ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಮದುವೆಯು (Anant Ambani Wedding) ಅದ್ಧೂರಿಯಾಗಿ ನೆರವೇರಿಸಿದೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ (Radhika Merchant) ಅವರು ಹಾರ ಬದಲಾಯಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದೇಶ-ವಿದೇಶಗಳ ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು, ರಾಜಕಾರಣಿಗಳ ಸಮ್ಮುಖದಲ್ಲಿ ನವ ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ
ಸತಿ-ಪತಿಗಳಾಗಿ ವಿವಾಹ ಮಂಟಪದಲ್ಲಿ ನಿಂತಿರುವ ಈ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಪರಸ್ಪರ ವೈವಾಹಿಕ ಬದುಕಿನ ಎಲ್ಲಾ ಜವಾಬ್ದಾರಿ ನಿಭಾಯಿಸುವುದಾಗಿ ವಾಗ್ದಾಣ ಮಾಡಿದ್ದಾರೆ. ನಮ್ಮ ಮನೆಗ ಕೇವಲ ಮನೆಯಾಗಿರುವುದಿಲ್ಲ. ಅದು ಪ್ರೀತಿ ಮತ್ತು ಸಹಬಾಳ್ವೆಯಿಂದ ಕೂಡಿರುವ ಸ್ಥಳವಾಗಿರುತ್ತದೆ. ಯಾವ ಸಂದರ್ಭದಲ್ಲೂ ನಾವು ಜೊತೆಯಾಗಿಯೇ ಇರುತ್ತೇವೆ ಎಂದು ರಾಧಿಕಾ ಬಹಳ ಭಾವನಾತ್ಮಕವಾಗಿ ಪ್ರಾಮಿಸ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅನಂತ್ ಕೂಡ ನೆಚ್ಚಿನ ಮಡದಿಗೆ ಅನೇಕ ಭರವಸೆಗಳನ್ನು ನೀಡಿದ್ದಾರೆ.
“ಶ್ರೀ ಕೃಷ್ಣನ ಆಶೀರ್ವಾದದೊಂದಿಗೆ ನಾನಿವತ್ತು ನಿನಗೆ ಮಾತು ಕೊಡುತ್ತಿದ್ದೇನೆ. ನಾವಿಬ್ಬರೂ ನಮ್ಮ ಕನಸಿನಂತೆಯೇ ಮನೆಯನ್ನು ಪ್ರೀತಿ ಮತ್ತು ವಿಶ್ವಾಸದಿಂದ ತುಂಬೋಣ. ನಮ್ಮ ಮನೆ ಕೇವಲ ಒಂದು ಸ್ಥಳವಾಗಿರುವುದಿಲ್ಲ. ನಾವು ಎಲ್ಲೇ ಇದ್ದರೂ ಅದೊಂದು ಪ್ರೀತಿಯ ತಾಣವಾಗಿರುತ್ತದೆ ಎಂದು ಹೇಳಿದ್ದಾರೆ. ಇವರಿಬ್ಬರ ಈ ಸ್ಪೆಶಲ್ ಪ್ರಾಮಿಸ್ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಅನಂತ್ ಅಂಬಾನಿ ಮದುವೆಯಲ್ಲಿ ನಟ-ನಟಿಯರು, ಕ್ರಿಕೆಟಿಗರು, ಬೇರೆ ದೇಶಗಳ ನಾಯಕರಿಂದ ಹಿಡಿದು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಮಹೇಂದ್ರ ಸಿಂಗ್ ಧೋನಿ, ಅಮಿತಾಭ್ ಬಚ್ಚನ್, ಆಲಿಯಾ ಭಟ್, ರಣವೀರ್ ಸಿಂಗ್, ರಣಬೀರ್ ಕಪೂರ್, ಅನನ್ಯಾ ಪಾಂಡೆ, ರಜನಿಕಾಂತ್, ಮಹೇಶ್ ಬಾಬು, ಹಾರ್ದಿಕ್ ಪಾಂಡ್ಯ, ಐಶ್ವರ್ಯಾ ರೈ, ದಿಶಾ ಪಟಾಣಿ, ಹೃತಿಕ್ ರೋಷನ್, ವರುಣ್ ಧವನ್, ಬ್ರಿಟನ್ ಮಾಜಿ ಪ್ರಧಾನಿಗಳಾದ ಬೋರಿಸ್ ಜಾನ್ಸನ್, ಟೋನಿ ಬ್ಲೇರ್ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.
ಇನ್ನು ಮದುವೆ ಆಗಮಿಸಿದ ಸಾವಿರಾರು ಗಣ್ಯರಿಗೆ ಅಂಬಾನಿ ಕುಟುಂಬಸ್ಥರು ಭರ್ಜರಿ ಭೋಜನ ಹಾಕಿಸಿದ್ದಾರೆ. ಅದರಲ್ಲೂ, ಬೆಂಗಳೂರಿನಲ್ಲಿರುವ, ಖ್ಯಾತ ರಾಮೇಶ್ವರಂ ಕೆಫೆಯ ಹಲವು ತಿನಿಸುಗಳು ಕೂಡ ಮದುವೆ ಮನೆಯ ಊಟದ ಸಾಲಿಗೆ ಸೇರಿವೆ.
ಹೌದು, ಅನಂತ್ ಹಾಗೂ ರಾಧಿಕಾ ಮದುವೆಯ ಭೋಜನದ ಮೆನು ಈಗ ಲಭ್ಯವಾಗಿದ್ದು, ರಾಮೇಶ್ವರಂ ಕೆಫೆಯ ಹಲವು ತಿನಿಸುಗಳು ಕೂಡ ಇದರ ಭಾಗವಾಗಿವೆ. ರಾಮೇಶ್ವರಂ ಕೆಫೆಯ ದೋಸೆ, ಬಟರ್ ದೋಸೆ, ತುಪ್ಪದ ದೋಸೆ, ಗಾರ್ಲಿಕ್ ದೋಸೆ, ಪೆಸರಟ್ಟು ದೋಸೆ, ಇಡ್ಲಿ, ತಟ್ಟೆ ಇಡ್ಲಿ (ಪ್ಲೇನ್ & ಪೋಡಿ), ತುಪ್ಪದ ಪಡ್ಡು, ಬೋಂಡಾ ಸೂಪ್ ಹಾಗೂ ಫಿಲ್ಟರ್ ಕಾಫಿಯನ್ನು ಮದುವೆಯ ಭೋಜನದಲ್ಲಿ ಬಡಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:Aishwarya Rai: ಅಂಬಾನಿ ಮದುವೆಯಲ್ಲಿ ಕುಟುಂಬದ ಜತೆ ಪೋಸ್ ಕೊಡದ ಐಶ್ವರ್ಯಾ ರೈ; ಡಿವೋರ್ಸ್ ನಿಜವೇ?