದರಿಗೆ ಉತ್ತೇಜನ, ಪ್ರೋತ್ಸಾಹ ಹಾಗೂ ಅವರ ಜೀವನೋಪಾಯಕ್ಕೆ ಸೂಕ್ತ ಅನುಕೂಲ ಮಾಡಿಕೊಡುವುದಾಗಿದೆ. ಅದರ ಜತೆಗೆ ಭಾರತೀಉ ಪರಂಪರೆ, ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಕಾಪಾಡುವುದು ಹಾಗೂ ಪ್ರಚಾರ ಮಾಡುವುದಾಗಿದೆ. ಇಲ್ಲಿ ಆಗುತ್ತಿರುವ ಕೆಲಸಗಳು ಅವರ ದೃಷ್ಟಿಕೋನಕ್ಕೆ ಪೂರಕವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