ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ನಿರ್ಮಾಣ ಕಾರ್ಯವು ಕೊನೆಯ ಹಂತಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22ರಂದು ರಾಮಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ರಾಮಮಂದಿರ ನಿರ್ಮಾಣ ಕಾರ್ಯವು ಶರವೇಗದಲ್ಲಿ ಸಾಗುತ್ತಿದೆ. ಇದರ ಬೆನ್ನಲ್ಲೇ, ರಾಮಮಂದಿರ ನಿರ್ಮಾಣವಾಗುತ್ತಿರುವ ಜಾಗದಲ್ಲಿ ಉತ್ಖನನ ನಡೆಸುವಾಗ ದೇವರ ಮೂರ್ತಿಗಳು, ದೇವಸ್ಥಾನದ ಕಂಬಗಳು ಸೇರಿ ಹಲವು ವಸ್ತುಗಳು ದೊರೆತಿವೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಉತ್ಖನನದ ವೇಳೆ ಸಿಕ್ಕ ಮೂರ್ತಿ, ಕಂಬಗಳ ಫೋಟೊ ಹಂಚಿಕೊಂಡಿದ್ದಾರೆ. “ರಾಮ ಜನ್ಮಭೂಮಿಯಲ್ಲಿ ನಡೆಸಿದ ಉತ್ಖನನದ ವೇಳೆ ಮೂರ್ತಿಗಳು, ಸ್ತಂಭಗಳು ದೊರೆತಿವೆ” ಎಂದು ಬರೆದುಕೊಂಡಿದ್ದಾರೆ. ಇದರಿಂದಾಗಿ ಮಸೀದಿ ನಿರ್ಮಾಣಕ್ಕೂ ಮೊದಲು ಅಯೋಧ್ಯೆಯಲ್ಲಿ ದೇವಾಲಯ ಇತ್ತು ಎಂಬುದು ಮತ್ತೊಮ್ಮೆ ದೃಢಪಟ್ಟಂತಾಗಿದೆ.
श्री रामजन्मभूमि पर खुदाई में मिले प्राचीन मंदिर के अवशेष। इसमें अनेकों मूर्तियाँ और स्तंभ शामिल हैं। pic.twitter.com/eCBPOtqE1W
— Champat Rai (@ChampatRaiVHP) September 12, 2023
ನರೇಂದ್ರ ಮೋದಿ ಅವರಿಂದ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರು 2024ರ ಜನವರಿ 22ರಂದು ರಾಮಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಮಮಂದಿರ ಲೋಕಾರ್ಪಣೆಗೆ ಈಗಾಗಲೇ ಭರದ ಸಿದ್ಧತೆಗಳು ಆರಂಭವಾಗಿದೆ ಎಂದೂ ತಿಳಿದುಬಂದಿದೆ. “ಜನವರಿ 21ರಿಂದ 24ರವರೆಗೆ ಒಳ್ಳೆಯ ಮುಹೂರ್ತಗಳಿವೆ. ಈ ದಿನಾಂಕದಲ್ಲೇ ರಾಮಮಂದಿರ ಲೊಕಾರ್ಪಣೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಜನವರಿ 21ರಿಂದ 24ರ ಅವಧಿಯಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಮ್ಮತಿ ಬಳಿಕ ಜನವರಿ 14ರಿಂದ ಅಂತಿಮ ಸಿದ್ಧತೆ ಕೈಗೊಳ್ಳಲಾಗುತ್ತದೆ” ಎಂದು ರಾಮಮಂದಿರ ಟ್ರಸ್ಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.
ರಾಮಮಂದಿರ ಲೋಕಾರ್ಪಣೆಗೂ ಮೊದಲು ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ರಾಮಲಲ್ಲಾನನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ರಾಮಮಂದಿರದ ಲೋಕಾರ್ಪಣೆ ವೇಳೆ ನಾಲ್ಕು ದಿನ ವಿಶೇಷ ಪೂಜೆ ಮಾಡಲಾಗುತ್ತದೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ. ಈಗಾಗಲೇ ಗರ್ಭಗುಡಿ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಹೆಚ್ಚಿನ ಕಾರ್ಮಿಕರು ಮಂದಿರ ನಿರ್ಮಾಣ ಕಾರ್ಯದಲ್ಲಿ ಹಗಲು ರಾತ್ರಿ ಎನ್ನದೆ ತೊಡಗಿದ್ದಾರೆ.
ಇದನ್ನೂ ಓದಿ: Ram Mandir: 2024ರ ಜನವರಿ 22ಕ್ಕೆ ರಾಮಮಂದಿರ ಲೋಕಾರ್ಪಣೆ; ಮೋದಿಯಿಂದಲೇ ಚಾಲನೆ, 4 ದಿನ ಪೂಜೆ
ಕಾರ್ಯಕ್ರಮ ಆಯೋಜನೆ ಉಸ್ತುವಾರಿ ಆರ್‌ಎಸ್‌ಎಸ್ ಹೆಗಲಿಗೆ
ರಾಮಲಲ್ಲಾನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶದ 5 ಲಕ್ಷ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತೀರ್ಮಾನಿಸಿದೆ. ಅಲ್ಲದೆ, ಎಲ್ಲ ಕಾರ್ಯಕ್ರಮಗಳ ಉಸ್ತುವಾರಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ವಹಿಸಿದೆ. ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕರೆ ನೀಡಿದ್ದಾರೆ.