Site icon Vistara News

Andhra Politics: ಸಹೋದರ ಜಗನ್‌ಗೆ ಸೆಡ್ಡು ಹೊಡೆದ ಶರ್ಮಿಳಾ; ಆಂಧ್ರಪ್ರದೇಶ ಕಾಂಗ್ರೆಸ್‌ ಸೇರ್ಪಡೆ

YS sharmila rahul

ಹೊಸದಿಲ್ಲಿ: ವೈಎಸ್‌ಆರ್ ತೆಲಂಗಾಣ ಪಕ್ಷದ (YSR Telangana Party) ಸಂಸ್ಥಾಪಕ ಅಧ್ಯಕ್ಷೆ, ಆಂಧ್ರಪ್ರದೇಶ ಮುಖ್ಯಮಂತ್ರಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ (YSR Congress Party chief Jagan Mohan Reddy) ಅವರ ಸಹೋದರಿ ವೈಎಸ್ ಶರ್ಮಿಳಾ (YS Sharmila) ಅವರು ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಸೇರಲಿದ್ದಾರೆ (Andhra Politics) ಎಂದು ಮೂಲಗಳು ತಿಳಿಸಿವೆ.

ಅವರು ಗುರುವಾರ ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂದು ವೈಎಸ್‌ಆರ್ ತೆಲಂಗಾಣ ಪಕ್ಷದ ಮೂಲಗಳು ತಿಳಿಸಿವೆ. ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ರಾಜ್ಯದಲ್ಲಿ ಭಾರತ್ ರಾಷ್ಟ್ರ ಸಮಿತಿ ಪ್ರಾಬಲ್ಯವನ್ನು ಕೊನೆಗೊಳಿಸಿದ ಕೆಲವೇ ದಿನಗಳಲ್ಲಿ ಇದು ಸಂಭವಿಸಿದೆ.

ಆಂಧ್ರಪ್ರದೇಶದ ಕಾಂಗ್ರೆಸ್ ನೇತೃತ್ವವನ್ನು ಶರ್ಮಿಳಾ ಅವರಿಗೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. ತಮ್ಮ ಸಹೋದರ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಸೆಣಸಲು ಶರ್ಮಿಳಾ ತಯಾರಾಗಿದ್ದಾರೆ. ಮುಂದಿನ ಏಪ್ರಿಲ್‌ ಹೊತ್ತಿಗೆ ಆಂಧ್ರಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆಯಲಿದ್ದು, ವೈಎಸ್ಆರ್ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷವನ್ನು (ಟಿಡಿಪಿ) ಸೋಲಿಸಲು ಕಾಂಗ್ರೆಸ್ ಪಣ ತೊಟ್ಟಿದೆ.

ಮೂಲಗಳ ಪ್ರಕಾರ, ಲೋಕಸಭೆ ಚುನಾವಣೆಯ ಜೊತೆಗೆ ಈ ವರ್ಷ ರಾಜ್ಯ ಚುನಾವಣೆಗೂ ಮುನ್ನ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ನಾಯಕತ್ವವು ಶರ್ಮಿಳಾ ಅವರಿಗೆ ಪ್ರಮುಖ ಪಾತ್ರವನ್ನು ನೀಡಲಿದೆ. ಆಕೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಮಟ್ಟದ ಹುದ್ದೆ ದೊರೆಯಬಹುದು ಎಂದು ತಿಳಿದುಬಂದಿದೆ. ಈ ಕ್ರಮವು ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಪುನಶ್ಚೇತನಗೊಳಿಸುವ ಗುರಿಯನ್ನು ಹೊಂದಿದೆ. ಪ್ರಮುಖ ವಿರೋಧ ಪಕ್ಷ ತೆಲುಗು ದೇಶಂ ಪಕ್ಷ (ಟಿಡಿಪಿ) ತನ್ನ ಪ್ರಭಾವವನ್ನು ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಿದೆ. ಈ ಹೊತ್ತಿಗೆ ವೈಎಸ್‌ಆರ್‌ಸಿಪಿಯನ್ನು ತೊರೆದು ಕಾಂಗ್ರೆಸ್‌ಗೆ ಸೇರಲು ಬಯಸುತ್ತಿರುವವರನ್ನು ಸೇರಿಸಿಕೊಳ್ಳಲು ಪಕ್ಷ ಸಿದ್ಧವಾಗಿದೆ.

