Site icon Vistara News

Anant Radhika Wedding: ಅಂಬಾನಿ ಮದುವೆ ಪ್ರಯುಕ್ತ ನಿತ್ಯ 9,000 ಜನರಿಗೆ ಊಟ!

ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ (mukesh ambani) ಮತ್ತು ನೀತಾ ಅಂಬಾನಿ (nita ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ (Anant Radhika Wedding) ಸಂಭ್ರಮಾಚರಣೆಯ ಝಲಕ್‌ಗಳು ​​ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಮಾಡುತ್ತಿವೆ. ಈ ನಡುವೆ ಅಂಬಾನಿ ಕುಟುಂಬದ ನಿವಾಸ ಆಂಟಿಲಿಯಾದಲ್ಲಿ (Antilia) ಪ್ರತಿದಿನ 9,000 ಜನರಿಗೆ ಆಹಾರ ನೀಡಲಾಗುತ್ತಿದ್ದು, ಇದರ ವಿಡಿಯೋ ವೈರಲ್ ಆಗಿವೆ.

ಡಿಸೈನರ್ ಬಟ್ಟೆಗಳು, ಹೊಳೆಯುವ ಆಭರಣಗಳಿಂದ ಹಿಡಿದು ಅಂತಾರಾಷ್ಟ್ರೀಯ ತಾರೆಯರ ಆಗಮನದವರೆಗೆ ಶ್ರೀಮಂತ ಕುಟುಂಬದ ಮದುವೆಯ ಸಂಭ್ರಮವನ್ನು ನೋಡಿ ಜನ ಪುಳಕಿತರಾಗುತ್ತಿದ್ದಾರೆ. ಇದೀಗ ಇದರ ನಡುವೆಯೇ ಅನಂತ್ ಅಂಬಾನಿಯವರು ಆಯೋಜಿಸಿರುವ ಭಂಡಾರ ಕಾರ್ಯಕ್ರಮದಲ್ಲಿ ಪ್ರತಿದಿನ 9,000 ಜನರಿಗೆ ಎರಡು ಹೊತ್ತು ಆಹಾರವನ್ನು ನೀಡಲಾಗುತ್ತಿದೆ.

ಮುಂಬಯಿನಲ್ಲಿರುವ ಅಂಬಾನಿ ಕುಟುಂಬದ ನಿವಾಸ ಆಂಟಿಲಿಯಾದಲ್ಲಿ ʼಭಂಡಾರʼ ನಡೆಯುತ್ತಿದೆ. ಇದು ಅನಂತ್ ಮತ್ತು ರಾಧಿಕಾ ಅವರ ವಿವಾಹದವರೆಗೆ 40 ದಿನಗಳವರೆಗೆ ಮುಂದುವರಿಯುತ್ತದೆ. ಪ್ರತಿದಿನ ಸಾವಿರಾರು ಜನರಿಗೆ ಊಟ ನೀಡಲಾಗುತ್ತದೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋ ಭಂಡಾರದ ಕೊನೆಯ ದಿನ ಜುಲೈ 15ಎಂದು ಬಹಿರಂಗಪಡಿಸಿದೆ. ಇದು ಜೂನ್ 5 ರಂದು ಪ್ರಾರಂಭವಾಯಿತು. ಈ ವಿಡಿಯೋದಲ್ಲಿ ಬಡಿಸಿದ ಆಹಾರದ ವಿವರಗಳನ್ನು ಹಂಚಿಕೊಳ್ಳಲಾಗಿದೆ.

ದಿನಕ್ಕೆ ಎರಡು ಬಾರಿ ಸಾರ್ವಜನಿಕರಿಗೆ ಇಲ್ಲಿ ಊಟವನ್ನು ವಿತರಿಸಲಾಗುತ್ತಿದೆ. ಒಂದು ಸಮಯದಲ್ಲಿ ಸುಮಾರು 3,000ರಿಂದ 4,000 ಜನರು ಊಟ ಮಾಡಬಹುದು. ಈ ಔತಣದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಅನಂತ್ ಅಂಬಾನಿ ಅವರ ಮುಂಬರುವ ವಿವಾಹಕ್ಕೆ ಆಶೀರ್ವಾದ ಮತ್ತು ಅಭಿನಂದನೆಗಳನ್ನು ನೀಡುತ್ತಿದ್ದಾರೆ ಎಂದು ಮೇಲ್ವಿಚಾರಕರು ಹೇಳಿದ್ದಾರೆ.


