ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani Wedding) ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚಂಟ್ ಅವರ ಪುತ್ರಿ ರಾಧಿಕಾ ಮರ್ಚಂಟ್ (Radhika Merchant) ಅವರ ವೈಭವೋಪೇತ ವಿವಾಹವು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಿತು. ಈ ವೇಳೆ ನೀತಾ ಅಂಬಾನಿ(Nita Ambani) ಬಹಳ ವಿಶೇಷ ರೀತಿಯಲ್ಲಿ ಮದುವೆ ಮಂಟಪಕ್ಕೆ ಆಗಮಿಸಿದ್ದಾರೆ. ನೀತಾ ಅಂಬಾನಿ ಕೈಯಲ್ಲಿ ಸಾಂಪ್ರದಾಯಿಕ ರಮನ್ ದಿವೋ ದೀಪ ಹಿಡಿದು ಆಗಮಿಸಿರುವುದು ಎಲ್ಲರ ಗಮನ ಸೆಳೆದಿದೆ.
ಕಿರಿಯ ಮಗ ಅನಂತ್ ಅಂಬಾನಿ ಮದುವೆ ಸಮಾರಂಭದಲ್ಲಿ ನೀತಾ ಅಂಬಾನಿ ಕೈಯಲ್ಲಿದ್ದ ವಿಶೇಷ ದೀಪವೊಂದು ಎಲ್ಲರ ಗಮನ ಸೆಳೆದಿತ್ತು. ಅನೇಕರಿಗೆ ಇದು ಏನು ಎಂಬುದು ಬಹುದೊಡ್ಡ ಪ್ರಶ್ನೆಯಾಗಿತ್ತು. ಇದೇ ದೀಪವನ್ನು ಹಿಡಿದು ನೀತಾ ಫೋಟೋಗೂ ಫೋಸ್ ಕೊಟ್ಟಿದ್ದರು. ಅವರ ಜೊತೆ ಮುಖೇಶ್ ಅಂಬಾನಿ, ಪುತ್ರ ಆಕಾಶ್ ಅಂಬಾನಿ, ಸೊಸೆ ಶ್ಲೋಕಾ ಮೆಹ್ತಾ ಹಾಗೂ ಅವರ ಮಕ್ಕಳು, ಇಶಾ ಅಂಬಾನಿ, ಅವರ ಪತಿ ಆನಂದ್ ಪೀರಾಮಲ್ ಕೂಡ ಇದ್ದರು.
ನೀತಾ ಅಂಬಾನಿ ಕೈಯಲ್ಲಿ ಇದ್ದಿದ್ದೇನು?
ನೀತಾ ಅಂಬಾನಿ ತಮ್ಮ ಕೈಯಲ್ಲಿ ರಮನ್ ದಿವೋವನ್ನು ಹಿಡಿದಿದ್ದರು. ಅಂದರೆ ಇದೊಂದು ಸಾಂಪ್ರದಾಯಿಕ ದೀಪವಾಗಿದೆ. ಗುಜರಾತಿ ಮದುವೆಗಳಲ್ಲಿ ಇದು ಅತಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಇದನ್ನು ವರನ ತಾಯಿ ಕೈಯಲ್ಲಿ ಹಿಡಿದು ಮದುವೆ ಮಂಟಪಕ್ಕೆ ಆಗಮಿಸುತ್ತಾರೆ. ಇದು ನವ ವಧು-ವರರ ಮೇಲಿನ ಎಲ್ಲಾ ಕತ್ತಲೆಯನ್ನು ಹೋಗಲಾಡಿಸುತ್ತದೆ ಎಂದು ನಂಬಲಾಗುತ್ತದೆ. ಇನ್ನು ಚಿನ್ನದಿಂದ ಮಾಡಲಾಗಿದ್ದ ಈ ದೀಪದಲ್ಲಿ ಗಣಪತಿಯ ಮೂರ್ತಿ ಇದ್ದು, ಬಹಳ ಆಕರ್ಷಕವಾಗಿತ್ತು.
ಅದ್ಧೂರಿ ವಿವಾಹ ಸಮಾರಂಭಕ್ಕೆ ಅಂದಾಜು ವೆಚ್ಚ 4,000ರಿಂದ 5000 ಕೋಟಿ ರೂ. ಎನ್ನಲಾಗಿದೆ. ಇದು ಅವರ ನಿವ್ವಳ ಆದಾಯದ ಶೇ. 0.5ರಷ್ಟು ಮಾತ್ರ! ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಅವರ ನಿವ್ವಳ ಆದಾಯ ಮೌಲ್ಯವು 7.65 ಲಕ್ಷ ಕೋಟಿ ರೂ. ಆಗಿದೆ. ಮಾರ್ಚ್‌ನಲ್ಲಿ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು. ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಜಾಗತಿಕ ಗಾಯನ ಐಕಾನ್‌ಗಳಾದ ಜಸ್ಟಿನ್ ಬೀಬರ್, ರಿಹಾನ್ನಾ, ದಿಲ್ಜಿತ್ ದೋಸಾಂಜ್ ಸೇರಿದಂತೆ ಹಾಲಿವುಡ್-ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.