ಶರ್ಮಿಳಾ 2012ರಲ್ಲಿ ಸುದ್ದಿಯಾಗಿದ್ದರು. ಆಂಧ್ರಪ್ರದೇಶದಿಂದ ತೆಲಂಗಾಣ ಬೇರ್ಪಡಿಸುವ ಹೋರಾಟದ ಹಿನ್ನಲೆಯಲ್ಲಿ ಆಕೆಯ ಸಹೋದರ ಜಗನ್ ಮೋಹನ್ ರೆಡ್ಡಿ ಕಾಂಗ್ರೆಸ್‌ನಿಂದ ಬೇರ್ಪಟ್ಟು ವೈಎಸ್‌ಆರ್‌ಪಿ ಸ್ಥಾಪಿಸಿದರು. ಅವರೊಂದಿಗೆ 18 ಶಾಸಕರು ಸೇರಿಕೊಂಡರು. ಇದು ಹಲವು ಉಪಚುನಾವಣೆಗಳಿಗೆ ನಾಂದಿ ಹಾಡಿತು. ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿತರಾಗಿ ರೆಡ್ಡಿ ಜೈಲಿನಲ್ಲಿರುವಾಗ ಅವರ ತಾಯಿ ವೈಎಸ್ ವಿಜಯಮ್ಮ ಮತ್ತು ಸಹೋದರಿ ವೈಎಸ್ ಶರ್ಮಿಳಾ ಪ್ರಚಾರದ ನೇತೃತ್ವ ವಹಿಸಿದ್ದರು. 2014ರ ಚುನಾವಣೆಯಲ್ಲಿ ವೈಎಸ್‌ಸಿಆರ್‌ಪಿ ಸೋತರೂ, 2019ರಲ್ಲಿ ಗೆದ್ದಿತ್ತು.

2021ರಲ್ಲಿ ಶರ್ಮಿಳಾ ಅವರು ತಮ್ಮ ಸಹೋದರನೊಂದಿಗೆ ರಾಜಕೀಯ ಭಿನ್ನಾಭಿಪ್ರಾಯ ಹೊಂದಿದರು. ತೆಲಂಗಾಣದಲ್ಲಿ ವೈಎಸ್ಆರ್‌ಸಿಪಿಗೆ ಅಸ್ತಿತ್ವವಿಲ್ಲ ಎಂದರು. ಅದೇ ವರ್ಷ ಜುಲೈನಲ್ಲಿ ಅವರು ವೈಎಸ್ಆರ್ ತೆಲಂಗಾಣ ಪಕ್ಷವನ್ನು ಘೋಷಿಸಿ, ಕೆ. ಚಂದ್ರಶೇಖರ ರಾವ್ ನೇತೃತ್ವದ ಸರ್ಕಾರದ ವಿರುದ್ಧ ಪ್ರಚಾರ ಪ್ರಾರಂಭಿಸಿದರು. ಕಳೆದ ಸಲದ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ, ಕಾಂಗ್ರೆಸ್‌ಗೆ ಪರೋಕ್ಷವಾಗಿ ಬೆಂಬಲ ನೀಡಿದರು.

ಕಾಂಗ್ರೆಸ್ ಮೂಲಗಳ ಪ್ರಕಾರ, ಆಂಧ್ರದಲ್ಲಿ ಪಕ್ಷದ ಮತಗಳಿಕೆ ಕಳೆದ 10 ವರ್ಷಗಳಲ್ಲಿ ಹೀನಾಯವಾಗಿ ಕುಸಿದಿದೆ. ಕೇವಲ ಶೇ.1 ಪ್ರತಿಶತದಷ್ಟು ಮತಬ್ಯಾಂಕ್ ಇದೆ. ಶರ್ಮಿಳಾ ಸೇರ್ಪಡೆಯಿಂದ ಪಕ್ಷಕ್ಕೆ ನೆರವಾಗಬಹುದು ಎಂದು ಭಾವಿಸಲಾಗಿದೆ.

ಇದನ್ನೂ ಓದಿ: Andhra Politics: ಆಂಧ್ರದಲ್ಲಿ ಮಹಾಮೈತ್ರಿ! ಜಗನ್ ವಿರುದ್ಧ ಟಿಡಿಪಿ-ಕಾಂಗ್ರೆಸ್ ದೋಸ್ತಿ?

Exit mobile version