Site icon Vistara News

Hate Speech Row | ಸಮಾಜ ವಿಭಜಕ ಟಿವಿ ಆ್ಯಂಕರ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ, ಸುಪ್ರೀಂ ಕೋರ್ಟ್‌ ಸೂಚನೆ

Supreme Court On Hate Speech

ನವದೆಹಲಿ: ದೇಶದಲ್ಲಿ ದ್ವೇಷ ಭಾಷಣ ಮಾಡುವ (Hate Speech Row) ರಾಜಕಾರಣಿಗಳು ಮಾತ್ರವಲ್ಲ, ಟಿವಿ ಚಾನೆಲ್‌ಗಳ ಆ್ಯಂಕರ್‌ಗಳ ವಿರುದ್ಧವೂ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಹಾಗೆಯೇ, ಸಮಾಜ ವಿಭಜನೆ ಮಾಡುವ, ದ್ವೇಷ ಸಾರುವ ಟಿವಿ ಆ್ಯಂಕರ್‌ಗಳನ್ನು ಕಾರ್ಯಕ್ರಮಗಳಿಂದಲೇ ದೂರವಿಡಿ ಎಂದು ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರಕ್ಕೆ (NBSA) ಸೂಚಿಸಿದೆ.

ದ್ವೇಷ ಭಾಷಣ ನಿಯಂತ್ರಣ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್‌ ಮತ್ತು ಬಿ.ವಿ ನಾಗರತ್ನ ಅವರ ಪೀಠವು, ಟಿವಿ ಚಾನೆಲ್‌ಗಳ ಆ್ಯಂಕರ್‌ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. “ಸುದ್ದಿ ಪ್ರಸಾರ ಮಾಡುವ ಚಾನೆಲ್‌ಗಳು ರೋಚಕವಾಗುತ್ತಿವೆ. ಹಣ ಹೂಡುವವರ ಆಣತಿಯಂತೆ ಆ್ಯಂಕರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಸಮಾಜದ ಇಬ್ಭಾಗವಾಗುತ್ತಿದೆ” ಎಂದು ಹೇಳಿತು.

“ವಾಕ್‌ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು ನಿಜ. ಆದರೆ, ಅದು ಮಿತಿ ಮೀರಬಾರದು. ಸಮಾಜವನ್ನು ಇಬ್ಭಾಗ ಮಾಡುವಂತಹ ಕಾರ್ಯಕ್ರಮಗಳು, ದ್ವೇಷ ಭಾಷಣ ಮಾಡುವ ಆ್ಯಂಕರ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅವರಿಗೆ ದಂಡ ವಿಧಿಸುವುದಾದರೆ ದಂಡ ವಿಧಿಸಿ, ಇಲ್ಲವೇ ಅಂತಹ ಕಾರ್ಯಕ್ರಮಗಳಿಂದಲೇ ದೂರವಿಡಿ” ಎಂದು ಎನ್‌ಬಿಎಸ್‌ಎಗೆ ಸೂಚಿಸಿತು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌, “ದ್ವೇಷ ಭಾಷಣವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (CRPC)ಗೆ ಸಮಗ್ರ ತಿದ್ದುಪಡಿ ತರಲು ಚಿಂತನೆ ನಡೆದಿದೆ” ಎಂದು ತಿಳಿಸಿದರು.

ಇದನ್ನೂ ಓದಿ | Azam Khan | ದ್ವೇಷ ಭಾಷಣ ಕೇಸ್‌ನಲ್ಲಿ ಜೈಲು ಶಿಕ್ಷೆ ಬೆನ್ನಲ್ಲೇ ಶಾಸಕ ಸ್ಥಾನ ಕಳೆದುಕೊಂಡ ಅಜಂ ಖಾನ್‌

Exit mobile version