ಅಮರಾವತಿ, ಆಂಧ್ರ ಪ್ರದೇಶ: ಬೋಯಾ (Boya) ಮತ್ತು ವಾಲ್ಮೀಕಿ (Valmiki) ಸಮುದಾಯ ಹಾಗೂ ದಲಿತ ಕ್ರೈಸ್ತರನ್ನು ಸೆಳೆಯಲು ಮುಂದಾಗಿರುವ ಆಂಧ್ರ ಪ್ರದೇಶದ ಸಿಎಂ ವೈ ಎಸ್ ಜಗನ್‌ಮೋಹನ್ ರೆಡ್ಡಿ ಅವರು ಹೊಸ ದಾಳ ಉರುಳಿಸಿದ್ದಾರೆ. ಬೋಯಾ ಮತ್ತು ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟ ಪಂಗಡ(ST) ಮತ್ತು ದಲಿತ ಕ್ರೈಸ್ತರನ್ನು (Dalit Christians) ಪರಿಶಿಷ್ಟ ಜಾತಿ (SC) ಪಟ್ಟಿಗೆ ಸೇರ್ಪಡೆ ಮಾಡಲು ಆಂಧ್ರ ಪ್ರದೇಶ ವಿಧಾನಸಭೆ (Andhra assembly) ನಿರ್ಣಯವನ್ನು ಅಂಗೀಕರಿಸಿದೆ. ತಿಂಗಳ ಹಿಂದೆ, ಕೆ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರವು ಇದೇ ರೀತಿಯ ನಿರ್ಣಯವನ್ನು ಅಂಗೀಕರಿಸಿತ್ತು. ಆ ಮೂಲಕ, ಅವಿಭಜಿತ ಆಂಧ್ರಪ್ರದೇಶ ಮಹತ್ವದ ಕಾರ್ಡ್ ಪ್ಲೇ ಮಾಡಿದೆ. ಆಂಧ್ರ ವಿಧಾನಸಭೆ ಅಂಗೀಕರಿಸಿರುವ ನಿರ್ಣಯಗಳನ್ನು ಕೇಂದ್ರ ಸರ್ಕಾರ ಕಳುಹಿಸಿ ಕೊಡಲಾಗುವುದು ಎಂದು ಆಂಧ್ರ ಸಿಎಂ ಜಗನ್‌ಮೋಹನ್ ರೆಡ್ಡಿ (Chief Minister YS Jaganmohan Reddy) ಅವರು ಹೇಳಿದ್ದಾರೆ.
ವಿಧಾನಸಭೆ ಚುನಾವಣಾ ಪೂರ್ವ ವೈ ಎಸ್ ಜಗನ್‌ಮೋಹನ್ ರೆಡ್ಡಿ ಅವರು ರಾಜ್ಯಾದ್ಯಂತ ಪಾದಯಾತ್ರೆಯನ್ನು ಕೈಗೊಂಡಿದ್ದರು. ಈ ವೇಳೆ, ಬೋಯಾ ಮತ್ತು ವಾಲ್ಮೀಕಿ ಸಮುದಾಯಗಳು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮನವಿ ಮಾಡಿಕೊಂಡಿದ್ದವು. ಅವರಿಗೆ ಆಗ ನೀಡಿದ್ದ ಭರವಸೆಯನ್ನು ಈಗ ಈಡೇರಿಸಲು ಅವರು ಮುಂದಾಗಿದ್ದಾರೆ. ರಾಯಲ್ ಸೀಮಾ ಜಿಲ್ಲೆಗಳಲ್ಲಿ ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಅಧ್ಯಯನಕ್ಕೆ ಏಕ ಸದಸ್ಯ ಆಯೋಗವನ್ನು ರಚಿಸಲಾಗಿತ್ತು. ಆಯೋಗ ನೀಡಿದ ವರದಿಯನ್ನು ಆಧರಿಸಿ, ಈಗ ವಿಧಾನಸಭೆ ನಿರ್ಣಯವನ್ನು ಅಂಗೀಕರಿಸಿದೆ ಎಂದು ಅವರು ತಿಳಿಸಿದ್ದಾರೆ. ಬೋಯಾ ಮತ್ತು ವಾಲ್ಮೀಕಿ ಸಮುದಾಯದ ಸೇರ್ಪಡೆ ಮಾಡುವುದರಿಂದ ಈಗಾಗಲೇ ಎಸ್‌ಟಿಯಲ್ಲಿರುವ ಸಮುದಾಯಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ದಲಿತರು ಕ್ರೈಸ್ತ್ ಮತಕ್ಕೆ ಮತಾಂತರವಾದ ಕೂಡಲೇ ಅವರ ಸ್ಥಿತಿಗತಿಗಳೇನೂ ಬದಲಾಗುವುದಿಲ್ಲ. ಹಾಗಾಗಿ, ಅವರನ್ನು ಎಸ್‌ಸಿ ಪಟ್ಟಿಗೆ ಸೇರ್ಪಡೆ ಮಾಡುವುದು ಸಾಮಾಜಿಕ ನ್ಯಾಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ದಲಿತ ಕ್ರೈಸ್ತರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡುವ ಸಂಬಂಧ, ಜಗನ್‌ಮೋಹನ್ ಅವರ ತಂದೆ ದಿ. ವೈ ಎಸ್ ರಾಜಶೇಖರ್ ರೆಡ್ಡಿ ಅವರ ಆಡಳಿತದಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಈಗ ಮತ್ತೆ ಅದೇ ನಿರ್ಣಯವನ್ನು ವೈ ಎಸ್ ಜಗನ್‌ಮೋಹನ್ ರೆಡ್ಡಿ ನೇತೃತ್ವ ಸರ್ಕಾರವು ಅಂಗೀಕರಿಸಿದೆ. ಈ ಮೂಲಕ ಮಹತ್ವದ ಹೆಜ್ಜೆಯನ್ನು ಇಡಲಾಗಿದೆ. ಆದರೆ, ಆಂಧ್ರ ಪ್ರದೇಶದ ಕೈಗೊಂಡಿರು ನಿರ್ಣಯಗಳಿಗೆ ಕೇಂದ್ರ ಸರ್ಕಾರವು ಮಾನ್ಯತೆ ನೀಡಲಿದೆಯೇ ಎಂದು ಕಾದು ನೋಡಬೇಕು.