ಸಾರ್ವಜನಿಕರಿಗೆ ತರಕಾರಿ ಪುಲಾವ್, ಗಟ್ಟೆ ಕಿ ಸಬ್ಜಿ, ಪನೀರ್ ಸಬ್ಜಿ, ರಾಯಿತಾ ಮತ್ತು ಧೋಕ್ಲಾ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ನೀಡಲಾಗುತ್ತಿದೆ.

ಇದರ ಮಹತ್ವವೇನು?

ಹಿಂದೂ ಧರ್ಮದಲ್ಲಿ ಬಡವರಿಗೆ ಆಹಾರವನ್ನು ನೀಡುವುದನ್ನು ಪುಣ್ಯದ ಕಾರ್ಯವೆಂದು ಪರಿಗಣಿಸಲಾಗಿದೆ. ಮದುವೆಯಂತಹ ಮಹತ್ವದ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ʼಭಂಡಾರʼವನ್ನು ನಡೆಸಲಾಗುತ್ತದೆ. ಈ ಭಂಡಾರವನ್ನು ಅಂಬಾನಿ ಕುಟುಂಬ ತಮ್ಮ ಸಂತೋಷವನ್ನು ಸಮುದಾಯದೊಂದಿಗೆ ಹಂಚಿಕೊಳ್ಳುವ ಮಾರ್ಗವಾಗಿ ಬಳಸಿಕೊಳ್ಳುತ್ತಿದೆ.


ವಿವಾಹಗಳು ಸಂತೋಷದಾಯಕ ಘಟನೆ. ಈ ವೇಳೆ ʼಭಂಡಾರʼವನ್ನು ಆಯೋಜಿಸುವುದರಿಂದ ದಂಪತಿ ತಮ್ಮ ಸಂತೋಷವನ್ನು ಬಡವರೊಂದಿಗೆ ಹಂಚಿಕೊಂಡಂತಾಗುತ್ತದೆ. ಅವರ ಆಶೀರ್ವಾದಗಳಿಗೆ ಕೃತಜ್ಞತೆಯನ್ನು ತೋರಿಸಲು ಅನುವು ಮಾಡಿಕೊಡುತ್ತದೆ. ದಂಪತಿ ತಮ್ಮ ವೈವಾಹಿಕ ಜೀವನವನ್ನು ಪ್ರಾರಂಭಿಸುವಾಗ ದಾನ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಎನ್ನುತ್ತದೆ ಅಂಬಾನಿ ಕುಟುಂಬದ ಮೂಲಗಳು.

ಇದನ್ನೂ ಓದಿ: Anant Radhika Wedding: ನಿಶ್ಚಿತಾರ್ಥದಿಂದ ಮದುವೆಯವರೆಗೆ; ಹೀಗಿತ್ತು ಅಂಬಾನಿ ಮಗನ ಮದುವೆಯ ಗತ್ತು!

ʼಭಂಡಾರʼದ ಮೆನುವಿನಲ್ಲಿ ಪೌಷ್ಟಿಕ ಮತ್ತು ಆರೋಗ್ಯಕರ ಊಟಕ್ಕೆ ಮಹತ್ವ ನೀಡಲಾಗಿದೆ. ಕೆಲವು ಕುಟುಂಬಗಳಲ್ಲಿ ವಿವಾಹದ ಮೊದಲು ದತ್ತಿ ಚಟುವಟಿಕೆಗಳನ್ನು ಆಯೋಜಿಸುವುದು ಕುಟುಂಬ ಸಂಬಂಧಗಳನ್ನು ಬಲಪಡಿಸುವ ಮತ್ತು ಅವರ ಪರಂಪರೆಯನ್ನು ಗೌರವಿಸುವ ಸಂಪ್ರದಾಯವಾಗಿದೆ. ಅಂಬಾನಿ ಕುಟುಂಬ ಇದನ್ನು ಪಾಲಿಸಿದೆ.

Exit mobile version